ಅಯೋಧ್ಯೆ: ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಒಂದು ವರ್ಷ ತುಂಬಿದ್ದರಿಂದ ಅಯೋಧ್ಯೆ ಶನಿವಾರ ಭಕ್ತಿ, ಸಂಭ್ರಮದಲ್ಲಿ ಮಿಂದೆದ್ದಿತು. ಭಕ್ತ ಸಾಗರದಲ್ಲಿ ಅಯೋಧ್ಯೆ ಮಿಂದೆದ್ದಿತು.

ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ದೇಶದ ವಿವಿಧ ಭಾಗಗಳಿಂದ ಭಕ್ತರು ಭಾರಿ ಸಂಖ್ಯೆಯಲ್ಲಿ ಅಯೋಧ್ಯೆಗೆ ಬಂದಿದ್ದಾರೆ. ಯಜುರ್ವೇದ ಪಠಣದೊಂದಿಗೆ ವಾರ್ಷಿಕೋತ್ಸವ ಕಾರ್ಯಕ್ರಮಗಳಿಗೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ಗರ್ಭಗೃಹವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬಾಲ ರಾಮನ ಮೂರ್ತಿಗೆ ಅಭಿಷೇಕ ನೆರವೇರಿಸಿದರು. ನಂತರ ಬಾಲ ರಾಮನ ಮೂರ್ತಿಗೆ ಮಹಾ ಆರತಿ ಮಾಡಿ, 56 ಭಕ್ಷ್ಯಗಳ ನೈವೇದ್ಯ ಸಮರ್ಪಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಜನತೆಗೆ ಬಾಲ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ. ಹಲವು ಶತಮಾನಗಳ ತ್ಯಾಗ, ತಪಸ್ಸು ಹಾಗೂ ಹೋರಾಟದ ಫಲವಾಗಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ. ಈ ಮಂದಿರ ನಮ್ಮ ಸಂಸ್ಕೃತಿ ಮತ್ತು ಅಧ್ಯಾತ್ಮ ಪರಂಪರೆಯ ದ್ಯೋತಕವಾಗಿದೆ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಕಸಿತ ಭಾರತ ನಿರ್ಮಾಣ ಮಾಡುವ ನಮ್ಮ ಸಂಕಲ್ಪ ಸಾಕಾರಗೊಳ್ಳುವುದಕ್ಕೆ ರಾಮ ಮಂದಿರವು ಸ್ಫೂರ್ತಿ ನೀಡಲಿದೆ ಎಂಬ ವಿಶ್ವಾಸ ಹೊಂದಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.