Join The Telegram | Join The WhatsApp |
ಬೆಂಗಳೂರು-
ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದಲ್ಲಿ ವಿದ್ಯಾರ್ಥಿಗಳು ಯಾವುದೇ ವಿಷಯದ ಪರೀಕ್ಷೆಯನ್ನು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆಯಲು ಅವಕಾಶ ಕಲ್ಪಿಸಲು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ 23ನೇ ಸಾಮಾನ್ಯ ಸಭೆ ತೀರ್ಮಾನಿಸಿದೆ.
ಇದರ ಜೊತೆಗೆ ಪ್ರಾದೇಶಿಕ ಭಾಷೆಗಳಲ್ಲಿ ಉನ್ನತ ಶಿಕ್ಷಣವನ್ನು ಪೂರೈಸಬೇಕೆಂಬ ಎನ್‌ಇಪಿ ಆಶಯವನ್ನು ಸಾಧಿಸಲು ಯುಜಿಸಿ ಸೂಚನೆಯಂತೆ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಗುಣಮಟ್ಟದ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದರ ರೂಪುರೇಷೆಯನ್ನು ತೀರ್ಮಾನಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಇದುವರೆಗೂ ಪದವಿ ಮತತ್ತು ಸ್ನಾತಕೋತ್ತರ ಪದವಿಗಳಲ್ಲಿ ಯಾವುದೇ ಒಂದು ವಿಷಯದ ಪರೀಕ್ಷೆಯನ್ನು ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಬರೆಯಲು ಅವಕಾಶವಿತ್ತು. ಆದರೆ ಇನ್ನುಮುಂದೆ ಒಂದೇ ವಿಷಯವನ್ನು ಎರಡು ಭಾಷೆಗಳಲ್ಲಿಯೂ ಬರೆಯಬಹುದು. ವಿದ್ಯಾರ್ಥಿಗಳಿಗೆ ಆಯಾಯ ಪ್ರಶ್ನೆಗೆ ಉತ್ತರಿಸಲು ಯಾವ ಭಾಷೆ ಸೂಕ್ತವೆನಿಸುತ್ತದೋ ಅದರಲ್ಲೇ ಉತ್ತರ ಬರೆಯುವ ಅವಕಾಶ ಕೊಡಲಾಗುವುದು. ಒಂದು ಪ್ರಶ್ನೆಗೆ ಕನ್ನಡದಲ್ಲಿ ಉತ್ತರ ಬರೆದು, ಇನ್ನೊಂದು ಪ್ರಶ್ನೆಗೆ ಇಂಗ್ಲಿಷ್‌ನಲ್ಲಿ ಬೇಕಾದರೂ ಉತ್ತರಿಸಬಹುದು. ಪಾಲಿಟೆಕ್ನಿಕ್ ಶಿಕ್ಷಣದಲ್ಲಿ ಈಗಾಗಲೇ ಈ ಸೌಲಭ್ಯವಿದೆ ಎಂದು ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ಶಿಕ್ಷಣ ಪರಿಷತ್ತಿಗೆ ಇತ್ತೀಚೆಗೆ ನಾಮಕರಣವಾದ ಕೇಂದ್ರೀಯ ಬುಡಕಟ್ಟು ವಿವಿ ಕುಲಪತಿ ಪ್ರೊ ಟಿ.ವಿ.ಕಟ್ಟಿಮನಿ, ಎಂಇಆರ್ ಸಿಕೆ ಎಂಡಿ ಎನ್ ಎಸ್ ಶ್ರೀನಾಥ, ಬಾಷ್ ಗ್ಲೋಬಲ್ ಸಾಫ್ಟೇವೇರ್ ನ ರಾಘವೇಂದ್ರ ಕೃಷ್ಣಮೂರ್ತಿ, ಪ್ರೊ ಎನ್ ಉಷಾರಾಣಿ, ಜೋಗನ್ ಶಂಕರ್ ಸೇರಿದಂತೆ ರಾಜ್ಯದ ಎಲ್ಲ ವಿವಿಗಳ ಕುಲಪತಿ ಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Join The Telegram | Join The WhatsApp |