Join The Telegram | Join The WhatsApp |
ಹಾಜಿಪುರ:
ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಭಾನುವಾರ ಜನಸಮೂಹದ ಮೇಲೆ ವೇಗವಾಗಿ ಬಂದ ಟ್ರಕ್ ನುಗ್ಗಿದ ಪರಿಣಾಮ ಹಲವಾರು ಮಕ್ಕಳು ಸೇರಿದಂತೆ ಕನಿಷ್ಠ 12 ಜನರು ಸಾವಿಗೀಡಾಗಿದ್ದಾರೆ. ವೈಶಾಲಿ ಜಿಲ್ಲೆಯ ಮೆಹನಾರ್ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಅಪಘಾತದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ್ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಾರಣಾಂತಿಕ ಅಪಘಾತದ ನಂತರ ರಕ್ಷಣಾ ಕಾರ್ಯಾಚರಣೆಗಳು ಪ್ರಾರಂಭವಾದವು. ಅಪಘಾತದಲ್ಲಿ ಹಲವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಹಾರದ ರಾಜಧಾನಿ ಪಾಟ್ನಾದಿಂದ ಸುಮಾರು 55-60 ಕಿಮೀ ದೂರದಲ್ಲಿರುವ ಸುಲ್ತಾನ್‌ಪುರ ಗ್ರಾಮದ ಬಳಿ ಸಂತ್ರಸ್ತರು ರಾತ್ರಿ 9 ಗಂಟೆ ಸುಮಾರಿಗೆ ಔತಣಕೂಟವೊಂದರಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಪೊಲೀಸರು ಟ್ರಕ್ ಚಾಲಕ ಮತ್ತು ಸಹಾಯಕನನ್ನು ಬಂಧಿಸಿದ್ದಾರೆ. ಚಾಲಕ ಪಾನಮತ್ತನಾಗಿದ್ದಾನೋ ಇಲ್ಲವೋ ಎಂಬುದು ವೈದ್ಯಕೀಯ ಪರೀಕ್ಷೆಯ ನಂತರವಷ್ಟೇ ಗೊತ್ತಾಗಲಿದೆ ಎಂದು ವೈಶಾಲಿ ಎಸ್ಪಿ ತಿಳಿಸಿದ್ದಾರೆ.
ವೈಶಾಲಿ ಪೊಲೀಸ್ ಅಧೀಕ್ಷಕ ಮನೀಶಕುಮಾರ್, “ಮದುವೆಗಳಿಗೆ ಸಂಬಂಧಿಸಿದ ಸಂಪ್ರದಾಯದ ಭಾಗವಾಗಿ ಮೆರವಣಿಗೆನಡೆಯುತ್ತಿತ್ತು. ಹತ್ತಿರದ ಸುಲ್ತಾನ್‌ಪುರ ಗ್ರಾಮದ ನಿವಾಸಿಯೊಬ್ಬರ ಮನೆಯಲ್ಲಿ ಕೆಲವೇ ದಿನಗಳಲ್ಲಿ ಮದುವೆಯನ್ನು ನಿಗದಿಪಡಿಸಲಾಗಿತ್ತು. ವೇಗವಾಗಿ ಹೋಗುತ್ತಿದ್ದ ಟ್ರಕ್ ಚಾಲಕ ನಿಯಂತ್ರಣ ಕಳೆದುಕೊಂಡು ಈ ಘಟನೆ ನಡೆದಿದೆ.
ರಾತ್ರಿ 9 ಗಂಟೆಯ ಸುಮಾರಿಗೆ ಮೆರವಣಿಗೆಯು ರಸ್ತೆಬದಿಯಲ್ಲಿರುವ ಮರದ ಮುಂದೆ ಸ್ಥಳೀಯ ದೇವತೆ ‘ಭೂಮಿಯಾ ಬಾಬಾಗೆ ಪ್ರಾರ್ಥನೆ ಸಲ್ಲಿಸಲು ಜನ ಜಮಾಯಿಸಿದಾಗ ಅಪಘಾತ ಸಂಭವಿಸಿದೆ.
ಶಾಸಕ ಮುಖೇಶ್ ರೌಶನ್ ಅವರು ಪ್ರದೇಶಕ್ಕೆ ಧಾವಿಸಿದ್ದಾರೆ. “ಕನಿಷ್ಠ ಒಂಬತ್ತು ಜನರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇತರರನ್ನು ಹಾಜಿಪುರ (ಜಿಲ್ಲಾ ಕೇಂದ್ರ) ನಲ್ಲಿರುವ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮತ್ತು ದಾರಿಯಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಸ್ಥಿತಿ ಗಂಭೀರವಾಗಿರುವವರನ್ನು ಪಾಟ್ನಾದ ಆಸ್ಪತ್ರೆಗಳಿಗೆ ರವಾನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಬಿಹಾರದ ವೈಶಾಲಿಯಲ್ಲಿ ನಡೆದ ಅಪಘಾತ ದುಃಖ ತಂದಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ 2 ಲಕ್ಷ ರೂ ಹಾಗೂ ಗಾಯಗೊಂಡವರಿಗೆ 50,000 ರೂ. ಪರಿಹಾರ ನೀಡಲಾಗುವುದು’ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
Join The Telegram | Join The WhatsApp |