ಅಯೋಧ್ಯೆ:
ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವ ಮತ್ತು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮಾಡಲಿರುವ ಅಯೋಧ್ಯೆಯ ರಾಮ ಮಂದಿರವು ಹಲವು ವಿಶೇಷತೆಗಳನ್ನು ಒಳಗೊಂಡಿದೆ.
ರಾಮ ಮಂದಿರದ ವಿಶೇಷತೆಗಳ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇವಾಲಯದ ಪ್ರಮುಖ ವೈಶಿಷ್ಟ್ಯಗಳನ್ನು ಹಂಚಿಕೊಂಡಿದೆ.

* ರಾಮಮಂದಿರವನ್ನು ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ನಾಗರ ವಾಸ್ತುಶಿಲ್ಪವು ಉತ್ತರ ಭಾರತದ ದೇವಾಲಯದ ವಾಸ್ತುಶಿಲ್ಪದ ಶೈಲಿಯಾಗಿದೆ.
* ದೇವಾಲಯದ ಆಯ (ಪೂರ್ವದಿಂದ ಪಶ್ಚಿಮಕ್ಕೆ) 380 ಅಡಿ ಉದ್ದವಿದೆ, 250 ಅಡಿ ಅಗಲವಿದೆ ಹಾಗೂ 161 ಅಡಿ ಎತ್ತರವಿದೆ.
* ದೇವಾಲಯಗಳು ಶಿಖರಗಳೆಂದು ಕರೆಯಲ್ಪಡುವ ಎತ್ತರದ ಪಿರಮಿಡ್ ಗೋಪುರಗಳನ್ನು ಹೊಂದಿದ್ದು, ಮೇಲ್ಭಾಗದಲ್ಲಿ ಕಲಶವಿದೆ. ದೇವಾಲಯಗಳ ಕಂಬಗಳನ್ನು ಸಂಕೀರ್ಣವಾದ ವಿಶೇಷ ವಿನ್ಯಾಸಗಳಿಂದ ಕೆತ್ತಲಾಗಿದೆ. ಗೋಡೆಗಳನ್ನು ಶಿಲ್ಪಗಳು ಮತ್ತು ಉಬ್ಬುಶಿಲ್ಪಗಳಿಂದ ಅಲಂಕರಿಸಲಾಗಿದೆ.
* ದೇವಾಲಯವು ಮೂರು ಅಂತಸ್ತಿನದಾಗಿದ್ದು, ಪ್ರತಿ ಮಹಡಿ 20 ಅಡಿಗಳಷ್ಟು ಎತ್ತರವಿದೆ. ದೇವಾಲಯದಲ್ಲಿ ಒಟ್ಟು 392 ಕಂಬಗಳು, 44 ದ್ವಾರಗಳಿವೆ.

* ದೇವಾಲಯದ ಗರ್ಭಗೃಹವು ದೇವಾಲಯದ ಒಳಗಿನ ಗರ್ಭಗೃಹವಾಗಿದ್ದು, ಅಲ್ಲಿ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ಮುಖ್ಯ ಗರ್ಭಗುಡಿಯಲ್ಲಿ, ಭಗವಾನ್ ಶ್ರೀರಾಮನ ಬಾಲ್ಯದ ಮೂರ್ತಿ (ಶ್ರೀರಾಮ ಲಲ್ಲಾನ ವಿಗ್ರಹ) ಇರಲಿದೆ. ಮತ್ತು ಮೊದಲ ಮಹಡಿಯಲ್ಲಿ ಶ್ರೀರಾಮ ದರ್ಬಾರ್ ಇರಲಿದೆ.
* ಮಂದಿರದ ಪ್ರವೇಶ ದ್ವಾರ ಪೂರ್ವ ದಿಕ್ಕಿನಲ್ಲಿದ್ದು, ಸಿಂಹದ್ವಾರದಿಂದ 32 ಮೆಟ್ಟಿಲುಗಳನ್ನು ಏರಿ ದೇವಾಲಯವನ್ನು ತಲುಪಬೇಕು. ವಿಶೇಷ ಚೇತನರಿಗಾಗಿ ಇಳಿಜಾರು ಪ್ರದೇಶ ಮತ್ತು ಲಿಫ್ಟ್‌ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ.
* ರಾಮ ಮಂದಿರವು ಒಟ್ಟು ಐದು ಮಂಟಪಗಳನ್ನು ಒಳಗೊಂಡಿದ್ದು, ನೃತ್ಯ, ರಂಗ, ಸಭಾ, ಪ್ರಾರ್ಥನೆ ಮತ್ತು ಕೀರ್ತನ ಎಂಬ ಐದು ಮಂಟಪಗಳಿವೆ. ಕಂಬಗಳು ಮತ್ತು ಗೋಡೆಗಳನ್ನು ವಿವಿಧ ದೇವತೆಗಳ ಪ್ರತಿಮೆಗಳು ಅಲಂಕರಿಸುತ್ತವೆ.
* ದೇವಾಲಯದ ಪಾರ್ಕೋಟಾ (ಆಯತಾಕಾರದ ಸಂಯುಕ್ತ ಗೋಡೆ) 732 ಮೀಟರ್ ಉದ್ದ ಮತ್ತು 14 ಅಡಿ ಅಗಲವಿದ್ದು ಮಂದಿರವನ್ನು ಸುತ್ತುವರೆದಿದೆ.

