ಬೆಳಗಾವಿ : ಬೆಳಗಾವಿಯ ವಡಗಾವಿ ಯಳ್ಳೂರು ರಸ್ತೆಯಲ್ಲಿ ಶ್ರೀ ಅನ್ನಪೂರ್ಣ ದೇವಿಯ ಭವ್ಯ ದೇಗುಲ ನಿರ್ಮಾಣಗೊಂಡಿದೆ. ದೇವಸ್ಥಾನ ಇದೀಗ ವಾರ್ಷಿಕ ಧಾರ್ಮಿಕ ಮಹೋತ್ಸವಕ್ಕೆ ಅಣಿಯಾಗಿದ್ದು ಸಂಭ್ರಮ ಕಳೆಗಟ್ಟಿದೆ.

ಈ ಸುಂದರ ದೇಗುಲ ನಿರ್ಮಿಸಿದವರು ಬೆಳಗಾವಿಯ ಹೋಟೆಲ್ ಉದ್ಯಮಿ 86 ವರ್ಷದ ರವಿರಾಜ್ ಹೆಗ್ಡೆ. ಮೂಲತಃ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮಿಯ್ಯಾರಿನವರಾದ ರವಿರಾಜ್ ಹೆಗ್ಡೆ ಅವರು 20 ವರ್ಷಗಳ ಹಿಂದೆ ಮೂಡಬಿದಿರೆ ಬಳಿಯ ಪ್ರಸಿದ್ದ ಸುಕ್ಷೇತ್ರ ಕೊಡ್ಯಡ್ಕ ಹೊಸನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ದೇವಿಯ ದರ್ಶನಕ್ಕೆ ಹೋಗಿದ್ದರು. ದೇವಸ್ಥಾನ ಸಂದರ್ಶಿಸಿ ದೇವಿಯ ದರ್ಶನ ಭಾಗ್ಯ ಲಭಿಸಿದಾಗ ರವಿರಾಜ್ ಹೆಗ್ಡೆಯವರಿಗೆ ಮನಸ್ಸಿನಲ್ಲಿ ಒಂದು ಪ್ರೇರಣೆಯಾಯಿತಂತೆ. ತಾನೇಕೆ ಇಂಥ ದೇವಸ್ಥಾನವನ್ನು ಕಟ್ಟಬಾರದೇಕೆ ಎಂಬ ಯೋಚನೆ ಬಂತಂತೆ.

ನಂತರ ಅವರು ಬೆಳಗಾವಿಗೆ ಬಂದು ಈ ಬಗ್ಗೆ ದೃಢ ಚಿಂತನೆ ಮಾಡಿದರು. ದೇವಸ್ಥಾನ ನಿರ್ಮಿಸಲು ಮನಸ್ಸಿನಲ್ಲಿ ಗಟ್ಟಿ ನಿರ್ಧಾರ ತಳೆದರು.
ಹೊಟೇಲು ಉದ್ಯಮದಿಂದ ಸ್ವಲ್ಪ ಸ್ವಲ್ಪವೇ ಹಣ ಸಂಗ್ರಹಿಸಿ ದೇವಸ್ಥಾನ ನಿರ್ಮಾಣದ ಬಗ್ಗೆ ನೀಲನಕ್ಷೆ ತಯಾರಿಸಿದರು. ನಂತರ ಅದರ ನಿರ್ಮಾಣಕ್ಕೆ ಮುಂದಾದರು. ಲಕ್ಷಾಂತರ ರೂ. ವೆಚ್ಚದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನವನ್ನು ನಿರ್ಮಿಸಿದರು.

ದೇವಿಯ ಆಲಯ ನಿರ್ಮಾಣಕ್ಕೆ ತಾವೇ ಸ್ವತಃ ಛಲದಿಂದ ತಮ್ಮ ಮಕ್ಕಳೊಂದಿಗೆ ಸೇರಿ ಸ್ವಂತ ಜಾಗ ಖರೀದಿಸಿ 2013 ರಲ್ಲಿ ಸುಂದರ ದೇಗುಲ ನಿರ್ಮಿಸಿದ್ದಾರೆ.

