ಮುಂಬೈ:
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ ಅವರು ಕಾಂಗ್ರೆಸ್‌ ಗೆ ರಾಜೀನಾಮೆ ನೀಡಿದ ಒಂದು ದಿನದ ನಂತರ ಇಂದು, ಮಂಗಳವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಚವಾಣ ಅವರು ಫೆಬ್ರವರಿ 14 ರಂದು ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ ಪಕ್ಷಕ್ಕೆ ಆಘಾತ ನೀಡಿದ ಚವಾಣ ಅವರು ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ಸಿನ ನಿರ್ಧಾರಗಳ ಬಗ್ಗೆ ಅವರು ಅತೃಪ್ತರಾಗಿದ್ದರು ಎಂದು ವರದಿಯಾಗಿದೆ.
ಚವಾಣ ಹೇಳಿಕೆಯಲ್ಲಿ, “ನಾನು 12/02/2024 ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನನ್ನ ರಾಜೀನಾಮೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ. ಅವರು ಸೋಮವಾರ ಮುಂಬೈನಲ್ಲಿ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು.

ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಗೃಹ ಸಚಿವ ಎಸ್.ಬಿ. ಚವಾಣ ಅವರ ಪುತ್ರ ಅಶೋಕ ಚವಾಣ ಅವರ ಕ್ರಮವು ಶನಿವಾರ ಹಿರಿಯ ಕಾಂಗ್ರೆಸ್ ನಾಯಕ ಬಾಬಾ ಸಿದ್ದಿಕ್ ರಾಜೀನಾಮೆ ನೀಡಿದ ಎರಡು ದಿನಗಳ ನಂತರ ಬಂದಿದೆ. ತಮ್ಮ 48 ವರ್ಷಗಳ ಕಾಂಗ್ರೆಸ್‌ ಜೊತೆಗಿನ ಒಡನಾಟವನ್ನು ಸಿದ್ದಿಕ್ ಕೊನೆಗೊಳಿಸಿದರು.
ಜನವರಿಯಲ್ಲಿ, ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ ಕೂಡ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು, ಕಾಂಗ್ರೆಸ್ ಜೊತೆಗಿನ ಅವರ ಕುಟುಂಬದ 55 ವರ್ಷಗಳ ಒಡನಾಟವನ್ನು ಕೊನೆಗೊಳಿಸಿದರು.
ಅಶೋಕ ಚವಾಣ ಅವರ ರಾಜೀನಾಮೆ ಪ್ರತಿಪಕ್ಷಗಳಿಂದ ತೀವ್ರ ಪ್ರತಿಕ್ರಿಯೆಗಳಿಗೆ ಕಾರಣವಾಯಿತು.

ಬಿಜೆಪಿ ಈಗ “ಕಾಂಗ್ರೆಸ್ ಆಕ್ರಮಿತ ಬಿಜೆಪಿ” ಆಗಿ ವಿಕಸನಗೊಳ್ಳುತ್ತಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಉದ್ಧವ ಠಾಕ್ರೆ ಹೇಳಿದ್ದಾರೆ.
ಇದು ನನ್ನ ವೈಯಕ್ತಿಕ ನಿರ್ಧಾರ. ಯಾರೂ ನನ್ನನ್ನು ಬಿಜೆಪಿ ಸೇರುವಂತೆ ಕೇಳಿಲ್ಲ. ಕೊನೆಯ ಕ್ಷಣದವರೆಗೂ ನಾನು ನನ್ನ ಮಾಜಿ ಸಹೋದ್ಯೋಗಿಗಳ ಜೊತೆಗಿದ್ದೆ. ಆದರೆ ಸನ್ನಿವೇಶಗಳು ಏನೆಂದರೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಗಾಗಿ ನಾನು ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು ಎಂದು ಚವಾಣ ಹೇಳಿದ್ದಾರೆ.