ಮುಂಬೈ: ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ಸಿಗೆ ಮಹಾರಾಷ್ಟ್ರದಲ್ಲಿ ಮತ್ತೊಂದು ಹಿನ್ನಡೆಯಾಗಿದ್ದು, ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಪದ್ಮಾಕರ ವಾಲ್ವಿ ಬುಧವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡಿದ್ದಾರೆ.
ಮುಂಬೈನಲ್ಲಿ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಮತ್ತು ಪಕ್ಷದ ಮುಖಂಡ ಅಶೋಕ ಚವ್ಹಾಣ ಅವರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ನಂದೂರಬಾರ್‌ನ ಶಾಹದಾ ಕ್ಷೇತ್ರವನ್ನು ಪ್ರತಿನಿಧಿಸುವ ಮಾಜಿ ಶಾಸಕ ವಾಲ್ವಿ, ಈ ಹಿಂದೆ ಮಹಾರಾಷ್ಟ್ರ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿದ್ದರು. ಮತ್ತು ಉತ್ತರ ಮಹಾರಾಷ್ಟ್ರದ ಕಾಂಗ್ರೆಸ್ಸಿನ ಗಮನಾರ್ಹ ನಾಯಕರಾಗಿದ್ದಾರೆ.
2009 ರಲ್ಲಿ, ಶಾಹದಾ ಕ್ಷೇತ್ರದಿಂದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವಾಲ್ವಿ ಗೆಲುವು ಸಾಧಿಸಿದರು. ಆದರೆ, 2014ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ವಾಲ್ವಿ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಊಹಾಪೋಹ ಕಳೆದ ಎರಡು ವರ್ಷಗಳಿಂದ ಹರಡಿತ್ತು.

ಮುಂಬರುವ ಲೋಕಸಭಾ ಚುನಾವಣೆ 2024 ರಲ್ಲಿ ಮಹಾರಾಷ್ಟ್ರಕ್ಕೆ ಸೀಟು ಹಂಚಿಕೆ ಸೂತ್ರದ ಕುರಿತು ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮತ್ತು ವಿಪಕ್ಷಗಳ ಮೈತ್ರಿಕೂಟ ಇಂಡಿಯಾ (I.N.D.I.A) ತಮ್ಮ ತಮ್ಮ ಅಂಗ ಪಕ್ಷಗಳ ಜೊತೆ ಚರ್ಚೆ ನಡೆಸುತ್ತಿರುವಾಗಲೇ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರುವ ವಾಲ್ವಿ ಅವರ ನಿರ್ಧಾರವು ಮಹತ್ವ ಪಡೆದಿದೆ.
ವಾಲ್ವಿ ಅವರು ಬಿಜೆಪಿಗೆ ಸೇರ್ಪಡೆಯಾಗುವ ವೇಳೆ ಮಾತನಾಡಿದ ಮಹಾರಾಷ್ಟ್ರದ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬಾವಂಕುಲೆ, ಹಲವಾರು ಕಾಂಗ್ರೆಸ್ ನಾಯಕರು ಅವರ ಪಕ್ಷದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಲೋಕಸಭೆ ಚುನಾವಣೆಯ ಹೊತ್ತಿಗೆ, ಮಹಾರಾಷ್ಟ್ರ ಕಾಂಗ್ರೆಸ್ ಗಮನಾರ್ಹವಾದ ಅವನತಿಗೆ ಸಾಕ್ಷಿಯಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಬಹುಶಃ ಕಾಂಗ್ರೆಸ್‌ ಪಕ್ಷದ ಶೇಕಡಾ 50 ರಷ್ಟು ನಾಯಕರು ಪಕ್ಷಗಳನ್ನು ಬದಲಾಯಿಸುತ್ತಾರೆ. ಉದ್ಧವ್ ಠಾಕ್ರೆ ಅವರ ಗುಂಪಿನ ನಾಯಕರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರುತ್ತಿದ್ದಾರೆ, ಆದರೆ ಅತೃಪ್ತ ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರುತ್ತಿದ್ದಾರೆ ಎಂದು ಬವಾಂಕುಲೆ ಹೇಳಿದರು.