ಬೆಂಗಳೂರು : ಧರ್ಮ-ಜಾತಿ ಹೆಸರಲ್ಲಿ ಸಮಾಜವನ್ನು ಒಡೆಯುತ್ತಾ ಹೋದಂತೆ ಅಸಮಾನತೆ ಹೆಚ್ಚುತ್ತದೆ ಎಂದು ಸಿ.ಎಂ.ಸಿದ್ದರಾಮಯ್ಯ ನುಡಿದರು.

ಗಾಂಧಿ ಸ್ಮಾರಕ ನಿಧಿಯ 75ನೇ ವರ್ಷದ ಸಂಸ್ಮರಣೆಗಾಗಿ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ “21ನೇ ಶತಮಾನಕ್ಕೆ ಮಹಾತ್ಮಗಾಂಧೀಜಿ” ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಜಾತಿ ವ್ಯವಸ್ಥೆ ಕಾರಣದಿಂದ ಬಹು ಜನರು ಶಿಕ್ಷಣದಿಂದ ವಂಚಿತರಾದರು. ಈ ಕಾರಣಕ್ಕೆ ಅಸಮಾನತೆ ಹೆಚ್ಚಾಯ್ತು. ವಿದ್ಯಾವಂತರೇ ಹೆಚ್ಚೆಚ್ಚು ಜಾತಿವಾದಿಗಳಾಗುತ್ತಿರುವುದು ದುರಂತ. ಜಾತಿ ಅಸಮಾನತೆಯ ಪೋಷಕರೇ ಮಹಾತ್ಮಗಾಂಧಿಯವರನ್ನು ಕೊಂದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಾಂಧೀಜಿ ವಿಚಾರಗಳು, ಸಮಾಜಕ್ಕೆ ನೀಡಿದ ಮಾರ್ಗದರ್ಶನಗಳು 20ನೇ ಶತಮನಕ್ಕೆ ಮಾತ್ರ ಸೀಮಿತವಾಗಿಲ್ಲ. ಈಗಿನ ಕಾಲಕ್ಕೂ ಪ್ರಸ್ತುತವಾಗಿವೆ.‌ ಗಾಂಧೀಜಿಯವರು ಶಾಂತಿ, ಸತ್ಯ, ನ್ಯಾಯ ಮತ್ತು ಬ್ರಾತೃತ್ವವನ್ನು ಬದುಕಿನುದ್ದಕ್ಕೂ ಆಚರಿಸಿಕೊಂಡು ಬಂದಿದ್ದಾರೆ. ಇಡೀ ವಿಶ್ವವೇ ಪರಸ್ಪರ ಪ್ರೀತಿಸುವ ಗುಣವನ್ನು ರೂಢಿಸಿಕೊಂಡರೆ ಇಡೀ ಸಮಾಜ ನೆಮ್ಮದಿಯಿಂದ ಇರಬಹುದು ಎಂದರು.

ಮನುಷ್ಯ ತನ್ನ ನೆಮ್ಮದಿಗಾಗಿ ಬೇರೆ ಗ್ರಹಗಳನ್ನು ಹುಡುಕಿಕೊಂಡು ಹೋಗುವಂತಾಗಬಾರದು ಎನ್ನುವ ಸ್ಟೀಫನ್ ಹಾಕಿಂಗ್ ಅವರ ಮಾತನ್ನು ಪ್ರಸ್ತಾಪಿಸಿ, ಮನುಷ್ಯ ಮನುಷ್ಯರ ನಡುವೆ ಸಹಿಷ್ಣುತೆ ರೂಢಿಸಿಕೊಳ್ಳದಿದ್ದರೆ ಸರ್ವನಾಶವಾಗುತ್ತದೆ. ಕೋಮು ಭಾವನೆ ಹೀಗೇ ಬೆಳೆದರೆ ಕವೆಂಪು ಅವರ ವಿಶ್ವ ಮಾನವ ಆಶಯ ಈಡೇರುವುದು ಕಷ್ಟವಾಗುತ್ತದೆ ಎಂದರು.

