
ಪುತ್ತೂರು: ಕಳೆದ ನಾಲ್ಕು ದಿನಗಳ ಹಿಂದೆ ಕೊಳ್ತಿಗೆ ಗ್ರಾಮದಲ್ಲಿ ಆನೆ ದಾಳಿಯಿಂದ ಮೃತಪಟ್ಟಿದ್ದು ಘಟನೆಯ ಬಳಿಕ ಜನ ಭಯಗೊಂಡಿದ್ದು , ಆನೆಯನ್ನು ಓಡಿಸಲು ಕ್ರಮ ಕೈಗೊಳ್ಳುವಂತೆ ನಾನು ಅರಣ್ಯ ಸಚಿವರಲ್ಲಿ ಮನವಿ ಮಾಡಿದ್ದು , ಸರಕಾರ ಮನವಿಗೆ ಸ್ಪಂದಿಸಿದ್ದು ಆನೆ ಓಡಿಸಲು ಇಟಿಎಫ್ ತಂಡವನ್ನು ಕಳುಹಿಸಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.
ಚಿಕ್ಕಮಗಳೂರಿನಿಂದ ಇಟಿಎಫ್ ತಂಡ ಆಗಮಿಸಿದ್ದು ಇವರು ಆನೆಯನ್ನು ಓಡಿಸುವ ಕೆಲಸವನ್ನು ಮಾಡಲಿದ್ದಾರೆ. ಈ ತಂಡದ ಬಳಿ ಆನೆ ಓಡಿಸುವಲ್ಲಿ ಬೇಕಾದ ಮದ್ದುಗುಂಡುಗಳು ಸೇರಿದಂತೆ ಇತರೆ ಪರಿಕರಗಳು ಇದೆ. ಮೇ.5 ರಿಂದ ಇವರ ಕಾರ್ಯಾಚರಣೆ ಪ್ರಾರಂಭವಾಗಲಿದೆ. ಕೊಳ್ತಿಗೆ ಗ್ರಾಮದ ವಿವಿಧ ಕಡೆಗಳಲ್ಲಿ ಈ ತಂಡದ ಕಾರ್ಯಾಚರಣೆ ನಡೆಯಲಿದೆ.ದಟ್ಟ ಕಾಡುಗಳಿಂದ ಆಹಾರ ಹುಡುಕಿ ನಾಡಿಗೆ ಬಂದ ಆನೆಗಳನ್ನು ಮತ್ತೆ ಕಾಡಿಗೆ ಅಟ್ಟುವ ಕೆಲಸವನ್ನು ತಂಡ ಮಾಡಲಿದೆ ಎಂದು ಶಾಸಕರು ತಿಳಿಸಿದರು.
ಜನ ಭಯಪಡಬೇಕಿಲ್ಲ:
ಗ್ರಾಮಸ್ಥರು ಯಾವುದೇ ಭಯಪಡಬೇಕಾದ ಅಗತ್ಯವಿಲ್ಲ. ಕಾಡಿನಿಂದ ಬಂದು ದಿಕ್ಕು ತಪ್ಪಿದ ಆನೆ ಕೊಳ್ತಿಗೆ ರಬ್ಬರ್ ತೋಟಕ್ಕೆ ಬಂದು ಮಹಿಳೆಯನ್ನು ಕೊಂದು ಹಾಕಿತ್ತು .ಸಾವನ್ನಪ್ಪಿದ ಮಹಿಳೆಗೆ ಸರಕಾರದಿಂದ ಪರಿಹಾರವನ್ನು ಕೊಡಿಸುವ ಕೆಲಸವನ್ನು ಮಾಡಲಾಗಿದೆ. ಆನೆಯನ್ನು ಓಡಿಸಿದ ಬಳಿಕ ಮತ್ತೆ ಆನೆ ಬರುವುದು ಅಪರೂಪ ಜನ ಈ ಬಗ್ಗೆ ಆತಂಕ ಪಡಬೇಕಿಲ್ಲ ಎಂದುಶಾಸಕರು ತಿಳಿಸಿದರು.