ಕಾರ್ಕಳ: ಶಿರ್ಲಾಲಿನ ಜಾರ್ಕಳ ಮುಂಡ್ಲಿಯಲ್ಲಿ ನಡೆದ ಯಕ್ಷಗಾನ ಪ್ರದರ್ಶನವನ್ನು ಪೊಲೀಸರು ನಿಲ್ಲಿಸಲು ಮುಂದಾದ ಘಟನೆ ಮಂಗಳವಾರದ ರಾತ್ರಿ ಸಂಭವಿಸಿದೆ. ಧ್ವನಿವರ್ಧಕಕ್ಕೆ ಅನುಮತಿ ಇಲ್ಲದ ಕಾರಣ ಪ್ರದರ್ಶನವನ್ನು ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದು, ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಬಗ್ಗೆ ಮಾತನಾಡಿದ ಗ್ರಾಮಸ್ಥರು, ನಾವು ಪ್ರತಿ ವರ್ಷ ಈ ರೀತಿಯ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸುತ್ತೇವೆ. ಈ ಬಾರಿ ಮಾತ್ರ ಪೊಲೀಸರು ಅನಗತ್ಯ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಅವರು ಸಕಾಲಿಕವಾಗಿ ಅನುಮತಿ ನೀಡದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ಪೊಲೀಸರು ಮಾತನಾಡಿ, ನಾವು ಕೇವಲ ನಿಯಮ ಪಾಲನೆ ಮಾಡುತ್ತಿದ್ದೇವೆ. ಧ್ವನಿವರ್ಧಕಕ್ಕೆ ಅನುಮತಿ ಇಲ್ಲದ ಕಾರಣ ಪ್ರದರ್ಶನವನ್ನು ನಿಲ್ಲಿಸುವಂತೆ ಸೂಚಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಘಟನೆಯಿಂದ ಗ್ರಾಮದಲ್ಲಿ ತೀವ್ರ ಕೋಲಾಹಲ ಸೃಷ್ಟಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯ ವೈರಲ್ ಆಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹಲವರು ಈ ಘಟನೆಯನ್ನು ಖಂಡಿಸಿದ್ದಾರೆ.ಎಸ್ಪಿ ಪ್ರತಿಕ್ರಿಯೆ :
ಮಂಗಳವಾರ ರಾತ್ರಿ ಅಜೆಕಾರ್ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾತ್ರಿ ವೇಳೆ ಧ್ವನಿವರ್ಧಕ ಬಳಸುವುದರಿಂದ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ಕರೆ ಬಂದಿದೆ. ಪೊಲೀಸರು ಹೋಗಿ ವಿಚಾರಿಸಿದಾಗ ಕಾರ್ಯಕ್ರಮ ಆಯೋಜಿಸಲು ಅನುಮತಿ ಪಡೆಯದಿರುವುದು, ಧ್ವನಿವರ್ಧಕ ಬಳಸಲು ಅನುಮತಿ ಪಡೆಯದೆ ಇರುವುದು ಕಂಡುಬಂದಿದೆ. ರಾತ್ರಿ 11.30 ಗಂಟೆಗೆ ಪೊಲೀಸರು ಧ್ವನಿವರ್ಧಕವನ್ನು ಬಳಸದಂತೆ ತಿಳಿಸಿದರೂ, ಅದನ್ನು ನಿರಾಕರಿಸಿ ಬೆಳಿಗ್ಗೆ 4.30 ಗಂಟೆಯವರೆಗೆ ಮುಂದುವರಿಸುತ್ತಾರೆ. ಹೀಗಾಗಿ ಯಾವುದೇ ಅನುಮತಿ ಪಡೆಯದೆ ರಾತ್ರಿ ವೇಳೆ ಧ್ವನಿವರ್ಧಕ ಬಳಸಿ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಆಯೋಜಕರ ಮೇಲೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/25 ಕಲಂ. 292 BNS ಮತ್ತು 37 KP Act. ರಂತೆ ಪ್ರಕರಣ ದಾಖಲಿಸಲಾಗಿದೆ.ಸಾರ್ವಜನಿಕ ಸ್ಥಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಮತ್ತು ಧ್ವನಿವರ್ಧಕ ಬಳಸಲು ಅನುಮತಿಯ ಅಗತ್ಯವಿದೆ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ. ಮತ್ತು ಈ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರುಗಳು ಬಂದಲ್ಲಿ, ಅದನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರಿಶೀಲಸಿ ಕ್ರಮ ಕೈಗೊಳ್ಳಲು ಪೊಲೀಸರು ಬದ್ಧರಾಗಿರುತ್ತಾರೆ ಎಂದು ತಿಳಿಸಿದರು.
