ಲಕ್ನೋ: ಸುಪ್ರೀಂಕೋರ್ಟ್ ಆದೇಶದಂತೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಕೊಡಲಾಗಿರುವ ಧನ್ನಿಪುರ ಗ್ರಾಮದ ಭೂಮಿ ನನ್ನದು ಎಂದು ದೆಹಲಿಯ ರಾಣಿ ಪಂಜಾಬಿ ಎಂಬ ಮಹಿಳೆ ಇದೀಗ ತಕರಾರು ತೆಗೆದಿದ್ದು ಅದನ್ನು ಮರಳಿ ಪಡೆಯಲು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾಳೆ. ಆ ಭೂಮಿಗೆ ಸಂಬಂಧಿಸಿ ನನ್ನ ಬಳಿ ಎಲ್ಲಾ ಕಡತಗಳಿವೆ. ಭೂಮಿ ಮರಳಿ ಪಡೆಯಲು ಸುಪ್ರೀಂಕೋರ್ಟ್ ಮೊರೆ ಹೋಗುವೆ. ಆ ಭೂಮಿಯಲ್ಲಿ 1983ರ ವರೆಗೆ ನಾವು ಕೃಷಿ ಮಾಡುತ್ತಿದ್ದೆವು. ಆದರೆ, ತಂದೆಗೆ ಅನಾರೋಗ್ಯ ಆದಕಾರಣ ನಾವು ದೆಹಲಿಗೆ ಸ್ಥಳಾಂತರಗೊಂಡವು. ಅಂದಿನಿಂದ ಆ ಜಾಗವನ್ನು ಅತಿಕ್ರಮಿಸಲಾಗಿದೆ ಎಂದು ರಾಣಿ ಆರೋಪ ಮಾಡಿದ್ದಾರೆ. ಆದರೆ, ಮಸೀದಿ ಸಮಿತಿ ಮುಖ್ಯಸ್ಥ ಝಾಫರ್ ಫಾರೂಕಿ, ಮಹಿಳೆಯ ವಾದವನ್ನು ಅಲಹಾಬಾದ್ ಹೈಕೋರ್ಟ್ 2021 ರಲ್ಲಿ ತಿರಸ್ಕರಿಸಿತ್ತು ಎಂದು ತಿಳಿಸಿದ್ದಾರೆ.