ದಕ್ಷಿಣ ಭಾರತದಲ್ಲಿ ದಿನೇ ದಿನೇ ತನ್ನ ಅಧಿಪತ್ಯ ವೃದ್ಧಿಸಿಕೊಳ್ಳುತ್ತಿರುವ ಬಿಜೆಪಿ ಇದೀಗ ಹಳೆಯ ಪಕ್ಷವೊಂದರ ಜೊತೆ ಮೈತ್ರಿಗೆ ಮುಂದಾಗಿದೆ. ತಮಿಳು ಮಾನಿಲ ಕಾಂಗ್ರೆಸ್ ಮತ್ತು ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಿವೆ. ಈ ಬಗ್ಗೆ ತನ್ನ ನಿಲುವನ್ನು ತಮಿಳು ಮಾನಿಲ ಕಾಂಗ್ರೆಸ್ ಸ್ಪಷ್ಟಪಡಿಸಿದ್ದು, ಕೇಂದ್ರದ ಮಾಜಿ ಸಚಿವ ಜಿ.ಕೆ.ವಾಸನ್ ನೇತೃತ್ವದ ತಮಿಳ್ ಮಾನಿಲ ಕಾಂಗ್ರೆಸ್ (ಟಿಎಂಸಿ), ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸೇರುವುದಾಗಿ ಸೋಮವಾರ ಪ್ರಕಟಿಸಿದೆ.
ಲೋಕಸಭೆ ಚುನಾವಣೆಗೂ ಪಕ್ಷ ಸ್ಪರ್ಧಿಸಲಿದೆ ಎಂದು ಪಕ್ಷದ ನಾಯಕ, ಹಿರಿಯ ಕಾಂಗ್ರೆಸ್ ಮುಖಂಡ ಜಿ.ಕೆ.ಮೂಪನಾರ್ ಅವರ ಪುತ್ರರೂ ಆದ ವಾಸನ್ ಪ್ರಕಟಿಸಿದ್ದಾರೆ.
ದೇಶದ ಹಿತಾಸಕ್ತಿ ದೃಷ್ಟಿಯಿಂದ ಬಿಜೆಪಿ ಜೊತೆ ಕೈಜೋಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಶಿಫಾರಸಿನ ಮೇರೆಗೆ ಎಎಐಎಡಿಎಂಕೆ ಶಾಸಕರ ಬೆಂಬಲದೊಂದಿಗೆ ವಾಸನ್ ಅವರು 2020ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಟಿಎಂಸಿ ತೀರ್ಮಾನ ಗಮನಾರ್ಹವಾಗಿದೆ.
ದೇಶದ ಜನತೆ ಮೋದಿ ಅವರೇ ಮತ್ತೆ ಪ್ರಧಾನಿಯಾಗಬೇಕು ಎಂದು ಬಯಸುತ್ತಿದ್ದಾರೆ. ಇದರೊಂದಿಗೆ ತಮಿಳುನಾಡಿನ ಜನರ ಕಲ್ಯಾಣದ ದೃಷ್ಟಿಯಿಂದಲೂ ಪಕ್ಷವು ಈ ನಿಲುವು ತಳೆದಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.