ಬ್ರಹ್ಮಾವರ: ಯಕ್ಷಗಾನ ವಿದ್ಯಾರ್ಥಿಗಳ ವೇದಿಕೆ ಭಯ ನಿವಾರಿಸಿ, ನಿರರ್ಗಳ ಮಾತುಗಾರಿಕೆ ಕಲೆಯನ್ನು ಕಲಿಸುತ್ತದೆ. ಇದು ಯಕ್ಷಗಾನದಿಂದ ಮಾತ್ರ ಸಾಧ್ಯ. ಯಕ್ಷಗಾನದಿಂದ ಶಿಕ್ಷಣಕ್ಕೆ ಯಾವುದೇ ತೊಡಕಾಗದು ಎಂದು ಉದ್ಯಮಿ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ ನಿಗಮದ ನಿರ್ದೇಶಕ ರಾಜೇಶ ಶೆಟ್ಟಿ ಬಿರ್ತಿ ಹೇಳಿದರು.

ಸಾಲಿಕೇರಿ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಸಾಲಿಕೇರಿ ವೀರಭದ್ರ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವ, ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ್‌ ಮಾತನಾಡಿ, ನಾಟ್ಯ, ಅಭಿನಯ, ಮಾತುಗಾರಿಕೆ ಇವುಗಳ ಸಮ್ಮಿಲನ ಯಕ್ಷಗಾನ. ಶೈಕ್ಷಣಿಕ ಚಟುವಟಿಕೆ ಜೊತೆಗೆ ಯಕ್ಷಗಾನ ಕಲಿಕೆ ಉತ್ತಮ ಸಂಸ್ಕಾರ ಬೆಳೆಸುತ್ತದೆ ಎಂದರು.

ಸಾಲಿಕೇರಿ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಸ್‌. ಸುರೇಶ ಶೆಟ್ಟಿಗಾರ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು.

ಮಕ್ಕಳಲ್ಲಿ ಆಂತರಿಕ ಬೆಳವಣಿಗೆ ಹೆಚ್ಚಿಸಲು ಅಗತ್ಯವಿರುವ ಆತ್ಮವಿಶ್ವಾಸ ಯಕ್ಷಗಾನದಿಂದ ಮಾತ್ರ ಸಿಗಲು ಸಾಧ್ಯ ಎಂದರು.

ಭಾನುಮತಿ ಡಿ. ಶೆಟ್ಟಿಗಾರ್, ಬೆಂಗಳೂರು ದ.ಕ. ಜಿಲ್ಲಾ ಪದ್ಮಶಾಲಿ ಸಮಾಜಸೇವಾ ಕೂಟದ ಅಧ್ಯಕ್ಷೆ
ಮದ್ದಲೆ ವಾದಕ ದೇವದಾಸ ರಾವ್ ಕೂಡ್ಲಿ ಅವರಿಗೆ ಈ ಬಾರಿಯ ‘ವೀರಭದ್ರ ಯಕ್ಷ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಸಂಘದ ವಿದ್ಯಾರ್ಥಿಗಳಿಗೆ ದಿ.ವನಿತಾ ಶ್ರೀನಿವಾಸ ಶೆಟ್ಟಿಗಾರ್ ಸ್ಮರಣಾರ್ಥ ವಿದ್ಯಾರ್ಥಿವೇತನ ವಿತರಿಸಲಾಯಿತು. ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಜ್ಯೋತಿ ಕೆ. ಪೂಜಾರಿ ಅವರನ್ನು ಗೌರವಿಸಲಾಯಿತು. ಸಂಘದ ಗುರು ಪ್ರತೀಶ ಕುಮಾರ್ ಬ್ರಹ್ಮಾವರ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ರವಿ ಶೆಟ್ಟಿಗಾರ್ ಕಾರ್ಕಳ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ಎಜಿಎಂ ವಿಠ್ಠಲ ಶೆಟ್ಟಿಗಾರ್ ಸಗ್ರಿ, ಸಂಘದ ಗೌರವಾಧ್ಯಕ್ಷ ರಾಘವ ಶೆಟ್ಟಿಗಾರ್, ಉಪಾಧ್ಯಕ್ಷೆ ಜ್ಯೋತಿ ಕೆ. ಪೂಜಾರಿ, ಯಕ್ಷ ಗುರು ಪ್ರತೀಶ ಕುಮಾರ್ ಬ್ರಹ್ಮಾವರ ಇದ್ದರು.

ಉಪಾಧ್ಯಕ್ಷ ರಜನೀಕಾಂತ ಶೆಟ್ಟಿಗಾರ್ ಸ್ವಾಗತಿಸಿದರು. ಕೋಶಾಧಿಕಾರಿ ಶೈಲಜಾ ಸುಧಾಕರ್ ವಂದಿಸಿದರು. ಗೌರವಾಧ್ಯಕ್ಷ ರಾಘವ ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರಾಜೇಶ ಮಟಪಾಡಿ ನಿರೂಪಿಸಿದರು. ಬಳಿಕ ಸಂಘದ ವಿದ್ಯಾರ್ಥಿಗಳಿಂದ ‘ರಾಣಿ ಶಶಿಪ್ರಭೆ’ ಯಕ್ಷಗಾನ ಪ್ರದರ್ಶನ ನಡೆಯಿತು.