ಗೋಕಾಕ: ಪಶ್ಚಿಮ ಘಟ್ಟ ಹಾಗೂ ಹಿಡಕಲ್ ಜಲಾನಯನ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಘಟಪ್ರಭಾ ನದಿ ತೀರದಲ್ಲಿ ಪ್ರವಾಹವುಂಟಾಗಿದೆ. ಇದರಿಂದ ರೈತರ ಬೆಳೆಗಳು ಭಾಗಶ: ಹಾನಿಯಾಗಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬೆಳೆಗಳು ಮತ್ತು ಹಾನಿಗೊಳಗಾದ ಮನೆಗಳ ಸಮೀಕ್ಷಾ ಕಾರ್ಯವನ್ನು ಕೈಗೊಂಡು ಅರ್ಹ ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಡಲು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರದಂದು ತಾಲೂಕಿನ ಮೆಳವಂಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಭಾ ಗೃಹದಲ್ಲಿ ಆಯೋಜಿಸಿದ್ದ ಮೂಡಲಗಿ ಮತ್ತು ಗೋಕಾಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಈ ಪ್ರವಾಹ ಪೀಡಿತ ಸಮೀಕ್ಷೆ ಕಾರ್ಯಗಳಲ್ಲಿ ಅರ್ಹ ಕುಟುಂಬಗಳನ್ನು ಗುರುತಿಸುವ ಕೆಲಸ ಅಧಿಕಾರಿಗಳು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಸೂಚಿಸಿದರು.
ಘಟಪ್ರಭಾ ನದಿ ತೀರದ ಸುಮಾರು 30 ಗ್ರಾಮಗಳಿಗೆ ಪ್ರವಾಹ ಬಂದಿದ್ದರಿಂದ ರೈತರು ಮತ್ತು ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಜೊತೆಗೆ ಸಾರ್ವಜನಿಕರ ಮನೆಯೊಳಗೆ ನೀರು ನುಗ್ಗಿದೆ. ರಸ್ತೆ-ಸೇತುವೆಗಳು ಸಹ ಹಾಳಾಗಿವೆ. ವಿದ್ಯುತ್ ಕಂಬಗಳು ಮತ್ತು ವಿದ್ಯುತ್ ಪರಿವರ್ತಕ(ಟಿ.ಸಿ)ಗಳು ಸಹ ಸಾಕಷ್ಟು ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಯಾರ ಪ್ರಭಾವಕ್ಕೂ ಒಳಗಾಗದೇ ಸಂತ್ರಸ್ತ ಕುಟುಂಬಗಳನ್ನು ಗುರುತಿಸಿ ಸಮೀಕ್ಷೆ ಕಾರ್ಯಗಳನ್ನು ಕೈಗೊಳ್ಳಬೇಕು. ಹಾನಿಗೊಳಗಾದ ಪ್ರದೇಶಗಳಿಗೆ ಸ್ವತ: ಅಧಿಕಾರಿಗಳು ಭೇಟಿ ನೀಡಿ ವಸ್ತುಸ್ಥಿತಿಯನ್ನು ಮನಗಂಡು ಹಾನಿಗೊಳಗಾದ ಕುಟುಂಬಗಳನ್ನು ಗುರುತಿಸುವ ಕೆಲಸ ಮಾಡಬೇಕು. ಸ್ಥಳೀಯ ಮಟ್ಟದ ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು, ಅಭಿಯಂತರರು