ಬೆಂಗಳೂರು: ಬೆಂಗಳೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯ ಸರಕಾರ ಪೂರಕ ಪ್ರಸ್ತಾವನೆಯನ್ನು ಸಿದ್ದ ಮಾಡಿಕೊಳ್ಳುತ್ತಿದೆ.

ಬೆಂಗಳೂರು ಅಂತರಾಷ್ಟ್ರೀಯ ಮನ್ನಣೆ ಗಳಿಸಿದ ನಗರವಾಗಿದೆ. ಈಗಾಗಲೇ ಒಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದೆ. ಆದರೆ, ಭವಿಷ್ಯದ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ರಾಜ್ಯ ಸರಕಾರ ಮುಂದಾಗಿದ್ದು ನೆಲಮಂಗಲ ಬಳಿ ನೂತನ ಅಂತರಾಷ್ಟ್ರೀಯ ವಿಮಾನ ನಿರ್ಮಿಸುವ ಉದ್ದೇಶವನ್ನು ಸರಕಾರ ಇಟ್ಟುಕೊಂಡಿದೆ. ಇದಕ್ಕೆ ಬೇಕಾದ ಪ್ರಸ್ತಾವನೆಗಳನ್ನು ರಾಜ್ಯ ಸರಕಾರ ಈಗ ತಯಾರಿಸಲು ಮುಂದಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ, ದೇಶದ ವಾಣಿಜ್ಯ ನಗರಿ ಮುಂಬೈಯಲ್ಲಿ ಎರಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ರಾಜ್ಯದ ಅಭಿವೃದ್ಧಿ ದೃಷ್ಟಿಕೋನದಿಂದ ಮೈಸೂರು ರಸ್ತೆ ಹಾಗೂ ಕನಕಪುರ ರಸ್ತೆಗೆ ಸಂಪರ್ಕ ಇರುವ ನೆಲಮಂಗಲ ಬಳಿ ಹೊಸ ವಿಮಾನ ನಿಲ್ದಾಣ ಸ್ಥಾಪನೆಯ ಪ್ರಕ್ರಿಯೆ ಕೈಗೊತ್ತಿಕೊಂಡಿರುವ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ ಎನ್ನಲಾಗಿದೆ. ನೆಲಮಂಗಲ ಹಾಗೂ ಕುಣಿಗಲ್ ರಾಷ್ಟ್ರೀಯ ಹೆದ್ದಾರಿ ಬಳಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲೆ ಎತ್ತುವ ಎಲ್ಲಾ ನಿರೀಕ್ಷಗಳಿದ್ದು ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರ ಈ ಬಗ್ಗೆ ಅಧಿಕೃತವಾಗಿ ತನ್ನ ನಿರ್ಧಾರವನ್ನು ಪ್ರಕಟಿಸಬಹುದು.

ಬೆಂಗಳೂರಿನ ಅಭಿವೃದ್ಧಿ ಹಾಗೂ ಸರಕು ಸಾಗಣೆ ಒತ್ತಡ ನಿಭಾಯಿಸುವ ನಿಟ್ಟಿನಲ್ಲಿ ಮುಂಬೈ ಮತ್ತು ದೆಹಲಿ ಮಾದರಿಯಲ್ಲಿ ಈ ಅಂತರಾಷ್ಟ್ರೀಯ ವಿಮಾನ ನಿರ್ಮಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಕೆಲವೇ ವರ್ಷಗಳಲ್ಲಿ ಅಂದರೆ ಹದಿನೈದು ವರ್ಷಗಳಲ್ಲಿ ಈ ಕನಸು ಸಾಕಾರವಾಗಬಹುದು. ಸದ್ಯ ಬೆಂಗಳೂರಿನಲ್ಲಿರುವ ನಾಡಪ್ರಭು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚುತ್ತಿದೆ. ಭವಿಷ್ಯದ ಬೆಂಗಳೂರಿನ ಪರಿಕಲ್ಪನೆ ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಉದ್ದೇಶಿಸಿದೆ. ಬೆಂಗಳೂರು ಸುತ್ತಮುತ್ತ ಈ ಸಂಬಂಧ ಕನಿಷ್ಠ ಏಳು ಜಾಗಗಳನ್ನು ಹುಡುಕಲಾಗಿದೆ. ಕೊನೆಗೆ ಎಲ್ಲಾ ದೃಷ್ಟಿಕೋನದಿಂದಲೂ ನೆಲಮಂಗಲ ಬಳಿ ವಿಮಾನ ನಿಲ್ದಾಣ ಸೂಕ್ತ ಎಂಬ ಅಂತಿಮ ತೀರ್ಮಾನಕ್ಕೆ ಬರಲಾಗಿದೆ. ಒಟ್ಟಾರೆ ಬೆಳವಣಿಗೆ ದೃಷ್ಟಿಯಿಂದ ನೆಲಮಂಗಲ ಅತ್ಯಂತ ಸೂಕ್ತ. ಇಲ್ಲಿ ಅಭಿವೃದ್ಧಿಗೆ ಹೆಚ್ಚು ಅವಕಾಶಗಳಿವೆ. ಸದ್ಯ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುಮಾರು 150 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅವಕಾಶ ಇಲ್ಲ. ಏಕೆಂದರೆ ಈ ಬಗ್ಗೆ ಒಪ್ಪಂದವಾಗಿದೆ. ಆದರೆ ಈಗಿನಿಂದಲೇ ಹೊಸ ವಿಮಾನ ನಿಲ್ದಾಣ ನಿರ್ಮಾಣದ ಪ್ರಕ್ರಿಯೆ ಆರಂಭಿಸಿದರೆ 2035 ರ ವೇಳೆಗೆ ಇದಕ್ಕೆ ಅಂತರಾಷ್ಟ್ರೀಯ ಮಾನ್ಯತೆ ಲಭಿಸಬಹುದು.

ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ಮುಂದಾಗುತ್ತಿದ್ದಂತೆ ನೆರೆಯ ತಮಿಳುನಾಡು ಕರ್ನಾಟಕಕ್ಕೆ ಹೊಂದಿಕೊಂಡಿರುವ ಹೊಸೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವುದಾಗಿ ಪ್ರಕಟಿಸಿತ್ತು. ಈ ನೆಟ್ಟಿನಲ್ಲಿ ಇದೀಗ ಕರ್ನಾಟಕ ಸರಕಾರ ಚುರುಕುಗೊಂಡಿದ್ದು ನೆಲಮಂಗಲದಲ್ಲಿ ಕೆಲವೇ ವರ್ಷಗಳಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ಬೆಂಗಳೂರು ಅಭಿವೃದ್ಧಿಗೆ ಪೂರಕವಾಗಿ ಬೆಳವಣಿಗೆ ಕಾಣಬಹುದು.