ಬೆಳಗಾವಿ : ಅಪ್ರಾಪ್ತೆಯ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಸವದತ್ತಿ ತಾಲೂಕು ಬಸರಗಿ ಗವಟಿನ ಹನುಮಂತ ಪುಂಡಲಿಕ ಚಿಪ್ಪಲಕಟ್ಟಿ (21) ಶಿಕ್ಷೆಗೊಳಗಾದ ಅತ್ಯಾಚಾರಿ. 2019 ರ ನವೆಂಬರ್ 7 ರಂದು ಈತ ಅಪ್ರಾಪ್ತೆಯನ್ನು ಅಪಹರಿಸಿ ಗೋನಗನೂರು ಗ್ರಾಮದ ದೊಡ್ಡಗುಡ್ಡಕ್ಕೆ ಕರೆದುಕೊಂಡು ಹೋಗಿದ್ದ. ಈ ಬಗ್ಗೆ ದೂರು ದಾಖಲು ಮಾಡಿಕೊಂಡ ಅಂದಿನ ತನಿಖಾಧಿಕಾರಿ ಎಂ.ಐ. ನಡುವಿನಮನಿ ಅವರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು ಪ್ರಕರಣದ ವಿಚಾರಣೆ ನಡೆಸಿ ಒಟ್ಟು 20 ಸಾಕ್ಷಿಗಳ ವಿಚಾರಣೆ ಮೇಲೆ ಹಾಗೂ ದಾಖಲೆಗಳು ಮುದ್ದೆ ಮಾಲುಗಳ ಆಧಾರದ ಮೇಲೆ ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ, ಮತ್ತು ಹತ್ತು ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಒಂದು ಲಕ್ಷ ರುಪಾಯಿ ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಸರಕಾರ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್. ವಿ. ಪಾಟೀಲ ವಾದಿಸಿದ್ದರು.