ಜೊತೆಗೂಡಿ ಸಮೀಕ್ಷೆಯನ್ನು ಪ್ರಾಮಾಣಿಕವಾಗಿ ನಡೆಸಬೇಕು. ಈ ಸಮೀಕ್ಷೆ ಕಾರ್ಯಗಳ ಪಟ್ಟಿಯಲ್ಲಿ ನಿಜವಾದ ಫಲಾನುಭವಿಗಳನ್ನು ಬಿಟ್ಟು ಬೇರೆ ಯಾರನ್ನಾದರೂ ಸೇರಿಸಿದ್ದೇ ಆದರೆ ಅಂತಹ ಅಧಿಕಾರಿಗಳ ವಿರುದ್ಧ ಮುಲಾಜು ಇಲ್ಲದೇ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈಗಾಗಲೇ ಮೂಡಲಗಿ ತಾಲೂಕಿನಲ್ಲಿ ಅಂದಾಜು 4440 ಹೆಕ್ಟರ್ ಹಾಗೂ ಗೋಕಾಕ ತಾಲೂಕಿನಲ್ಲಿ 3398 ಹೆಕ್ಟರ್ ಸೇರಿದಂತೆ ಒಟ್ಟಾರೆ 7838 ಹೆಕ್ಟರ್ ಪ್ರದೇಶ ಬೆಳೆ ನಾಶವಾಗಿದೆ. ಒಟ್ಟಾರೆ 19595 ಎಕರೆ ಬೆಳೆ ನಾಶವಾಗಿದ್ದು, ಇದರಲ್ಲಿ ಕಬ್ಬು, ಗೋವಿನ ಜೋಳ, ಸೋಯಾಬಿನ್, ಹತ್ತಿ, ಹೆಸರು ಸೇರಿದೆ. ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟರ್‍ಗೆ 17500 ರೂಗಳ ಪರಿಹಾರ ಪ್ರಕಟಿಸಿದೆ. ಜೊತೆಗೆ ಮನೆಗೆ ನೀರು ನುಗ್ಗಿರುವ ಸಂತ್ರಸ್ತ ಕುಟುಂಬಗಳಿಗೆ ಎನ್‍ಡಿಆರ್‍ಎಫ್‍ನಿಂದ ತಲಾ 5000 ರೂಗಳ ಪರಿಹಾರ ಪ್ರಕಟಿಸಿದ್ದು, ಇದರಲ್ಲಿ ಪೂರ್ಣ ಪ್ರಮಾಣದಲ್ಲಿ ಬಿದ್ದಿರುವ ಮನೆಗಳಿಗೆ ರಾಜ್ಯ ಸರ್ಕಾರ ಮತ್ತು ಎನ್‍ಡಿಆರ್‍ಎಫ್ ತಲಾ 1.20 ಲಕ್ಷ ರೂ ಸೇರಿ ಒಟ್ಟು 2.40 ಲಕ್ಷ ರೂಗಳ ಪರಿಹಾರ ಮೊತ್ತವನ್ನು ನೀಡಲಾಗುತ್ತಿದೆ. ಸಂತ್ರಸ್ತ ಕುಟುಂಬಗಳಿಗೆ ಅನ್ಯಾಯವಾಗಲು ನಾನು ಬಿಡುವದಿಲ್ಲ ಎಂದು ಅವರು ಗುಡುಗಿದರು.


ಹಾನಿಗೊಳಗಾದ ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆ ಮೂಡಲಗಿ ಮತ್ತು ಗೋಕಾಕ ತಹಶೀಲದಾರ ಅವರಿಂದ ಶಾಸಕರು ಮಾಹಿತಿಯನ್ನು ಪಡೆದುಕೊಂಡರು.
ಗೋಕಾಕ ತಹಶೀಲದಾರ ಡಾ|| ಮೋಹನ ಭಸ್ಮೆ, ಮೂಡಲಗಿ ತಹಶೀಲದಾರ ಮಹಾದೇವ ಸನ್ನಮುರಿ, ಗೋಕಾಕ ತಾ.ಪಂ ಇಓ ಉದಯಕುಮಾರ ಕಾಂಬಳೆ, ಮೂಡಲಗಿ ತಾ.ಪಂ ಇಓ ಎಫ್.ಜಿ.ಚಿನ್ನನ್ನವರ, ಕಂದಾಯ ನಿರೀಕ್ಷಕರು, ಪಿಡಿಓ, ಇಂಜನೀಯರಗಳು, ಗ್ರಾಮ ಆಡಳಿತ ಅಧಿಕಾರಿಗಳು, ಸೇರಿದಂತೆ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.