ನವದೆಹಲಿ: ಶುಕ್ರವಾರ ಸಂಸತ್ ಅಧಿವೇಶನದಲ್ಲಿ ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಮಸೂದೆ- 2024 ಅನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.

ಈ ಮಸೂದೆ ನಾಮನಿರ್ದೇಶನ ಸೌಲಭ್ಯವನ್ನು ಹೆಚ್ಚು ಗ್ರಾಹಕ ಸ್ನೇಹಿಯನ್ನಾಗಿ ಮಾಡಲು ಬದಲಾವಣೆ ಸಹಿತ ಹಲವು ತಿದ್ದುಪಡಿಗಳನ್ನು ಒಳಗೊಂಡಿವೆ.
ಬ್ಯಾಂಕಿಂಗ್ ಕಾನೂನುಗಳ ಮಸೂದೆ 2024: ಪ್ರಮುಖ ಬದಲಾವಣೆಗಳೇನು…?

1) ಪ್ರತಿ ಬ್ಯಾಂಕ್ ನಾಮಿನಿಗಳ ಸಂಖ್ಯೆಯನ್ನು ಒಂದರಿಂದ ನಾಲ್ಕಕ್ಕೆ ಹೆಚ್ಚಿಸುವ ಪ್ರಸ್ತಾಪ ಮಾಡಲಾಗಿದೆ. ಅಂದರೆ ಬ್ಯಾಂಕ್‌ ಖಾತೆದಾರರು ಏಕಕಾಲದಲ್ಲಿ ಒಂದೇ ಬಾರಿ ನಾಲ್ಕು ನಾಮಿನಿಗಳನ್ನು ಮಾಡಬಹುದು. ಪ್ರತಿ ನಾಮಿನಿಗೂ 1ನೇ, 2ನೇ, 3ನೇ, 4ನೇ ಹೀಗೆ ಆದ್ಯತೆ ನೀಡಬಹುದು. ಈ ಕ್ರಮವು ಠೇವಣಿದಾರರಿಗೆ ಮತ್ತು ಅವರ ಕಾನೂನು ಉತ್ತರಾಧಿಕಾರಿಗಳಿಗೆ ಹೆಚ್ಚಿನ ನಮ್ಯತೆ ಮತ್ತು ಅನುಕೂಲವನ್ನು ನೀಡುವ ಗುರಿ ಹೊಂದಿದೆ. ವಿಶೇಷವಾಗಿ ಠೇವಣಿಗಳು, ಸುರಕ್ಷತಾ ಲಾಕರ್‌ಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚು ಸಹಾಯಕವಾಗಲಿದೆ. ಮೊದಲ ನಾಮಿನಿ ಹಣವನ್ನು ಕ್ಲೈಮ್ ಮಾಡಲು ಲಭ್ಯವಿಲ್ಲದಿದ್ದರೆ, ಎರಡನೇ ನಾಮಿನಿಯನ್ನು ಕರೆಯಲಾಗುತ್ತದೆ, ನಂತರ ಮೂರನೆಯವರು ಹೀಗೆ…

2) ಮತ್ತೊಂದು ತಿದ್ದುಪಡಿಯು ನಿರ್ದೇಶಕರ ಹುದ್ದೆಗಳಿಗೆ ‘ಸಬ್​ಸ್ಟಾನ್ಷಿಯಲ್ ಇಂಟರೆಸ್ಟ್’ ಅನ್ನು ಮರುವ್ಯಾಖ್ಯಾನಿಸಿದೆ. ಒಂದು ಕಂಪನಿಯಲ್ಲಿ ನಿರ್ದೇಶಕರು 5 ಲಕ್ಷ ರೂಗಿಂತ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದರೆ ಅದನ್ನು ʼಸಬ್​ಸ್ಟಾನ್ಷಿಯಲ್ ಇಂಟರೆಸ್ಟ್ʼ ಎಂದು ಪರಿಗಣಿಸಲಾಗುತ್ತದೆ. ಇಂಥವರಿಗೆ ಸಾಲ ಕೊಡಲು ಮಂಡಳಿ ಅನುಮೋದನೆ ಪಡೆಯಬೇಕಿರುವುದು ಸೇರಿದಂತೆ ಕೆಲ ನಿರ್ಬಂಧಗಳಿವೆ. ಸುಮಾರು 60 ವರ್ಷಗಳ ಹಿಂದೆ ನಿಗದಿಪಡಿಸಲಾದ ಪ್ರಸ್ತುತ ₹5 ಲಕ್ಷ ಇದ್ದ ಮಿತಿಯನ್ನು ತಿದ್ದುಪಡಿ ಮಸೂದೆಯ ಹೊಸ ನಿಯಮದ ಪ್ರಕಾರ ₹2 ಕೋಟಿಗೆ ಹೆಚ್ಚಿಸುವ ಪ್ರಸ್ತಾಪವಿದೆ.
3) ಹೆಚ್ಚುವರಿಯಾಗಿ, ಶಾಸನಬದ್ಧ ಲೆಕ್ಕ ಪರಿಶೋಧಕರ ವೇತನವನ್ನು ನಿರ್ಧರಿಸುವಲ್ಲಿ ಬ್ಯಾಂಕ್‌ಗಳಿಗೆ ಹೆಚ್ಚಿನ ನಮ್ಯತೆ ನೀಡುವ ಉದ್ದೇಶವನ್ನು ಬಿಲ್ ಹೊಂದಿದೆ.

