ದೆಹಲಿ:
ತಕ್ಷಣಕ್ಕೆ ಲೋಕಸಭೆಗೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 295-335 ಸ್ಥಾನಗಳನ್ನು ಪಡೆಯುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ 165-205 ಸ್ಥಾನ ಗೆಲ್ಲಬಹುದೇ ಹೊರತೂ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲ ಎಂದು ಎಬಿಪಿ ನ್ಯೂಸ್‌ ಮತ್ತು ಸಿ-ವೋಟರ್‌ ನಡೆಸಿದ ಸಮೀಕ್ಷಾ ವರದಿ ಹೇಳಿದೆ.

ಸಮೀಕ್ಷೆ ಅನ್ವಯ ಎನ್‌ಡಿಎ ಮೈತ್ರಿಕೂಟ ಶೇ.42ರಷ್ಟು ಮತ ಪಡೆಯುವ ಮೂಲಕ 295ರಿಂದ 335 ಸ್ಥಾನಗಳಿಸಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಶೇ.45ರಷ್ಟು ಮತಗಳೊಂದಿಗೆ 353 ಸ್ಥಾನ ಗೆದ್ದುಕೊಂಡಿತ್ತು. ಇನ್ನು ಕಾಂಗ್ರೆಸ್‌ ನೇತೃತ್ವದಲ್ಲಿ ರಚನೆಗೊಂಡಿರುವ ಇಂಡಿಯಾ ಮೈತ್ರಿಕೂಟ ಶೇ.38ರಷ್ಟು ಮತಗಳೊಂದಿಗೆ 165-205 ಸ್ಥಾನ ಪಡೆಯಲಿದೆ. ಇತರರು ಶೇ.20ರಷ್ಟು ಮತಗಳೊಂದಿಗೆ 35-65 ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಉ.ಪ್ರ.ದಲ್ಲಿ ಬಿಜೆಪಿ ಕಮಾಲ್‌: ಉತ್ತರ ಪ್ರದೇಶದ 80 ಕ್ಷೇತ್ರಗಳಲ್ಲಿ ಬಿಜೆಪಿ 73-75 ಸ್ಥಾನ ಹಾಗೂ ಸಮಾಜವಾದಿ ಪಾರ್ಟಿ-ಕಾಂಗ್ರೆಸ್‌ ಮೈತ್ರಿಕೂಟ 4-6, ಬಿಎಸ್ಪಿ 0-2 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆ ಹೇಳಿದೆ.

ಮಹಾರಾಷ್ಟ್ರ, ಬಿಹಾರದಲ್ಲಿ ಇಂಡಿಯಾ ಕೂಟಕ್ಕೆ ಜಯ: ಇನ್ನು ಮಹಾರಾಷ್ಟ್ರದ 48 ಸ್ಥಾನಗಳಲ್ಲಿ ಎನ್‌ಡಿಎ 19-21 ಹಾಗೂ ಕಾಂಗ್ರೆಸ್‌-ಎನ್‌ಸಿಪಿ-ಠಾಕ್ರೆ ಶಿವಸೇನೆಯ ಮಹಾರಾಷ್ಟ್ರ ವಿಕಾಸ ಅಘಾಡಿ ಕೂಟ 26-28 ಸ್ಥಾನ ಗೆಲ್ಲಲಿದೆ. ಇಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ ಆಗಲಿದೆ ಎಂದು ಸಮೀಕ್ಷೆ ಭವಿಷ್ಯ ಹೇಳಿದೆ.

ಬಿಹಾರದ 40 ಸ್ಥಾನಗಳಲ್ಲಿ ಎನ್‌ಡಿಎ 16-18 ಸ್ಥಾನಕ್ಕೆ ತೃಪ್ತಿಪಡಲಿದೆ. ಆದರೆ ಜೆಡಿಯು-ಆರ್‌ಜೆಡಿ-ಕಾಂಗ್ರೆಸ್‌ನ ಮಹಾಮೈತ್ರಿಕೂಟ 21-23 ಸ್ಥಾನ ಗಳಿಸಿ ಗಮನಾರ್ಹ ಮುನ್ನಡೆ ಸಾಧಿಸಲಿದೆ ಎಂದು ಎಬಿಪಿ ನ್ಯೂಸ್‌ ಸಮೀಕ್ಷೆ ಅಂದಾಜು ಮಾಡಿದೆ.

ಮುಂದಿನ ಪ್ರಧಾನಿ ಯಾರಾಗಬೇಕು? ಕರ್ನಾಟಕದಲ್ಲಿ ಮೋದಿಗೆ ಶೇ.65ರಷ್ಟು ಮತ!

ಮೈತ್ರಿಕೂಟ ಸ್ಥಾನ ಮತ ಪ್ರಮಾಣ

ಎನ್‌ಡಿಎ 295- 335 ಶೇ.42

ಇಂಡಿಯಾ 165-205 ಶೇ.38

ಇತರರು 35-65 ಶೇ.20

ಇನ್ನು ಈಗ ಲೋಕಸಭೆ ಚುನಾವಣೆ ನಡೆದರೆ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ 22-24 ಸ್ಥಾನ ಪಡೆಯಲಿದೆ. ಕಾಂಗ್ರೆಸ್‌ಗೆ ಕೇವಲ 4-6 ಸ್ಥಾನ ಬರುವ ನಿರೀಕ್ಷೆ ಇದೆ ಎಂದು ಎಬಿಪಿ ನ್ಯೂಸ್‌ ಸಿ-ವೋಟರ್‌ ಸಮೀಕ್ಷೆ ಹೇಳಿದೆ.

ಇತ್ತೀಚೆಗಷ್ಟೇ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷ ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡ ಪರಿಣಾಮ ಉಭಯ ಪಕ್ಷಗಳಿಗೆ ವರವಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಬಣ್ಣಿಸಲಾಗಿದೆ.

ಪ್ರಸ್ತುತ ಕರ್ನಾಟಕದಲ್ಲಿ ಬಿಜೆಪಿಯಿಂದ 25 ಸಂಸದರಿದ್ದು, ಒಬ್ಬರು ಪಕ್ಷೇತರ ಸಂಸದರು ಬಿಜೆಪಿ ಬೆಂಬಲಿಸುತ್ತಿದ್ದಾರೆ. ಅಲ್ಲದೆ ಜೆಡಿಎಸ್‌ ಕೂಡ ಒಬ್ಬರು ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್‌ ಗೆದ್ದಿರುವ ಏಕಮಾತ್ರ ಕ್ಷೇತ್ರವನ್ನು ಬಿಟ್ಟು ಉಳಿದ 27 ಸ್ಥಾನಗಳಲ್ಲೂ ಎನ್‌ಡಿಎ ಬೆಂಬಲಿತ ಅಭ್ಯರ್ಥಿಗಳೇ ಸಂಸದರಾಗಿದ್ದಾರೆ.