ಪ್ರಕೃತಿ ನಮ್ಮ ಅಗತ್ಯಗಳನ್ನು ಈಡೇರಿಸುತ್ತದೆಯೇ ಹೊರತು, ದುರಾಸೆಗಳನ್ನು ಅದು ಪೂರೈಸುವುದಿಲ್ಲ ಎನ್ನುವುದು ಗಾಂಧಿಯವರ ನಂಬಿಕೆಯಾಗಿತ್ತು. ಕೇರಳದ ವಯನಾಡ್ ಮತ್ತು ರಾಜ್ಯದ ನಾನಾ ಕಡೆ ನಡೆಯುತ್ತಿರುವ ಪರಿಸರ ಅವಘಡಗಳಿಗೆ ಮನುಷ್ಯನ ದುರಾಸೆಗಳೇ ಕಾರಣವಾಗಿದೆ ಎಂದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರೆ ಅವರ ಕಾಲಗುಣದಿಂದ ರಾಜ್ಯಕ್ಕೆ ಬರಗಾಲ ಬರುತ್ತದೆ ಎಂದು ಸಾರ್ವಜನಿಕ ವ್ಯಕ್ತಿಗಳೇ ಮೌಡ್ಯ ಬಿತ್ತುವ ಕುಟಿಲ ಪ್ರಯತ್ನ ಮಾಡಿದ್ದರು. ಆದರೆ ಈಗ ಸಿಕ್ಕಾಪಟ್ಟೆ ಮಳೆ ಬರುತ್ತಿದೆ

ಬಹಳ ಮಂದಿ ಶಿಕ್ಷಿತರೇ ಕಂದಾಚಾರ, ಕರ್ಮ ಸಿದ್ಧಾಂತ, ಮೌಢ್ಯವನ್ನು ಆಚರಿಸುತ್ತಾರೆ. ಇದಕ್ಕೆ ಸರಿಯಾದ ವೈಜ್ಞಾನಿಕ ಶಿಕ್ಷಣದ ಕೊರತೆಯೇ ಕಾರಣ. 850 ವರ್ಷಗಳ ಹಿಂದೆಯೇ ಬಸವಾದಿ ಶರಣರು ಕರ್ಮ ಸಿದ್ಧಾಂತವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಆದರೆ ಈಗಿನ ಕೆಲವು ಶಿಕ್ಷಿತರೇ ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನೆಹರೂ ಅವರು ವೈಜ್ಞಾನಿಕ ಮತ್ತು ವೈಚಾರಿಕ ಮಾರ್ಗದಲ್ಲಿ ಸಮಾಜವನ್ನು ಸನ್ನದ್ದಗೊಳಿಸಿ ದೇಶವನ್ನು ಮುನ್ನಡೆಸುತ್ತಿದ್ದರು ಎಂದರು.

ಸರ್ವರನ್ನೂ ಒಳಗೊಳ್ಳುವ ಮತ್ತು ಅಹಿಂಸೆ ಗಾಂಧಿಯವರ ಮಾರ್ಗವಾಗಿತ್ತು. ಇದನ್ನು ಯುವಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ.

ದೇಶದ ಶೇ85 ರಷ್ಟು ಆಸ್ತಿ ಶೇ1 ಶ್ರೀಮಂತರ ಕೈಗೆ ಸೇರುತ್ತಿದೆ. ಇದು ಅಪಾಯಕಾರಿ. ಈ ಆರ್ಥಿಕ ಅಸಮಾನತೆ ಹೋಗಲಾಡಿಸಲು ಗಾಂಧಿಯವರು ವಿಚಾರಗಳಲ್ಲಿ ಮಾರ್ಗಗಳಿವೆ ಎಂದರು.

ಮಹಾತ್ಮಗಾಂಧಿಯವರು‌ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ನ ಬೆಳಗಾವಿ ಅಧಿವೇಶನದ ಶತಮಾನೋತ್ಸವವನ್ನು ಹೆಚ್ಚು ಅರ್ಥಪೂರ್ಣವಾಗಿ ಆಚರಿಸುತ್ತೇವೆ ಎಂದರು.

ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಈಡೇರಿಸಬೇಕಾಗಿದೆ.‌ ಗಾಂಧಿಯವರ ಆಶಯದಂತೆ ರಾತ್ರಿ 12 ಗಂಟೆಗೂ ನಮ್ಮ ಹೆಣ್ಣು ಮಕ್ಕಳು ನಿರ್ಭಯದಿಂದ ಓಡಾಡುವಂತಾಗಬೇಕಿದೆ ಎಂದರು.

ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ರಾಮಚಂದ್ರ ರಾಹಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಕಾರ್ಯಾಧ್ಯಕ್ಷ ವಿಶುಕುಮಾರ್ , ನವದೆಹಲಿ ಸ್ಮಾರಕ ನಿಧಿ ಅಧ್ಯಕ್ಷ ಸಂಜೋಯ್ ಸಿಂಗ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

ರಾಜ್ಯಪಾಲರ ಸಂವಿಧಾನ ಬಾಹಿರ ನಿರ್ಣಯದ ಬಗ್ಗೆ ವರಿಷ್ಠರಿಗೆ ವಿವರಣೆ : ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ವರಿಷ್ಠರೊಂದಿಗೆ ಚರ್ಚೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಹಾಗೂ ವಿಪಕ್ಷಗಳ ನಡೆ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಗಾಂಧಿಭವನದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ನಿನ್ನೆ ಉಪಮುಖ್ಯಮಂತ್ರಿಗಳು, ಗೃಹ ಸಚಿವರು ಸೇರಿದಂತೆ ಕೆಲ ಸಚಿವರೊಂದಿಗೆ ನವದೆಹಲಿಗೆ ತೆರಳಾಗಿತ್ತು. ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಪಕ್ಷದ ವರಿಷ್ಠರಿಗೆ ವಿವರಿಸಲಾಗಿದೆ. ವಿಪಕ್ಷಗಳು ಮುಡಾ ಪ್ರಕರಣಕ್ಕೆ ಪಾದಯಾತ್ರೆ ಮಾಡಿದ್ದು, ಅದನ್ನು ರಾಜಕೀಯವಾಗಿ ಎದುರಿಸುವ ಬಗ್ಗೆ ಚರ್ಚಿಸಲಾಗಿದೆ. ನಮ್ಮ ಸರ್ಕಾರ ರಾಜ್ಯಪಾಲರು ಕೊಟ್ಟಿರುವ ಅನುಮತಿ ಕಾನೂನು ಬಾಹಿರ ಮತ್ತು ಸಂವಿಧಾನ ಬಾಹಿರವಾಗಿದೆ ಎಂದು ತಿಳಿಸಿ, ರಾಜ್ಯಪಾಲರ ನಿರ್ಣಯವನ್ನು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದು, ವಿಚಾರಣೆ ಆಗಸ್ಟ್ 29 ಕ್ಕೆ ಮುಂದೂಡಿದೆ. ಸಚಿವ ಸಂಪುಟದಲ್ಲಿಯೂ ಅವರ ನಿರ್ಣಯವನ್ನು ಸ್ಪಷ್ಟವಾಗಿ ಖಂಡಿಸಿರುವ ಬಗ್ಗೆಯೂ ವರಿಷ್ಠರಿಗೆ ವಿವರಿಸಲಾಗಿದೆ ಎಂದರು.

*ಎಲ್ಲಾ ಸಾಧ್ಯತೆಗಳಿಗೂ ಅವಕಾಶವಿದೆ*

ರಾಜ್ಯಪಾಲರ ನಡೆಯ ವಿರುದ್ಧ ಮಾನ್ಯ ರಾಷ್ಟ್ರಪತಿಗಳಿಗೆ ದೂರು ನೀಡುವ ಬಗ್ಗೆ ನವದೆಹಲಿಯಲ್ಲಿ ಚರ್ಚೆಯಾಗಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಈ ಬಗ್ಗೆ ಎಲ್ಲಾ ಸಾಧ್ಯತೆಗಳಿಗೂ ಅವಕಾಶವಿದೆ ಎಂದರು.

*ವಾಪಸ್ಸಾಗಿರುವ ಬಿಲ್ ಗಳ ಪರಿಶೀಲನೆ*

ಸರ್ಕಾರ ಸಲ್ಲಿಸಿದ ಬಿಲ್ ಗಳನ್ನು ರಾಜ್ಯಪಾಲರು ವಾಪಸ್ಸು ಕಳಿಸಿದ್ಧು, ರಾಜಭವನ ಮತ್ತು ಸರ್ಕಾರದ ನಡುವೆ ಸಂಘರ್ಷ ಪ್ರಾರಂಭವಾಗಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ, ಆರು ಮಸೂದೆಗಳನ್ನು ವಾಪಸ್ಸು ಕಳಿಸಲಾಗಿದ್ದು, ಈ ಬಗ್ಗೆ ಮತ್ತೊಮ್ಮೆ ಸಚಿವಸಂಪುಟದಲ್ಲಿ ಚರ್ಚಿಸಲಾಗುವುದು. ರಾಜ್ಯಪಾಲರಿಗೆ ಸಲ್ಲಿಸಲಾಗಿದ್ದ ಮಸೂದೆಗಳು, ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಅಂಗೀಕೃತಗೊಂಡಿದ್ದರಿಂದ , ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

