ಅರಿಕೋಡಿ : ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಅರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ವಾರ್ಷಿಕ ಉತ್ಸವ ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಹರೀಶ ಅರಿಕೋಡಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಫೆಬ್ರವರಿ 10 ರಂದು ಬೆಳಗ್ಗೆ 8 ಗಂಟೆಗೆ ವೇದಮೂರ್ತಿ ಶ್ರೀನಿವಾಸ ಹೊಳ್ಳ ಮತ್ತು ಬಳಗದ ಪೌರೋಹಿತ್ಯದಲ್ಲಿ ಪುಣ್ಯಹ ಶುದ್ದಿ, ದೇವತಾ ಪ್ರಾರ್ಥನೆ, ಗಣಹೋಮ, ಮೃತ್ಯುಂಜಯ ಹೋಮ, ನವಗ್ರಹ ಹೋಮ, ಕಲಶ ಪೂಜೆ, ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ 4 ಗಂಟೆಗೆ ಸುದರ್ಶನ ಹೋಮ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಮಹಾಪೂಜೆ ನಡೆಯಲಿದೆ.

ಸಂಜೆ 6 ಗಂಟೆಗೆ ಶ್ರೀದೇವಿ ಕಿರಣ ಕಲಾ ನಿಕೇತನ ಇದರ ನೃತ್ಯ ಶಿಕ್ಷಕಿಯರಾದ ಸ್ವಾತಿ ಜಯರಾಮ್ ಮತ್ತು ವಿದುಷಿ ಪ್ರಥ್ವಿ ಸತೀಶ್ ಅವರ ಶಿಷ್ಯವೃಂದವರಿಂದ ನೃತ್ಯಾರ್ಪಣಂ, 7 ಗಂಟೆಯಿಂದ ಕನ್ನಡ ಕಲರ್ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡ ಗಾನಗಂಧರ್ವ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ. ನಂತರ ಕುಣಿತ ಭಜನೆ ಕಮ್ಮಟೋತ್ಸವ ಏರ್ಪಡಿಸಲಾಗಿದೆ.

ಫೆ. 11 ರಂದು ಶ್ರೀ ನಾಗದೇವರಿಗೆ ನಾಗತಂಬಿಲ, ಶ್ರೀ ಚಾಮುಂಡೇಶ್ವರಿ ದೇವಿಗೆ ಮಹಾ ಚಂಡಿಕಾ ಯಾಗ, ಲಲಿತ ಸಹಸ್ರನಾಮ, ಕದಳಿ ಯಾಗ, ಕಲಶಾಭಿಷೇಕ, ಮಹಾಪೂಜೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.

ಸಂಜೆ 4 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದುರ್ಗಾ ಪೂಜೆ, ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ರಂಗಪೂಜೆ ನಡೆಸಲಾಗುತ್ತಿದೆ. ಸಂಜೆ 5 ಗಂಟೆಗೆ ಯಕ್ಷ ತೆಲಿಕೆ ಎಂಬ ಯಕ್ಷ ಹಾಸ್ಯ ವೈಭವ ನಡೆಯಲಿದೆ. ರಾತ್ರಿ 8 ಗಂಟೆಗೆ ಸ್ಥಳೀಯ ಶಾಲಾ ಮಕ್ಕಳಿಂದ ಮತ್ತು ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಮಾಯೊದ ತುಡರ್ ಎಂಬ ತುಳು ಭಕ್ತಿ ಪ್ರಧಾನ ಹಾಸ್ಯಮಯ ನಾಟಕ ಪ್ರದರ್ಶನವಾಗಲಿದೆ.

ಫೆ.12 ರಂದು ಬೆಳಗ್ಗೆ 8 ಗಂಟೆಗೆ ಶ್ರೀ ಚಾಮುಂಡೇಶ್ವರಿ ದೇವಿಗೆ ಕಲಶ ಪೂಜೆ, ಕಲಶ ಪ್ರಧಾನ ಹೋಮ, ಪರಿವಾರ ಪೂಜೆ, ಕಲಶಾಭಿಷೇಕ, ಮಹಾಪೂಜೆ, ಪಲ್ಲ ಪೂಜೆ, ಮಹಾ ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ವಾರ್ಷಿಕ ಉತ್ಸವ ನಡೆಯಲಿದೆ.

ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸದಾನಂದ ಮುಂಡಾಜೆ ಅವರ ಸಾರಥ್ಯದಲ್ಲಿ ಕೀರ್ತನಾ ಕಲಾ ತಂಡದ ಸದಸ್ಯರಿಂದ ಭಕ್ತಿಗೀತೆಗಳು, ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಫೆ.13 ರಂದು ಶ್ರೀ ಚಾಮುಂಡೇಶ್ವರಿ ದೇವಿಗೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವ್ವಜ ಕ್ಷೇತ್ರ ಪಾವಂಜೆ ಇವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನವಾಗಲಿದೆ.

ಫೆ.14 ರಂದು ರಾತ್ರಿ 8 ರಿಂದ ಕ್ಷೇತ್ರದ ಪರಿವಾರ ದೈವಗಳಾದ ಕಲ್ಲುರ್ಟಿ, ಮಂತ್ರ ದೇವತೆ, ಸನ್ಯಾಸಿ ಗುಳಿಗ, ಶಕ್ತಿ ಗುಳಿಗ ಹಾಗೂ ಇತರ ದೈವಗಳಿಗೆ ನೇಮಸೇವೆ ನಡೆಸಲಾಗುತ್ತಿದೆ. ರಾತ್ರಿ 12 ಕ್ಕೆ ಲಕ್ಕಿಡಿಪ್ ಡ್ರಾ ನಡೆಯಲಿದೆ ಎಂದು ಅರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಅರಿಕೋಡಿ ಅವರು ತಿಳಿಸಿದ್ದಾರೆ.