ಬೆಂಗಳೂರು: ಮೈಸೂರಿನ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ದಾಖಲಾಗಿದೆ.

ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಕರಣ ದಾಖಲಿಸಬೇಕು ಎಂದು ಕೋರಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಎಂಬವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ಪ್ರಭಾವ ಬಳಸಿ ಅಕ್ರಮವಾಗಿ ಜಮೀನು ಡಿನೋಟಿಫೈ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ರಾಜ್ಯಪಾಲರಿಗೆ ದಾಖಲೆ ಸಮೇತ ದೂರು ನೀಡಿರುವ ಮೈಸೂರು ಮೂಲದ ಸ್ನೇಹಮಯಿ ಕೃಷ್ಣ, ‘1979ರಲ್ಲಿ ಮೈಸೂರು ತಾಲೂಕು ವರುಣದ ಉತ್ತನಹಳ್ಳಿಯಲ್ಲಿ ಆಶ್ರಯ ಮನೆಗಳಿಗಾಗಿ ಭೂಸ್ವಾಧೀನ ಮಾಡಿದ್ದ ಜಮೀನಿಗೆ 30 ವರ್ಷದ ಬಳಿಕ ಡಿನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಮರಪ್ಪ ಎಂಬವರ ಹೆಸರಿಗೆ 1.39 ಎಕರೆ ಜಮೀನು ಡಿನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಶಿಫಾರಸು ಮಾಡಿದ್ದರು. ಮರಪ್ಪ ಎಂಬವರಿಗೆ ಸಂಬಂಧವೇ ಇರದಿದ್ದರೂ ನಕಲಿ ದಾಖಲೆ ಆಧರಿಸಿ ಅವರ ಹೆಸರಿಗೆ ಡಿನೋಟಿಫೈ ಮಾಡಲಾಗಿದೆ ಎಂದು ಸ್ನೇಹಮಯಿ ಕೃಷ್ಣ ದೂರಿನಲ್ಲಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರ ಪತ್ರ ಆಧರಿಸಿ 14 ತಿಂಗಳ ಬಳಿಕ 1.39 ಎಕರೆಯನ್ನು ಅಂದಿನ ಮೈಸೂರು ಜಿಲ್ಲಾಧಿಕಾರಿ ಡಿನೋಟಿಫೈ ಮಾಡಿದ್ದರು. ಆದರೆ, ಈ ವಿಚಾರ ತಿಳಿದ ಫಲಾನುಭವಿಗಳು 2011ರಲ್ಲಿ ಅಂದಿನ ಜಿಲ್ಲಾಧಿಕಾರಿಗೆ ಪತ್ರ ಬರೆದು, ನಮ್ಮ ಜಮೀನು ನಮಗೆ ನೀಡುವಂತೆ ಮನವಿ ಮಾಡಿದ್ದರು. ಮೂಲ ಜಮೀನಿನ ಮಾಲೀಕರು ಮರಪ್ಪ ಅಲ್ಲ, ಆದರೂ ಅವರ ಹೆಸರಿಗೆ ಡಿನೋಟಿಫೈ ಮಾಡಲಾಗಿದೆ ಎಂದು ಉಲ್ಲೇಖಿಸಿ ಸ್ನೇಹಮಯಿ ಕೃಷ್ಣ ಎಂಬವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಇದಕ್ಕೂ ಮೊದಲು ವಕೀಲ ಟಿ ಜೆ ಅಬ್ರಹಾಂ ಅವರು ಸಿಎಂ ವಿರುದ್ಧ ದೂರು ಸಲ್ಲಿಸಿ, ಈ ಪ್ರಕರಣವನ್ನು ಪ್ರಾಸಿಕ್ಯೂಶನ್‌ಗೆ ನೀಡಲು ಅವಕಾಶ ಕೊಡಬೇಕು ಎಂದು ಕೋರಿದ್ದರು. ಈ ದೂರು ಆದರಿಸಿ ರಾಜ್ಯಪಾಲ ಥಾವರ್‌ ಚಂದ್‌ ಗೆಲ್ಹೋಟ್ ಸಿಎಂಗೆ ಶೋಕಾಸ್ ನೋಟಿಸ್ ನೀಡಿದ್ದರು.