
ಮಂಗಳೂರು: ಯಕ್ಷಗಾನದ ತಾಳಮದ್ದಳೆಯ ಹಿರಿಯ ಅರ್ಥಧಾರಿ ಬರೆ ಕೇಶವ ಭಟ್ (84) ಅವರು ಮುಡಿಪು ಇರಾ ಗ್ರಾಮದ ಸಣ್ಣಯಬೈಲುವಿನಲ್ಲಿ ವಯೋಸಹಜ ಅನಾರೋಗ್ಯದಿಂದ ಶನಿವಾರ ನಿಧನರಾದರು.
ಕೇಶವ ಭಟ್ ಅವರು ಬಂಟ್ವಾಳ ತಾಲ್ಲೂಕಿನ ಕೈರಂಗಳ ಗ್ರಾಮದ ಬರೆಯಲ್ಲಿ 1941ರ ಅ. 30ರಂದು ಬರೆ ವೆಂಕಟರಮಣ ಭಟ್-ಗೌರಿ ದಂಪತಿಯ ಮಗನಾಗಿ ಜನಿಸಿದ್ದರು. ಟಿಸಿಎಚ್ ತರಬೇತಿ ಪಡೆದು ಕೈರಂಗಳ ಶಾಲೆ, ಶಿರಂಕಲ್ಲು ಶಾಲೆ ಹಾಗೂ ಅಡ್ಯನಡ್ಕ ಜನತಾ ವಿದ್ಯಾ ಸಂಸ್ಥೆಯಲ್ಲಿ ಅಧ್ಯಾಪಕರಾಗಿ 1999ರಲ್ಲಿ ನಿವೃತ್ತರಾಗಿದ್ದರು.
ಕೈರಂಗಳ ಯಕ್ಷಗಾನ ಸಂಘದ ಯಕ್ಷಗಾನದಲ್ಲಿ ‘ನಾರದ’ನ ಪಾತ್ರ ನಿರ್ವಹಿಸುವುದರೊಂದಿಗೆ ಅವರ ಯಕ್ಷಪಯಣ ಆರಂಭವಾಗಿತ್ತು. ಹೆಜ್ಜೆ ಕಲಿಯದಿದ್ದರೂ ಹಿರಣ್ಯಕಶ್ಯಪ, ಮಯೂರಧ್ವಜ ಮೊದಲಾದ ಪಾತ್ರ ನಿರ್ವಹಿಸಿದ್ದರು. ಅಡ್ಯನಡ್ಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದಾಗ ಮುಳಿಯಾಲ ಕೃಷ್ಣ ಭಟ್ಟರ ಜೊತೆ ತಾಳಮದ್ದಲೆಗೆ ಹೋಗುತ್ತಿದ್ದರು. ಅದರ ಮೂಲಕ ತಾಳ ಮದ್ದಲೆಯ ನಂಟು ಬೆಳೆಸಿಕೊಂಡ ಅವರು ನಂತರ ಶೇಣಿ ಗೋಪಾಲಕೃಷ್ಣ ಭಟ್ಟ, ದೇರಾಜೆ ಸೀತಾರಾಮಯ್ಯ, ಮಲ್ಪೆ ವಾಸುದೇವ ಸಾಮಗ, ರಾಮದಾಸ ಸಾಮಗಂತಹ ದಿಗ್ಗಜ ಕಲಾವಿದರ ಜೊತೆ ಅರ್ಥಹೇಳಿದ್ದರು. ಬಾಹುಕ, ಶ್ರೀರಾಮ, ಅತಿಕಾಯ, ವಿದುರ, ಶ್ರೀಕೃಷ್ಣ, ದಶರಥ, ಭೀಷ್ಮ,
ಮಯೂರಧ್ವಜ ಮೊದಲಾದವು ಪ್ರೇಕ್ಷಕರ ಮನದಲ್ಲಿ ಛಾಪು ಮೂಡಿಸಿದ ಅವರ ಪಾತ್ರಗಳು. ವಾಸುದೇವ ಸಾಮಗರ ‘ಸಂಯಮಂ’ ತಂಡದಲ್ಲಿ ಕೆಲ ವರ್ಷಗಳ ತಿರುಗಾಟ ನಡೆಸಿದ್ದರು.
ಶೇಣಿ ಪ್ರಶಸ್ತಿ, ದೇರಾಜೆ ಪ್ರಶಸ್ತಿ, ಪುತ್ತೂರು ಯಕ್ಷಾಂಜನೇಯ ಪ್ರಶಸ್ತಿ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ.
ಅವರಿಗೆ ಪತ್ನಿ ದುರ್ಗಾಪರಮೇಶ್ವರೀ, ಪುತ್ರರಾದ ವೆಂಕಟೇಶ್ವರ, ಸತ್ಯಶಂಕರ, ಇಬ್ಬರು ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಇದ್ದಾರೆ.