* ದೇವಾಲಯದ ಆವರಣದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಂದಿರಗಳನ್ನು ನಿರ್ಮಾಣ ಮಾಡಲಾಗಿದೆ. ಈ ಮಂದಿರಗಳು ಸೂರ್ಯ ದೇವ, ದೇವಿ ಭಗವತಿ, ಭಗವಾನ್‌ ಗಣೇಶ ಮತ್ತು ಭಗವಾನ್ ಶಿವನಿಗೆ ಸಮರ್ಪಿತವಾಗಿದೆ. ದೇವಾಲಯದ ಉತ್ತರದಲ್ಲಿ ಅನ್ನಪೂರ್ಣ ಮಂದಿರವಿದೆ ಮತ್ತು ದಕ್ಷಿಣದ ದಿಕ್ಕಿನಲ್ಲಿ ಹನುಮಾನ್ ಮಂದಿರ ನಿರ್ಮಿಸಲಾಗಿದೆ.
* ಮಂದಿರದ ಬಳಿ ಒಂದು ಐತಿಹಾಸಿಕ ಬಾವಿ (ಸೀತಾ ಕೂಪ್) ಇದೆ, ಇದು ಪ್ರಾಚೀನ ಯುಗದ ಹಿಂದಿನದು ಎಂದು ನಂಬಲಾಗಿದೆ.
* ದೇವಾಲಯದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ, ಮಾತಾ ಶಬರಿ, ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ನಿಶಾದ ರಾಜ ಮತ್ತು ಗೌತಮ ಮಹರ್ಷಿಯ ಪತ್ನಿ ಅಹಲ್ಯಾ ದೇವಿಯ ಗುಡಿ ಕಟ್ಟಲಾಗಿದೆ.
* ದೇವಾಲಯದ ನೈರುತ್ಯ ದಿಕ್ಕಿನಲ್ಲಿದ್ದ ಪುರಾತನ ಶಿವ ದೇವಾಲಯ ‘ನವರತ್ನ ಕುಬೇರ ತಿಲ’ವನ್ನು ನವೀಕರಿಸಲಾಗಿದ್ದು, ಇದರಲ್ಲಿ ಜಟಾಯು ಮೂರ್ತಿಯನ್ನು ಸಹ ಸ್ಥಾಪಿಸಲಾಗಿದೆ.

* ರಾಮ ಮಂದಿರದಲ್ಲಿ ಎಲ್ಲಿಯೂ ಕಬ್ಬಿಣ ಬಳಸಿಲ್ಲ ಎಂಬುದು ವಿಶೇಷವಾಗಿದೆ. ಅಲ್ಲದೆ ಮಂದಿರದಲ್ಲಿ ನೆಲದ ತೇವಾಂಶ ತಡೆಯುವ ನಿಟ್ಟಿನಲ್ಲಿ ಗ್ರಾನೈಟ್ ಬಳಸಿ 21 ಅಡಿ ಎತ್ತರದ ಸ್ತಂಭ ನಿರ್ಮಿಸಲಾಗಿದೆ.
* ಮಂದಿರದ ಅಡಿಪಾಯವನ್ನು 14-ಮೀಟರ್ ದಪ್ಪದ ರೋಲರ್-ಕಾಂಪ್ಯಾಕ್ಟ್ ಕಾಂಕ್ರೀಟ್ (RCC) ಪದರದಿಂದ ನಿರ್ಮಿಸಲಾಗಿದೆ, ಇದು ನೋಡುಗರಿಗೆ ಕೃತಕ ಬಂಡೆಯ ನೋಟವನ್ನು ನೀಡುತ್ತದೆ.
* ಭಕ್ತಾದಿಗಳಿಗಾಗಿ 25 ಸಾವಿರ ಜನರ ಸಾಮರ್ಥ್ಯದ ಕಟ್ಟಡ ನಿರ್ಮಿಸಲಾಗಿದೆ. ಇದರಲ್ಲಿ ಭಕ್ತಾದಿಗಳಿಗೆ ಲಾಕರ್ಸ್‌, ವೈದ್ಯಕೀಯ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಅಲ್ಲದೆ, ಸಮುಚ್ಚಯದಲ್ಲಿ ಸ್ನಾನದ ಪ್ರದೇಶ, ವಾಶ್‌ ರೂಂಗಳು, ವಾಶ್‌ಬಾಸಿನ್ ಇತ್ಯಾದಿಗಳುಳ್ಳ ಪ್ರತ್ಯೇಕ ಬ್ಲಾಕ್ ಸಹ ಇರಲಿದೆ.
* ಭಾರತೀಯ ಸಂಪ್ರದಾಯವನ್ನು ಅನುಸರಿಸಿ ಮತ್ತು ಸ್ಥಳೀಯ ತಂತ್ರಜ್ಞಾನ ಬಳಸಿಕೊಂಡು ನಿರ್ಮಿಸಲಾಗುತ್ತಿದ್ದು, ಪರಿಸರ ಸಂರಕ್ಷಣೆಗೆ ವಿಶೇಷ ಒತ್ತು ನೀಡಿ ಒಟ್ಟು 70 ಎಕರೆ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಿಸಲಾಗಿದೆ.