ಬಾಗಲಕೋಟೆ :
ಸಂಸತ್ತಿನಲ್ಲಿ ಹೊಗೆ ಬಾಂಬ್ ಸಿಡಿಸಿದ ಪ್ರಕರಣದ ಆರೋಪಿ ಮೈಸೂರಿನ ಮನೋರಂಜನ್ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದ ಇಲ್ಲಿನ ನವನಗರದ ಯುವಕನೊಬ್ಬನನ್ನು ದೆಹಲಿ
ಪೊಲೀಸರು ವಿಚಾರಣೆ ನಡೆಸಿ, ನಂತರ ವಶಕ್ಕೆ ಪಡೆದು ದೆಹಲಿಗೆ ಕರೆದೊಯ್ದ ಘಟನೆ ಬುಧವಾರ ನಡೆದಿದೆ.

ಸಾಯಿಕೃಷ್ಣ ಜಗಲಿ (30) ವಿಚಾರಣೆಗೊಳಗಾದ ಯುವಕ. ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ಬಳಿಕ ಆತನನ್ನು ವಶಕ್ಕೆ ಪಡೆದು ಪೊಲೀಸರು ದೆಹಲಿಗೆ ಕರೆದೊಯ್ದಿದ್ದಾರೆ.

ಸಾಯಿಕೃಷ್ಣ ನಿವೃತ್ತ ಡಿವೈಎಸ್ಪಿ ಪುತ್ರನಾಗಿದ್ದು, ಈತ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡಿದ್ದಾನೆ. ಮನೋರಂಜನ್ ಹಾಗೂ ಸಾಯಿಕೃಷ್ಣ ಜಗಲಿ 2008-09ರಲ್ಲಿ ಬೆಂಗಳೂರಿನ ಬಿಐಟಿ ಇಂಜಿನಿಯರಿಂಗ್ ಓದುತ್ತಿದ್ದಾಗ ಒಂದೇ ರೂಮಿನಲ್ಲಿದ್ದರು ಎನ್ನಲಾಗಿದೆ. ಕಾಲೇಜು ಶಿಕ್ಷಣ ಮುಗಿದ ಬಳಿಕವೂ ಇವರಿಬ್ಬರು ಸಂಪರ್ಕದಲ್ಲಿದ್ದರು. ಪ್ರಕರಣ ಬೆಳಕಿಗೆ ಬಂದ ನಂತರ ಮನೋರಂಜನ್ ಡೈರಿ, ಕಾಲ್ ರೆಕಾರ್ಡ್ ಪರಿಶೀಲಿಸಿದಾಗ ಅತಿ ಹೆಚ್ಚು ಬಾರಿ ಸಾಯಿಕೃಷ್ಣ ಜೊತೆ ಆತ ಸಂಪರ್ಕದಲ್ಲಿದ್ದುದು ಬೆಳಕಿಗೆ ಬಂದಿದೆ. ಈ ದಿನದಲ್ಲಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.