4) ಇದು ಪ್ರಸ್ತುತ ಎರಡನೇ ಮತ್ತು ನಾಲ್ಕನೇ ಶುಕ್ರವಾರ ಇರುವ ಬ್ಯಾಂಕ್‌ಗಳಿಗೆ ನಿಯಂತ್ರಕ ವರದಿ ಮಾಡುವ ದಿನಾಂಕಗಳನ್ನು ಪ್ರತಿ ತಿಂಗಳ 15ನೇ ಮತ್ತು ಕೊನೆಯ ದಿನಕ್ಕೆ ಬದಲಾಯಿಸುವುದನ್ನು ಪ್ರಸ್ತಾಪಿಸುತ್ತದೆ,

5) ಕಳೆದ ಶುಕ್ರವಾರ ಕೇಂದ್ರ ಸಚಿವ ಸಂಪುಟದಿಂದ ಅನುಮೋದಿಸಲ್ಪಟ್ಟಿದೆ, ಈ ಮಸೂದೆಯು ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ, 1934, ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್, 1955 ಮತ್ತು ಬ್ಯಾಂಕಿಂಗ್ ಕಂಪನಿಗಳು (ಸ್ವಾಧೀನ), ಮತ್ತು ಅಂಡರ್‌ಟೇಕಿಂಗ್‌ಗಳ ವರ್ಗಾವಣೆ) 1970 ಮತ್ತು 1980ರ ಕಾಯಿದೆಗಳು ಸೇರಿದಂತೆ ಹಲವಾರು ಕಾನೂನುಗಳಿಗೆ ತಿದ್ದುಪಡಿ ತರಲು ಪ್ರಯತ್ನಿಸುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್ ಮತ್ತು ಬ್ಯಾಂಕಿಂಗ್ ಕಂಪನಿಗಳ (ಅಂಡರ್‌ಟೇಕಿಂಗ್‌ಗಳ ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆಯನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸಿದ್ದು, ಸತತ ಏಳು ವರ್ಷಗಳವರೆಗೆ ಹೂಡಿಕೆದಾರರಿಂದ ಕ್ಲೇಮ್‌ ಪಡೆಯದೆ ಉಳಿದಿರುವಾಗ. ಹಕ್ಕು ಪಡೆಯದ ಲಾಭಾಂಶಗಳು, ಷೇರುಗಳು ಮತ್ತು ಬಡ್ಡಿ ಅಥವಾ ಬಾಂಡ್‌ಗಳ ವಿಮೋಚನೆಯನ್ನು ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿಗೆ (IEPF) ವರ್ಗಾಯಿಸಲು ಸರ್ಕಾರವು ಪ್ರಯತ್ನಿಸುತ್ತದೆ. ಇದು ಹೂಡಿಕೆದಾರರಿಗೆ ನಿಧಿಯಿಂದ ವರ್ಗಾವಣೆ ಅಥವಾ ಮರುಪಾವತಿಯನ್ನು ಕ್ಲೈಮ್ ಮಾಡಲು ಅನುಮತಿಸುತ್ತದೆ.

6) ಈ ತಿದ್ದುಪಡಿಯು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ (PSBs) ಆಡಿಟ್ ಗುಣಮಟ್ಟವನ್ನು ಸುಧಾರಿಸಲು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಗೆ ಬ್ಯಾಂಕುಗಳು ವರದಿ ಮಾಡುವಲ್ಲಿ ಸ್ಥಿರತೆಯನ್ನು ನೀಡಲು ಮತ್ತು ಸಹಕಾರಿ ಬ್ಯಾಂಕುಗಳಲ್ಲಿನ ನಿರ್ದೇಶಕರ ಅಧಿಕಾರಾವಧಿಯಲ್ಲಿ ಹೆಚ್ಚಳಕ್ಕೆ ಅವಕಾಶ ಒದಗಿಸುತ್ತದೆ. ಸಹಕಾರಿ ಬ್ಯಾಂಕುಗಳಿಗೆ ಸಂಬಂಧಿಸಿದ ಮಹತ್ವದ ನಿಬಂಧನೆಗಳನ್ನು ಮಸೂದೆಯು ಪ್ರಸ್ತುತಪಡಿಸುತ್ತದೆ. ಸಂವಿಧಾನ (97 ನೇ ತಿದ್ದುಪಡಿ) ಕಾಯಿದೆ, 2011 ಗೆ ಅನುಗುಣವಾಗಿ, ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯ ಸೆಕ್ಷನ್ 10A ನ ಉಪ-ವಿಭಾಗ (2A) ನ ಷರತ್ತು (i) ಅನ್ನು ಮಾರ್ಪಡಿಸಲು ಬಿಲ್ ಸೂಚಿಸುತ್ತದೆ. ಪ್ರಸ್ತಾವಿತ ಬದಲಾವಣೆಯು ಸಹಕಾರಿ ಬ್ಯಾಂಕ್‌ಗಳಲ್ಲಿನ ಅಧ್ಯಕ್ಷರು ಮತ್ತು ಪೂರ್ಣ ಸಮಯದ ನಿರ್ದೇಶಕರನ್ನು ಹೊರತುಪಡಿಸಿ ನಿರ್ದೇಶಕರ ಸೇವಾ ಅವಧಿಯನ್ನು ಎಂಟು ವರ್ಷಗಳಿಂದ ಹತ್ತು ವರ್ಷಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.