ಬೆಳಗಾವಿ : ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರನ್ನು ಅಡಗಟ್ಟಿ, ಕಾರಿನಲ್ಲಿದ್ದವರ ಮೇಲೆ ಹಲ್ಲೆ ಮಾಡಿ ಕಾರು ಹಾಗೂ ಮೊಬೈಲ್ ಫೋನ್ಗಳನ್ನು ದರೋಡೆ ಮಾಡಿದ್ದ ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೇ 23ರಂದು ರಾಜಸ್ಥಾನದ ಪಾಲಿ ಜಿಲ್ಲೆಯ ಸುರೇಶ ರಾವ್ ಹಿಮ್ಮತ್ ರಾಮೋಜೀರಾವ್ ಎಂಬುವವರು ತಮ್ಮ ಸ್ನೇಹಿತ ಸಂಪತ್ ಸೋಲಂಕಿರವರೊಂದಿಗೆ ಮುಂಬೈದಿಂದ ಮಂಗಳೂರಿಗೆ ತೆರಳುತ್ತಿದ್ದರು. ಅಂಕೋಲಾ ಮಾರ್ಗದ ಅರಬೈಲ್ ಘಟ್ಟದಲ್ಲಿ ಬೇರೊಂದು ಕಾರಿನಲ್ಲಿ ಬಂದ ನಾಲ್ವರು ಅಪರಿಚಿತರು ಕಾರನ್ನು ಅಡ್ಡಗಟ್ಟಿದ್ದರು. ಕಾರಿನ ಎರಡು ಗ್ಲಾಸ್ ಒಡೆದು, 3 ಮೊಬೈಲ್ ಫೋನ್, ಕಾರಿನ ಕೀ ಕಸಿದುಕೊಂಡರು. ನೀವು ಶಿಂಧೆ ಸಾಹೇಬರ ಕಾರಿಗೆ ಓವರ್ ಟೇಕ್ ಮಾಡಿಕೊಂಡು ಬಂದಿದ್ದೀರಿ ಎಂದು ಹೇಳಿ ಅವರಿಬ್ಬರನ್ನು ಕಾರಿನಲ್ಲಿ ಕುಳ್ಳರಿಸಿಕೊಂಡು ಹೋಗಿದ್ದರು. ನಂತರ ಹುಬ್ಬಳ್ಳಿ ರಸ್ತೆಯ ಬದಿಯಲ್ಲಿ ಇಳಿಸಿ ಶಿಂಧೆ ಸಾಹೇಬರು ಹಿಂದೆ ಇದ್ದಾರೆ, ನೀವು ಬಸ್ಸಿನಲ್ಲಿ ಹೋಗಿ ಅಂತಾ ಹೇಳಿ ದರೋಡೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬೆನ್ನತ್ತಿದ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಬಂಧಿಸಿದ್ದಾರೆ. ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಸುರಜ ಸುಧಾಕರ ಚೌಹಾಣ ಹಾಗೂ ರವೀಂದ್ರ ಭಜರಂಗ ಮದನಿ ಬಂಧಿತ ಆರೋಪಿಗಳು. ಈ ವೇಳೆ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ, ಡಿವೈಎಸ್ಪಿ ಎಮ್.ಎಸ್. ಪಾಟೀಲರವರ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆದಿತ್ತು. ಸಿಪಿಐ ರಮೇಶ ಹೆಚ್. ಹನಾಪುರ ನೇತೃತ್ವದಲ್ಲಿ ಪಿಎಸ್ಐ ಸಿದ್ದಪ್ಪ ಗುಡಿ, ಪಿಎಸ್ಐ ವಿಜಯರಾಜ, ಎ.ಎಸ್.ಐ ಆನಂದ ಡಿ ಪಾವಸ್ಕರ ಹಾಗೂ ಸಿಬ್ಬಂದಿ ಬಸವರಾಜ ಹಗರಿ, ರಾಮಾ ಪಾವಸ್ಕರ, ರಾಘವೇಂದ್ರ ಮೂಳೆ, ಸಂತೋಷ ಬಾಳೇರ ಮತ್ತು ಶೋಭಾ ನಾಯ್ಕ ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.