ಬೆಂಗಳೂರು : ಪ್ರಸಕ್ತ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕದ ಸರ್ಕಾರಿ, ಖಾಸಗಿ ಶಾಲಾ ಮಕ್ಕಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಕ್ಟೋಬರ್ 3ರಿಂದ 20ರ ತನಕ ದಸರಾ ರಜೆ ಘೋಷಿಸಿದೆ.

ಈ ಮೊದಲು ದಸರಾ ರಜೆ ವಿಳಂಬ ಆಗುತ್ತಿದ್ದರಿಂದ ಕರಾವಳಿ ಭಾಗದಲ್ಲಿ ದಸರಾ ರಜೆಯಲ್ಲಿ ಕೊಂಚ ಮಾರ್ಪಾಡು ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಯಾವುದೇ ಮಾರ್ಪಾಡು ಮಾಡಿಲ್ಲ. ವಿಶೇಷವಾಗಿ ಈ ವರ್ಷದ ಮಳೆಗಾಲದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ಮಳೆಯ ಬಿಸಿ ತಟ್ಟಿತ್ತು. ವಾರವಿಡಿ ಶಾಲೆಗಳಿಗೆ ರಜೆ ಸಾರಲಾಗಿತ್ತು. ಆದರೆ ಶನಿವಾರ ಸೇರಿದಂತೆ ಇತರ ರಜಾ ದಿನಗಳಲ್ಲಿ ಶಾಲೆಯನ್ನು ನಡೆಸಲಾಗಿತ್ತು. ಇದೀಗ ಶಾಲೆಗಳಿಗೆ ಮಧ್ಯಂತರ ದಸರಾ ರಜೆ ಘೋಷಣೆ ಮಾಡಲಾಗಿದೆ.

ಕರ್ನಾಟಕದ ಎಲ್ಲಾ ಶಾಲೆಗಳು 2024ರ ಶೈಕ್ಷಣಿಕ ವರ್ಷವು ಮೇ 29 ರಿಂದ ಪ್ರಾರಂಭವಾಗಿತ್ತು. ಮೊದಲ ಅವಧಿ ಅಕ್ಟೋಬ‌ರ್ 2ರ ತನಕ ಇರುತ್ತದೆ. ಸೆಪ್ಟೆಂಬರ್ 23 ರಿಂದ ಮಧ್ಯಂತರ ಪರೀಕ್ಷೆ ಆರಂಭವಾಗಿ ತಿಂಗಳ ಕೊನೆಯ ವರೆಗೆ ನಡೆಯಲಿದೆ. ಆ ಬಳಿಕ ಶಾಲಾ ಮಕ್ಕಳಿಗೆ ದಸರಾ ರಜೆ ಶುರುವಾಗಲಿದೆ. ಅಕ್ಟೋಬರ್ 2ರಂದು ಎಲ್ಲಾ ಶಾಲೆಗಳಲ್ಲೂ ಗಾಂಧಿ ಜಯಂತಿ ಆಚರಿಸಿದ ಮರು ದಿನದಿಂದ ಶಾಲಾ ಮಕ್ಕಳಿಗೆ ರಜೆ ಇರಲಿದೆ.

ಅಕ್ಟೋಬ‌ರ್ 3ರಿಂದ 20ರ ತನಕ ಅಂದರೆ 17 ದಿನಗಳ ಕಾಲ ರಜೆ ಸಿಗಲಿದೆ. ಅಕ್ಟೋಬರ್ 21ರಿಂದ 2ನೇ ಅವಧಿ ಪ್ರಾರಂಭವಾಗಲಿದ್ದು, 2025ರ ಏಪ್ರಿಲ್ 10 ತನಕ ನಡೆಯಲಿವೆ. 2024-2025 ರ ಶೈಕ್ಷಣಿಕ ವರ್ಷದ ಮಾರ್ಗದರ್ಶಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲೆಗಳ ಆರಂಭಕ್ಕೂ ಮುನ್ನ ಪ್ರಕಟಣೆ ಹೊರಡಿಸಿತ್ತು. ಅದರ ನಿಯಮಾನುಸಾರದಂತೆ ಘೋಷಣೆಯಾಗಿವೆ.