*ದರ ಹೆಚ್ಚಳದ ಬಗ್ಗೆ ಚರ್ಚಿಸಿ ಕ್ರಮ:*

ಸರ್ಕಾರ ಬಸ್ ದರಗಳನ್ನು ಹೆಚ್ಚಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಬಸ್ ದರದಂತೆಯೇ ನೀರಿನ ದರವನ್ನು ಏರಿಸಲಾಗುವುದು ಎಂದಿದ್ದರು. ಆದರೆ ಯಾವುದೇ ತೀರ್ಮಾನವನ್ನು ಇನ್ನೂ ಕೈಗೊಂಡಿಲ್ಲ. ನೀರಿನ ದರವನ್ನೂ ಬಹಳ ವರ್ಷಗಳಿಂದ ಏರಿಸಿಲ್ಲ. ಜಲಮಂಡಳಿಯಲ್ಲಿ ಕಷ್ಟ ಪರಿಸ್ಥಿತಿಯಿದ್ದು, ದರಗಳನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕೆಪಿಎಸ್ ಸಿ ಪರೀಕ್ಷೆ ಬಗ್ಗೆ ಗೊಂದಲವಿರುವ ಬಗ್ಗೆ ಮಾತನಾಡುತ್ತಾ, ಪರೀಕ್ಷೆ ಬಗ್ಗೆ ಗೊಂದಲವಿಲ್ಲ. ಪರೀಕ್ಷೆಯ ದಿನಾಂಕವನ್ನು ಮುಂದೂಡಲಾಗುವುದಿಲ್ಲ. ಕೃಷ್ಣಜನ್ಮಾಷ್ಟಮಿಯಂದು ಇರುವ ಪರೀಕ್ಷೆಯ ದಿನಾಂಕವನ್ನು ಬದಲಾಯಿಸಲಾಗಿದೆ ಎಂದರು.

ನಾನು ಮತ್ತು ಕಾಮ್ರೇಡ್ ಸೂರ್ಯನಾರಾಯಣರಾವ್ ಒಟ್ಟಿಗೇ ವಿಧಾನಸಭೆ ಪ್ರವೇಶಿಸಿದ್ದೆವು: ಸಿ.ಎಂ.ಸಿದ್ದರಾಮಯ್ಯ

*ಕಾಮ್ರೇಡ್ ಸೂರ್ಯನಾರಾಯಣ್ ಸದನದ ಒಳಗೆ ಮತ್ತು ಹೊರಗೂ ಹೋರಾಟಗಾರರಾಗಿದ್ದರು: ಸಿಎಂ

ಬೆಂಗಳೂರು : ಕಾಮ್ರೇಡ್ ಸೂರ್ಯನಾರಾಯಣ್ ಸದನದ ಒಳಗೆ ಮತ್ತು ಹೊರಗೂ ಹೋರಾಟಗಾರರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ಸೂಚಿಸಿದರು.

ಕಾಮ್ರೇಡ್ ಸೂರ್ಯನಾರಾಣರಾವ್ ಅವರ ಜನ್ಮ ಶತಮಾನೋತ್ಸವ ಪ್ರಯುಕ್ತ ಟೌನ್ ಹಾಲ್ ನಲ್ಲಿ “ಕರ್ನಾಟಕದ ಅಭಿವೃದ್ಧಿಯಲ್ಲಿ ಕಾರ್ಮಿಕ‌ ಚಳವಳಿಯ ಪಾತ್ರ” ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.‌

ಶ್ರಮಿಕರ ಧ್ವನಿಯಾಗಿ ಸೂರ್ಯನಾರಾಯಣ್ ರಾವ್ ಅವರು ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸುತ್ತಿದ್ದರು.

ಯಾವುದೇ ವಿಚಾರವಾದರೂ ಸರಿ ಸಂಪೂರ್ಣ ಸಿದ್ಧತೆ ಮಾಡಿಕೊಂಡು ಬರುತ್ತಿದ್ದರು. ಹೀಗಾಗಿ ಇವರ ಮಾತು ಮತ್ತು ಭಾಷಣ ಕೇಳಲು ನಾವು ಕಾತರರಾಗಿರುತ್ತಿದ್ದೆವು ಎಂದರು.

