ಬೆಳಗಾವಿ: ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪಟ್ಟವನ್ನು ದಶಕಗಳ ಹಿಂದೆಯೇ ಪಡೆಯಬೇಕಾಗಿದ್ದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಮಾನಗಳು ಒಂದೊಂದೇ ಕಡಿಮೆ ಆಗುತ್ತಿರುವುದು ಇದೀಗ ಬೆಳಗಾವಿ ಜನತೆಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಉಡಾನ್ ಯೋಜನೆಗೆ ಬೆಳಗಾವಿ ವಿಮಾನ ನಿಲ್ದಾಣ ಸೇರ್ಪಡೆಗೊಂಡ ನಂತರ ಇಲ್ಲಿಂದ ದೇಶದ ಪ್ರಮುಖ ನಗರಗಳಿಗೆ ನೇರ ವಿಮಾನಯಾನ ಸೌಲಭ್ಯ ವನ್ನು ಹಲವು ವಿಮಾನಯಾನ ಸಂಸ್ಥೆಗಳು ಆರಂಭಿಸಿದ್ದವು ಆದರೆ ಈಗ ಮತ್ತಷ್ಟು ನಗರಗಳಿಗೆ ಬೇಡಿಕೆ ಇದ್ದರೂ ಸಹ ವಿಮಾನಯಾನ ಸಂಸ್ಥೆಗಳು ಒಂದೊಂದೇ ವಿಮಾನಗಳನ್ನು ಸ್ಥಗಿತಗೊಳಿಸುತ್ತಿರುವುದು ಬೆಳಗಾವಿಯ ಉದ್ಯಮಿಗಳು ಮತ್ತು ಜನತೆಯ ಬೇಸರಕ್ಕೆ ಕಾರಣವಾಗಿದೆ.

ದೇಶದ ಪ್ರತಿಷ್ಠಿತ ಇಂಡಿಗೋ ಸಂಸ್ಥೆ ಬೆಳಗಾವಿ ಮತ್ತು ಬೆಂಗಳೂರು ನಡುವಿನ ಬೆಳಗಿನ ಹೊತ್ತಿನ ವಿಮಾನಯಾನ ಸ್ಥಗಿತಗೊಳಿಸಿದೆ. ಈ ಅಘಾತದಿಂದ ಬೆಳಗಾವಿ ಜನತೆ ಹೊರಬರುವ ಮುನ್ನವೇ ಮತ್ತೊಂದು ನಿರಾಶೆಯ ಸುದ್ದಿ ಇದೀಗ ಬರ ಸಿಡಿಲಿನಂತೆ ಬಂದರೆಗಿದೆ.
ಈಗ ಸ್ಟಾರ್ ಏರ್ ಲೈನ್ಸ್‌ನ ಮತ್ತೊಂದು ವಿಮಾನ ಡಿ.6 ರಿಂದ ತನ್ನ ಹಾರಾಟವನ್ನು ಸ್ಥಗಿತಗೊಳಿಸಲಿದೆ. ಬೆಳಗಾವಿ-ತಿರುಪತಿ ನಡುವೆ ವಾರದಲ್ಲಿ ಮೂರು ದಿನಗಳ ಕಾಲ(ಭಾನುವಾರ, ಮಂಗಳವಾರ ಮತ್ತು ಗುರುವಾರ) ಸಂಚರಿಸುತ್ತಿದ್ದ ವಿಮಾನಕ್ಕೆ 2025ರ ಮಾರ್ಚ್ 27ರ ವರೆಗೆ ಸರಕಾರದಿಂದ ಅನುಮತಿ ನೀಡಲಾಗಿತ್ತು.
ಆದರೆ, ಸಂಸ್ಥೆ ಮೂರು ತಿಂಗಳ ಮುಂಚಿತವಾಗಿಯೇ ತನ್ನ ಸಂಚಾರ ನಿಲ್ಲಿಸುತ್ತಿದ್ದು, ಈ ಮಾರ್ಗದಲ್ಲಿನ ಪ್ರಯಾಣಿಕರಿಗೆ ಡಿ.6ರ ನಂತರದ ಬುಕ್ಕಿಂಗ್ ರದ್ದು ಮಾಡಿದೆ. ಇದರಿಂದ ಮತ್ತೊಂದು ಶಾಕ್ ಎದುರಾಗಿದೆ. ಬೆಳಗಾವಿಯಿಂದ ಮಧ್ಯಾಹ್ನ 1.30ಕ್ಕೆ 2.45 ತಿರುಪತಿ ತಲುಪುತ್ತಿರುವ ವಿಮಾನ, ಮಧ್ಯಾಹ್ನ 3.15ಕ್ಕೆ ಅಲ್ಲಿಂದ ಹೊರಟು ಸಂಜೆ 4.30ಕ್ಕೆ ಬೆಳಗಾವಿ ತಲುಪುತ್ತಿದೆ. ಇನ್ನು ಮುಂದೆ ಬೆಳಗಾವಿ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಭಕ್ತರು ದೇಶದ ಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿರುವ ತಿರುಪತಿಗೆ ತೆರಳಲು ಪ್ರಯಾಸ ಪಡಬೇಕಾದ ಸಂದಿಗ್ಧತೆ ಎದುರಾಗಿದೆ. ಈ ನಿಟ್ಟಿನಲ್ಲಿ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಗಮನಹರಿಸಲಿ ಎನ್ನುವುದು ಬೆಳಗಾವಿ ಜನತೆಯ ಆಗ್ರಹವಾಗಿದೆ.