ಕುಂದಾಪುರ : ಹುತಾತ್ಮರಾದ ಅನೂಪ್ ಪೂಜಾರಿ ಅವರು ತಮ್ಮ ತವರು ಭಾಗದ ಯುವಕರು ಹೆಚ್ಚು ಹೆಚ್ಚು ಭಾರತೀಯ ಸೇನೆಗೆ ಸೇರ್ಪಡೆಯಾಗಬೇಕು ಎಂದು ಬಯಸಿದ್ದ ವಿಷಯ ಈಗ ಬೆಳಕಿಗೆ ಬಂದಿದೆ.
ನಮ್ಮ ಕುಂದಾಪುರ ಭಾಗದಿಂದ ಹೆಚ್ಚು ಹೆಚ್ಚು ಯುವಕರು ಭಾರತೀಯ ಸೇನೆಗೆ ಸೇರಬೇಕು ಎಂಬುವುದು ಅನೂಪ್ ಅವರ ಕನಸಾಗಿತ್ತು. ಈ ಬಗ್ಗೆ ತಮ್ಮ ಅಭಿಲಾಷೆಯನ್ನು ಅವರು ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ವ್ಯಕ್ತಪಡಿಸಿದ್ದರು. ಅವರ ಕೊನೆಯ ಆಸೆ ಎಂದೇ ಭಾವಿಸಿ ಸೇನಾ ಶಿಬಿರ, ತರಬೇತಿ ಕೇಂದ್ರವನ್ನು ತೆರೆಯುವುದಾಗಿ ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ತಿಳಿಸಿದ್ದಾರೆ.
ಅನೂಪ್ ಅವರು ವಿದ್ಯಾಭ್ಯಾಸ ಮಾಡಿದ ಒಕ್ಕೂಟದ ಕೋಟದ ವಿವೇಕ ವಿದ್ಯಾಲಯದ ಮುಂಭಾಗದಲ್ಲೂ ಅಂತಿಮ ನಮನ ಸಲ್ಲಿಸಲಾಯಿತು. ಅನೂಪ್ ಅವರು ವಿದ್ಯಾರ್ಥಿಯಾಗಿದ್ದಾಗಲೇ ದೇಶ ಸೇವೆಯ ಕನಸು ಕಂಡಿದ್ದರು. ಎನ್ ಸಿ ಸಿ ಮೂಲಕ ದೇಶ ಸೇವೆಗೆ ತೊಡಗಲು ಅವರು ಪ್ರೇರಣೆ ಪಡೆದಿದ್ದರು ಎಂದು ಶಿಕ್ಷಕರು ಹೇಳಿದ್ದಾರೆ.