ಸೂರ್ಯನಾರಾಯಣ್ ರಾವ್ ಅವರಿಗೆ ಬದ್ಧತೆ ಮತ್ತು ಕಾಳಜಿ ಇತ್ತು. ಕಮ್ಯುನಿಸ್ಟ್ ಕಾರ್ಯಕರ್ತರು ಸಾಮಾನ್ಯವಾಗಿ ಅಧಿಕಾರಕ್ಕಾಗಿ ಹೆಚ್ಚು‌ಆಸೆ ಪಡುವವರಲ್ಲ. ಹೋರಾಟಕ್ಕೆ ಹೆಚ್ಚು ಆಧ್ಯತೆ ಕೊಡುತ್ತಿದ್ದರು. ಜನರ ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೂ ಸದನದ ಒಳಗೆ ಪಟ್ಟು ಬಿಡದೆ ಹೋರಾಟ ನಡೆಸುತ್ತಿದ್ದರು ಎಂದು ಮೆಚ್ಚುಗೆ ಸೂಚಿಸಿದರು.

ನಾನು ಕಾರ್ಮಿಕ ಸಚಿವನಾಗಿದ್ದಾಗ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವವರೆಗೂ ಕುಳಿತಲ್ಲಿಂದ ಮೇಲೇಳುತ್ತಿರಲಿಲ್ಲ ಎಂದರು.

ಈಗ ಸುಳ್ಳುಗಳನ್ನೇ ಸತ್ಯ ಮಾಡುವ ಹಿಟ್ಲರ್ ಮನಸ್ಥಿತಿಯ ರಾಜಕಾರಣಿಗಳು ಹೆಚ್ಚಾಗಿದ್ದಾರೆ. ದಣಿವರಿಯದ ಹೋರಾಟಗಾರರಾಗಿದ್ದ ಕಾಮ್ರೇಡ್ ಸೂರಿ ಸದಾ ಸತ್ಯದ ಮೂಲಕ ಸರ್ಕಾರಕ್ಕೆ ಎಚ್ಚರಿಸುತ್ತಿದ್ದರು. ಸದನದ ಒಳಗಾಗಲಿ, ಹೊರಗಾಗಲಿ ಶಾಂತಿ ಕದಡುವ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿರಲಿಲ್ಲ ಎಂದರು.

ನಮ್ಮ ಸರ್ಕಾರ ದುಡಿಯುವ ವರ್ಗದ ಏಳಿಗೆಗಾಗಿ ಕಾರ್ಯಕ್ರಮಗಳನ್ನು ರೂಪಿಸಿದೆ. ನಮ್ಮ ಸರ್ಕಾರ ಸದಾ ನಿಮ್ಮ ಪರವಾಗಿ, ಕಾರ್ಮಿಕರ ಪರವಾಗಿ ಇರುತ್ತದೆ. ನಾವು ಕಾರ್ಮಿಕರ ಪರವಾಗಿ ಕಾರ್ಯಕ್ರಮ ರೂಪಿಸಿದ್ದನ್ನು, ಗ್ಯಾರಂಟಿಗಳನ್ನು ನೀಡಿದ್ದನ್ನು ಬಿಜೆಪಿ-ಆರ್ ಎಸ್ ಎಸ್ ನಂತಹ ಬಲಪಂಥೀಯ ಸಂಘಟನೆಗಳು ವಿರೋಧಿಸುತ್ತಿವೆ ಎಂದರು.

*ದುಡಿಯುವ ವರ್ಗದ ಹೋರಾಟದ ಮ್ಯೂಸಿಯಂ ರಚನೆಗೆ ಕ್ರಮ*

ದುಡಿಯುವ ವರ್ಗದ ಹೋರಾಟದ ಮ್ಯೂಸಿಯಂ ರಚನೆಗೆ ಕ್ರಮ ಕೈಗೊಳ್ಳುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಿಎಂ‌ ಭರವಸೆ ನೀಡಿದರು.

ಕಾಮ್ರೇಡ್ ಬಿಜೆಕೆ ನಾಯರ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ CITU ಪ್ರಧಾನ ಕಾರ್ಯದರ್ಶಿ ತಪನ್ ಸೇನ್, ಕಾಮ್ರೇಡ್ ಸೂರ್ಯನಾರಾಯಣ್ ಅವರ ಪುತ್ರಿ ಶ್ರೀಮತಿ ರೇಖಾ ಸೇರಿ ಹಲವು ಹೋರಾಟಗಾರರು ಉಪಸ್ಥಿತರಿದ್ದರು.