ಯಕ್ಷಗಾನ ಪ್ರದರ್ಶನ ನಿಲ್ಲಿಸಿದ ಕಾಂಗ್ರೆಸ್ಸಿಗರು ಕೋಲ, ಜಾತ್ರೆ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಿದರೂ ಅಚ್ಚರಿಯಿಲ್ಲ: ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ :
ಕರಾವಳಿಯ ಗಂಡು ಕಲೆ ಎಂದೇ ಖ್ಯಾತಿ ಪಡೆದ ಯಕ್ಷಗಾನ ಕಲೆಯು ಯಾವುದೇ ಅಡ್ಡಿ ಆತಂಕಗಳಿಲ್ಲದೇ ಪ್ರದರ್ಶನವಾಗುತ್ತದೆ. ಆದರೆ ಕರ‍್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಮುಂಡ್ಲಿ ಎಂಬಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನದ ನಡುವೆ ಕಾಂಗ್ರೆಸ್ ನಾಯಕನ ಆದೇಶದ ಮೇರೆಗೆ ಮಧ್ಯಪ್ರವೇಶಿಸಿದ ಪೊಲೀಸರು ಏಕಾಎಕಿ ಪ್ರದರ್ಶನವನ್ನೇ ರದ್ದುಪಡಿಸಲು ಸೂಚಿಸಿದಾಗ ನೆರೆದಿದ್ದ ಯಕ್ಷಗಾನದ ಅಭಿಮಾನಿಗಳ ವಿರೋಧದಿಂದ ಪೊಲೀಸರು ವಾಪಾಸ್ ತೆರಳಿದರು. ಸದರಿ ಯಕ್ಷಗಾನದ ಆಯೋಜಕರ ಹಾಗೂ ಅಭಿಮಾನಿಗಳ ಮೇಲೆ ಮೊಕದ್ದಮೆಗಳನ್ನು ದಾಖಲಿಸಿ, ಕಲೆಗೆ ಅವಮಾನ ಮಾಡಿರುವುದು ಖಂಡನೀಯ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಹೇಳಿದ್ದಾರೆ.ಯಕ್ಷಗಾನ ಕಲೆಯು ಕಾನೂನಿನ ಯಾವುದೇ ಕಟ್ಟುಪಾಡುಗಳಿಲ್ಲದೇ ನಡೆಯುವ ಕಲೆಯಾಗಿದೆ. ಪ್ರತಿನಿತ್ಯ ಹತ್ತಾರು ಯಕ್ಷಗಾನ ಮೇಳಗಳಿಂದ ಯಕ್ಷಗಾನ ಪ್ರದರ್ಶನಗಳು ಅಡೆತಡೆಗಳಿಲ್ಲದೇ ನಡೆಯುತ್ತಿರುತ್ತವೆ. ಆದರೆ ಕಾಂಗ್ರೆಸ್ಸಿಗರ ಈ ವರ್ತನೆಯಿಂದ ಇನ್ನುಮುಂದೆ ಯಕ್ಷಗಾನ ಕಲೆಯ ಪ್ರದರ್ಶನಕ್ಕೂ ಸಂಚಕಾರ ಬಂದರೆ ಅಚ್ಚರಿಯಿಲ್ಲ. ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿಪಡಿಸಿದವರು ಇನ್ನುಮುಂದೆ ಕೋಲ, ನೇಮ, ಜಾತ್ರೆ ಹಾಗೂ ದೇವರ ಉತ್ಸವಗಳನ್ನೂ ಕೂಡ ನಿಷೇಧಿಸುವ ದಿನ ದೂರವಿಲ್ಲ ಎಂದು ನವೀನ್ ನಾಯಕ್ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ದಿನದಿಂದಲೇ ಹಿಂದೂ ಸಮಾಜದ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿದೆ. ವಕ್ಫ್ ವಿಚಾರದಲ್ಲಿ ರೈತರ ಹಾಗೂ ಮಠ ಮಂದಿರಗಳ ಜಮೀನು ಕಬಳಿಸಲು ಹುನ್ನಾರ ನಡೆಸಲಾಯಿತು. ಹಿಂದೂಗಳು ಪೂಜಿಸುವ ಪವಿತ್ರ ಗೋಮಾತೆಯ ಕೆಚ್ಚಲನ್ನು ಕತ್ತರಿಸಿದ ಪರಮಪಾಪಿಯನ್ನು ಕಾಂಗ್ರೆಸ್ ಸರ್ಕಾರ ರಕ್ಷಿಸುವ ಪ್ರಯತ್ನ ಮಾಡುತ್ತಿದೆ. ತನ್ನನ್ನು ಕೊಲ್ಲಲು ಬರುವ ಕಟುಕನಿಗೂ ಅಮೃತ ಸಮಾನ ಹಾಲನ್ನು ನೀಡುವ ಗೋಮಾತೆಯ ಕಣ್ಣೀರಿನ ಶಾಪ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಖಂಡಿತವಾಗಿ ತಟ್ಟಲಿದೆ ಎಂದು ನವೀನ್ ನಾಯಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.