ಮೂಡುಬಿದಿರೆ: ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಕಾನೂನು ಮಹಾವಿದ್ಯಾಲಯವನ್ನು ಆರಂಭಿಸಿದ್ದು, ಇದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿದೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಅನುಮೋದನೆಯನ್ನೂ ಪಡೆದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಅತಿ ಹೆಚ್ಚು ಉದ್ಯೋಗ ಸಾಧ್ಯತೆ ಇರುವ 5 ವರ್ಷದ ಬಿಕಾಂ ಎಲ್‌ಎಲ್‌ಬಿ ಪದವಿಯನ್ನು 60 ವಿದ್ಯಾರ್ಥಿಗಳ ಮಿತಿಯೊಂದಿಗೆ ಹಾಗೂ 3 ವರ್ಷದ ಎಲ್ಎಲ್‌ಬಿ ಪದವಿಯನ್ನು 60 ವಿದ್ಯಾರ್ಥಿಗಳ ಮಿತಿಯೊಂದಿಗೆ ಈ ವರ್ಷದಿಂದಲೇ ಆರಂಭಿಸಲು ಅನುಮತಿ ದೊರೆತಿದೆ. ಕಾನೂನು ಶಿಕ್ಷಣದಲ್ಲಿ ಉತ್ತಮ ಅನುಭವ ಹೊಂದಿರುವ ಶಿಕ್ಷಕರನ್ನು ಈಗಾಗಲೇ ನೇಮಿಸಿದ್ದು, ಗುಣಾತ್ಮಕವಾದ ಕಾನೂನು ಶಿಕ್ಷಣಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕಟಿಬದ್ಧವಾಗಿದೆ ಎಂದರು.

ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿದವರು 3 ವರ್ಷಗಳ ಎಲ್ಎಲ್‌ಬಿ ಪದವಿ ಅಧ್ಯಯನಕ್ಕೆ ಪ್ರವೇಶ ಪಡೆಯಬಹುದು. ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ ಅಥವಾ ವಿಜ್ಞಾನ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಬಿಕಾಂ ಎಲ್‌ಎಲ್‌ಬಿ ಪ್ರವೇಶಕ್ಕೆ ಅರ್ಹರು. ದೇಶದ ವಿವಿಧ ಕಾನೂನು ವಿವಿಗಳಿಗೆ ಪ್ರವೇಶ ಪಡೆಯಲು ಬಯಸುವ ಆಕಾಂಕ್ಷಿಗಳಿಗಿರುವ ಅರ್ಹತಾ ಪರೀಕ್ಷೆ ಸಿಎಲ್‌ಎಟಿಗೂ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ತನ್ನಲ್ಲಿರುವ 19 ವಿವಿಧ ಶಿಕ್ಷಣ ಸಂಸ್ಥೆಗಳ ಜೊತೆಗೆ ನೂತನ ಕಾನೂನು ಮಹಾವಿದ್ಯಾಲಯವನ್ನು ಆರಂಭಿಸುತ್ತಿದೆ. ಕಾನೂನು
ಶಿಕ್ಷಣ ಎಲ್ಲಾ ಸ್ತರಗಳ ಹಾಗೂ ವಿವಿಧ ಜ್ಞಾನ ಶಾಖೆಗಳಿಗೆ
ಪೂರಕವಾದ ವೃತ್ತಿ ಆಧಾರಿತ ಕೋರ್ಸ ಆಗಿದೆ. ಮೂಡುಬಿದಿರೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮನ್ನಣೆ ಇರುವ ಶೈಕ್ಷಣಿಕ ಕಾರ್ಯಕ್ರಮವನ್ನು ಪರಿಚಯಿಸಿ, ಮಧ್ಯಮ ಮತ್ತು ಕೆಳವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಹೊಸ ಸಾಧ್ಯತೆಗಳನ್ನು ಪರಿಚಯಿಸಿದ ಕೀರ್ತಿ ಆಳ್ವಾಸ್‌ಗೆ ಸಲ್ಲುತ್ತದೆ ಎಂದು ತಿಳಿಸಿದರು.

ವಿಫುಲ ಅವಕಾಶಗಳು :
ಹೊಸ ಕಾನೂನು ಮಹಾವಿದ್ಯಾಲಯದ ಮೂಲಕ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನವು ಮೂಡುಬಿದಿರೆ ಹಾಗೂ ರಾಜ್ಯಕ್ಕೆ ಮತ್ತೊಂದು ಕೊಡುಗೆಯನ್ನು ನೀಡಲು ಸನ್ನದ್ಧವಾಗಿದೆ. ವಿಶಾಲವಾದ ಸುಸಜ್ಜಿತ ಕಾನೂನು ಗ್ರಂಥಾಲಯ, ಮೂಟ್ ಕೋರ್ಟ್ ಮತ್ತು ಇತರೆ ಎಲ್ಲಾ ಮೂಲಭೂತ ಸೌಕಯ್ಯಗಳೊಂದಿಗೆ ವಿದ್ಯಾಗಿರಿಯಲ್ಲಿ ಕಾಲೇಜು ಈಗಾಗಲೇ ವಿದ್ಯಾರ್ಥಿಗಳ ಸ್ವಾಗತಕ್ಕೆ ಸಜ್ಜಾಗಿದೆ. ಶಿಕ್ಷಣ ಪೂರೈಸಿದ ಪದವೀಧರರು ನ್ಯಾಯವಾಧಿಗಳಾಗಿ ಸ್ವಂತ ವೃತ್ತಿ ಆರಂಭಿಸುವುದಲ್ಲದೇ, ವಿವಿಧ ಕಂಪೆನಿಗಳಲ್ಲಿ ಸಲಹೆಗಾರರಾಗಿ, ವ್ಯವಹಾರ ಆಡಳಿತಾಧಿಕಾರಿಗಳಾಗಿ, ನ್ಯಾಯಾಂಗದ ವಿವಿಧ ಹುದ್ದೆಗಳಲ್ಲಿ, ಶಾಸನ ರೂಪಿಸುವ ಪ್ರತಿನಿಧಿಗಳಾಗಿ ವೃತ್ತಿಕೈಗೊಳ್ಳುವ ಅಪಾರ ಅವಕಾಶಗಳಿವೆ. ಸಮಾಜಕಾರ್ಯ ಪ್ರತಿಕೋದ್ಯಮ, ಎಂಬಿಎ, ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್, ಸಿಎ, ಸಿಎಸ್ ಪದವೀಧರರು ಕಾನೂನು ಶಿಕ್ಷಣ ಪಡೆದಲ್ಲಿ ತಮ್ಮ ಕ್ಷೇತ್ರಗಳಲ್ಲಿ ಹೆಚ್ಚಿನ ನೈಪುಣ್ಯತೆ ಪಡೆಯುವುದರೊಂದಿಗೆ ಹೆಚ್ಚಿನ ಉದ್ಯೋಗದ ಅವಕಾಶಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.

2024-25 ಶೈಕ್ಷಣಿಕ ವರ್ಷದ ದಾಖಲಾತಿ ಈಗಾಗಲೇ ಆರಂಭಗೊಂಡಿದ್ದು, ಮಾಹಿತಿಗಾಗಿ ಮೊ: 9379525826, 8147760394 ಸಂಪರ್ಕಿಸಬಹುದು ಎಂದರು.

ಆಳ್ವಾಸ್ ಪದವಿ ಕಾಲೇಜಿನ ಪ್ರಾಚಾರ್ಯ ಕುರಿಯನ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.