ಅಂದಿನಿಂದ ವರ್ಷ ವರ್ಷವೂ ದೇವಸ್ಥಾನದಲ್ಲಿ ವಿವಿಧ ಸೇವಾ ಕಾರ್ಯಗಳು ನೆರವೇರುತ್ತವೆ ವರ್ಷಾವಧಿ ಪೂಜೆ, ನವರಾತ್ರಿ ಸೇರಿದಂತೆ ವಿಶೇಷ ದಿನಗಳಲ್ಲಿ ಪೂಜಾ ಕಾರ್ಯಗಳು ನಡೆಯುತ್ತಿದೆ. ಈಗ 11 ನೇ ವರ್ಷದ ವರ್ಷಾವಧಿ ಸೇವೆಯ ಸಂಭ್ರಮ.
ದೇವಸ್ಥಾನಕ್ಕೆ ವರ್ಷವೂ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಜತೆಗೆ ಈ ಭಾಗದಲ್ಲಿ ಕಲ್ಯಾಣ ಮಂಟಪದ ಅವಶ್ಯಕತೆ ಇರುವುದನ್ನು ಮನಗಂಡು ರವಿರಾಜ್ ಹೆಗ್ಡೆಯವರು ಇದೀಗ ದೇವಸ್ಥಾನದ ಪಕ್ಕದಲ್ಲಿ ಜಾಗ ಖರೀದಿ ಮಾಡಿ ಸುಂದರ ಹಾಗೂ ಭವ್ಯ ಕಲ್ಯಾಣ ಮಂಟಪ ನಿರ್ಮಿಸಿ ಈ ಭಾಗದ ಜನತೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಮೂರು ದಿನ ವಿಶೇಷ ಧಾರ್ಮಿಕ ಕಾರ್ಯಕ್ರಮ :
ಬೆಳಗಾವಿ ಯಳ್ಳೂರು ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ನಗರದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 11 ನೇ ವಾರ್ಷಿಕ ಮಹೋತ್ಸವ ಮೇ 29 ರಿಂದ ಮೇ 31 ರವರೆಗೆ ನಡೆಯಲಿದೆ.

ಮೇ 29 ರಂದು ಬೆಳಗ್ಗೆ 6 ಗಂಟೆಗೆ ಶ್ರೀ ಅನ್ನಪೂರ್ಣೇಶ್ವರಿ ಸಹಿತ ಪರಿವಾರ ದೇವರಿಗೆ ಕಲಶಾಭಿಷೇಕ, 8 ಕ್ಕೆ ನಾಗದೇವರ ಬಿಂಬ ಪ್ರತಿಷ್ಠಾಪನೆ, ಕಲಶಾಭಿಷೇಕ ಮಹಾಪೂಜೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸನ್ನ ಪೂಜೆ, ಪ್ರಸಾದ, ಸಂಜೆ 5 ರಿಂದ ರಂಗ ಪೂಜೆ ಶ್ರೀ ದೇವಿಯ ಪಲ್ಲಕ್ಕಿ- ಮೆರವಣಿಗೆ, ದೀಪೋತ್ಸವ ನಡೆಯಲಿದೆ.

ಮೇ 30 ರಂದು ಬೆಳಗ್ಗೆ 7 ಕ್ಕೆ ಸಂಪ್ರೋಕ್ಷಣೆ, ಅನ್ನಪೂರ್ಣೇಶ್ವರಿ ಯಾಗ, ಸುಬ್ರಮಣ್ಯ ದೇವರಿಗೆ ಆಶ್ಲೇಷ ಬಲಿ, 8.30 ಕ್ಕೆ ಮಹಾ ಚಂಡಿಕಾ ಯಾಗ, ಸಂಜೆ 6 ಕ್ಕೆ ಕೀರ್ತನಾಕಾರರಿಂದ ಕೀರ್ತನೆ, ವ್ಯಾಖ್ಯಾನ ನಡೆಯಲಿದೆ.

ಮೇ 31 ರಂದು ಬೆಳಗ್ಗೆ 9 ಕ್ಕೆ ದೇವಿಗೆ ವಿಶೇಷ ಅಲಂಕಾರ, ಪೂಜಾರಾಧನೆ, 10 ಕ್ಕೆ ಭಜನಾ ಮಂಡಳಿಯಿಂದ ಭಜನೆ, ಮಧ್ಯಾಹ್ನ 1 ರಿಂದ 3 ಗಂಟೆವರೆಗೆ ಮಹಾಪ್ರಸಾದ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ರವಿರಾಜ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.