ಬೆಳಗಾವಿ : ಲೋಕಸಭಾ ಚುನಾವಣೆಯಲ್ಲಿ ಬಳಸುವ ಇ.ವಿ.ಎಮ್. ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಬಳಸುವಾಗ ಗಡಿ ಕನ್ನಡಿಗರಿಗೆ ಆಗಬಹುದಾದ ಭಾಷಾ ತಾರತಮ್ಯ ಅನ್ಯಾಯವನ್ನು ಸರಿಪಡಿಸುವ ಕುರಿತು ಇದೀಗ ಬೆಳಗಾವಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರು ಚುನಾವಣಾ ಆಯೋಗದ ಗಮನ ಸೆಳೆದಿದ್ದಾರೆ.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಚಿಕ್ಕೋಡಿ, ಬೆಳಗಾವಿ, ಬೀದರ, ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರಗಳಲ್ಲಿ ಬಳಸುವ ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ಕನ್ನಡದ ಜೊತೆಗೆ ಮರಾಠಿಯಲ್ಲಿಯೂ ಸಹ ಮುದ್ರಿಸಲು ಚುನಾವಣಾ ಆಯೋಗವು ನಿರ್ದೇಶನ ನೀಡಿದೆಯೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಮತಕ್ಷೇತ್ರಗಳಲ್ಲಿ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಮರಾಠಿ ಭಾಷೆಯನ್ನು ಬಳಸಲು ಆದೇಶ ನೀಡಲಾಗಿದೆಯೆಂದು ಹೇಳಲಾಗುತ್ತಿದೆ. ಆದರೆ ಮಹಾರಾಷ್ಟ್ರದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಾದ ಸೊಲ್ಲಾಪುರ, ಸಾಂಗ್ಲಿ, ಜತ್ತ, ಅಕ್ಕಲಕೋಟಗಳಲ್ಲಿ ಮರಾಠಿಯ ಜೊತೆಗೆ ಕನ್ನಡವನ್ನು ಬಳಸುವ ಸಂಬಂಧ ಆಯೋಗವು ನಿರ್ಧಾರ ಕೈಕೊಂಡಿಲ್ಲ. ಕೇವಲ ಕರ್ನಾಟಕದ ನಾಲ್ಕು ಲೋಕಸಭಾ ಮತಕ್ಷೇತ್ರಗಳಲ್ಲಿ ಕನ್ನಡ ಜೊತೆಗೆ ಮರಾಠಿಯನ್ನು ಬಳಸಲು ಆದೇಶ ನೀಡುವ ಮೂಲಕ ಆಯೋಗವು ಗಡಿ ಭಾಗದ ಕನ್ನಡಿಗರಿಗೆ ಅನ್ಯಾಯ ಮಾಡಿದೆ. ಭಾಷಾ ತಾರತಮ್ಯವನ್ನು ಎಸಗಿದೆ. ಅದೇ ರೀತಿ ಗೋವೆಯಲ್ಲೂ ಸಹ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅಲ್ಲಿ ಕನ್ನಡ ಬಳಸುವ ಸಂಬಂಧ ಯಾವುದೇ ನಿರ್ದೇಶನ ನೀಡಲಾಗಿಲ್ಲ. ಆದ್ದರಿಂದ ತಾವು ಈ ಭಾಷಾ ತಾರತಮ್ಯವನ್ನು ಹೋಗಲಾಡಿಸಿ ಮಹಾರಾಷ್ಟ್ರ ಹಾಗೂ ಗೋವೆಯಲ್ಲಿರುವ ಹೊರನಾಡ ಕನ್ನಡಿಗರಿಗೆ ನ್ಯಾಯ ಒದಗಿಸಿಕೋಡಬೇಕೆಂದು
ಅವರು ಕೋರಿದ್ದಾರೆ.