ಉಡುಪಿ :
ಉಡುಪಿಯ ನೇಜಾರಿನಲ್ಲಿ ನಾಲ್ವರನ್ನು ಕೊಲೆಗೈದ ಆರೋಪಿ ಬೆಳಗಾವಿ ಜಿಲ್ಲೆಯ ಕುಡಚಿಯ ತನ್ನ ಪತ್ನಿಯ ಸಂಬಂಧಿಗಳ ಮನೆಯಲ್ಲಿ ಉಳಿದುಕೊಂಡಿದ್ದ ಬಗ್ಗೆ ಉಡುಪಿ ಪೊಲೀಸರು ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.

ಉಡುಪಿಯ ನೇಜಾರಿನಲ್ಲಿ ನಾಲ್ವರ ಕೊಲೆ ಪ್ರಕರಣದ ಆರೋಪಿಯ ತನಿಖೆಯನ್ನು ಉಡುಪಿ ಪೊಲೀಸರು ಚುರುಕುಗೊಳಿಸಿದ್ದಾರೆ. ಆರೋಪಿ ಪ್ರವೀಣ ಚೌಗಲೆ ತನ್ನ ಪತ್ನಿಯ ಸಂಬಂಧಿಗಳ ಮನೆಯಲ್ಲಿ ತಂಗಿದ್ದ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಉದ್ದೇಶಪೂರ್ವಕವಾಗಿ ಕೊಲೆ ಆರೋಪಿಗೆ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಉಡುಪಿ ಎಸ್ಪಿ ಡಾ.ಕೆ. ಅರುಣ ಪ್ರತಿಕ್ರಿಯಿಸಿದ್ದಾರೆ.

ಉಡುಪಿಯ ನೇಜಾರಿನಲ್ಲಿ ಕೆಲ ದಿನಗಳ ಹಿಂದೆ ನಾಲ್ವರನ್ನು ಕೊಲೆಗೈದ ಪ್ರಕರಣ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಕೊಲೆಯ ನಂತರ ಪ್ರವೀಣ ಚೌಗಲೆ ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಕುಡಚಿಗೆ ಬಂದು ಪತ್ನಿಯ ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿದ್ದ. ಆರೋಪಿಯ ಪತ್ತೆಗೆ ಆರಂಭದಲ್ಲಿ ಐದು ತಂಡಗಳನ್ನು ರಚಿಸಲಾಗಿತ್ತು. ಪ್ರಕರಣ ಮತ್ತಷ್ಟು ಜಟಿಲಗೊಂಡಿದ್ದರಿಂದ ಮತ್ತೆ ಆರು ತಂಡ ರಚಿಸಲಾಗಿತ್ತು. ಈ 11 ತಂಡಗಳು ಎಲ್ಲಾ ಆಯಾಮಗಳಲ್ಲಿ ಪ್ರಕರಣ ಬಯಲಿಗೆಳೆಯಲು ಮುಂದಾಗಿದ್ದವು. ಅತ್ಯಂತ ಸವಾಲಿನಿಂದ ಕೂಡಿದ್ದ ಪ್ರಕರಣ ಭೇದಿಸುವಲ್ಲಿ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಶ್ರಮ ವಹಿಸಿದ್ದರು. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಒಂದೂವರೆ ಲಕ್ಷ ರೂಪಾಯಿ ನಗದು ಪುರಸ್ಕಾರ ನೀಡಲು ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಎಸ್ಪಿ ಪ್ರತಿಕ್ರಿಯಿಸಿದ್ದಾರೆ.

ಆರೋಪಿ ಪ್ರವೀಣ ಚೌಗಲೆ ಈ ಮೊದಲು ಯಾವುದೇ ಅಪರಾಧಗಳಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. 2007ರಲ್ಲಿ ಪುಣೆಯಲ್ಲಿ ಪೊಲೀಸ್ ಇಲಾಖೆಗೆ ಸೇರಿ ತರಬೇತಿ ಅವಧಿಯಲ್ಲಿ ಕೆಲಸ ಬಿಟ್ಟು ಮಂಗಳೂರಿನಲ್ಲಿ ಏರ್ ಇಂಡಿಯಾ ಸಂಸ್ಥೆ ಸೇರಿಕೊಂಡಿದ್ದ. ಎಂಟು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ ಅಯ್ನಾಜ್ ಎಂಬ ಯುವತಿ ಜೊತೆ ಸ್ನೇಹ ಬೆಳೆಸಿಕೊಂಡಿದ್ದ. ಇಬ್ಬರ ನಡುವೆ ಸ್ನೇಹ ಇತ್ತು. ಆಕೆಯನ್ನು ವಿಪರೀತವಾಗಿ ಹಚ್ಚಿಕೊಂಡಿದ್ದ. ಆಕೆಗೆ ಹಲವಾರು ರೀತಿಯಲ್ಲಿ ಸಹಾಯ ಮಾಡಿದ್ದ. ಆಕೆಗೆ ಫ್ಲ್ಯಾಟ್ ನಿಂದ ಉದ್ಯೋಗ ಸ್ಥಳಕ್ಕೆ ಓಡಾಡಲು ತನ್ನ ಬೈಕನ್ನು ಸಹ ನೀಡಿದ್ದ. ಆದರೆ ಆಕೆ ಇದಕ್ಕೆ ಒಪ್ಪದೇ ಇದ್ದರಿಂದ ಅತ್ಯಂತ ಪೂರ್ವಸಿದ್ಧತೆ ಮಾಡಿಕೊಂಡು ಕೊಲೆಗೈಯಲು ಬಂದಿದ್ದ ಎಂದು ಎಸ್ ಪಿ ತಿಳಿಸಿದರು.

ಆರೋಪಿ ಮತ್ತು ಮೃತ ಯುವತಿಯ ಮೊಬೈಲ್ ವಶಪಡಿಸಿಕೊಳ್ಳಲಾಗಿದ್ದು ತಾಂತ್ರಿಕ ಸಾಕ್ಷ್ಯಗಳ ಪರಿಶೀಲನೆ ನಡೆಯುತ್ತಿದೆ. ಏಕಮುಖದ ಪ್ರೀತಿಯ ಪರಿಣಾಮ ಯುವತಿಯ ಮನೆಗೆ ಕೆಲದಿನಗಳ ಹಿಂದೆ ತೆರಳಿ ಆಕೆ ಸಹಿತ ನಾಲ್ವರನ್ನು ಭೀಕರವಾಗಿ ಕೊಲೆಗೈದು ನಂತರ ಚಾಕುವನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿ ಅಡುಗೆ ಮನೆಯಲ್ಲಿ ಇಟ್ಟಿದ್ದ. ಇದೀಗ ಪೊಲೀಸರು ಚೌಗಲೆ, ಕೊಲೆಗೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.

ಪತ್ನಿಗೂ ಸುಳ್ಳು ಹೇಳಿ ಯಾವುದೇ ಅನುಮಾನ ಬಾರದಂತೆ ನಡೆದುಕೊಂಡಿದ್ದ. ಆರೋಪಿ ಆರ್ಥಿಕವಾಗಿ ಬಲಿಷ್ಠನಾಗಿದ್ದ. ತಿಂಗಳಿಗೆ 70,000 ವೇತನ ಪಡೆಯುತ್ತಿದ್ದ. ಆತನ ಐಷಾರಾಮಿ ಜೀವನ, ಬ್ಯಾಂಕ್ ಖಾತೆ ಹಾಗೂ ಆಸ್ತಿ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಸ್ ಪಿ ಪ್ರತಿಕ್ರಿಯಿಸಿದ್ದಾರೆ.