ಮಂಗಳೂರು: ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಅವರು ಬೆಂಗಳೂರಿನಲ್ಲಿ ಸೋಮವಾರ ನಿಧನರಾದರು.

ತೆಂಕುತಿಟ್ಟು ಯಕ್ಷಗಾನದಲ್ಲಿ ಅಗ್ರಗಣ್ಯ ಪಾರಂಪರಿಕ ಹಾಸ್ಯಗಾರರಾಗಿ ಅವರು ಪ್ರಸಿದ್ಧರು.

ಅವರು ಪುತ್ತೂರು ಪ್ರವಾಸಿ ಮೇಳದ ತಿರುಗಾಟಕ್ಕೆಂದು ಮೇಳದವರ ಜೊತೆ ಬೆಂಗಳೂರಿಗೆ ತೆರಳಿದ್ದರು. ಕಳೆದ ತಿರುಗಾಟದ ತನಕ ಹನುಮಗಿರಿ ಮೇಳದ ಕಲಾವಿದರಾಗಿದ್ದರು.

ಅವರಿಗೆ ಪತ್ನಿ ಶ್ಯಾಮಲ, ಇಬ್ಬರು ಮಕ್ಕಳು (ವರ್ಷಾ ಮತ್ತು ವರುಣ್ ) ಹಾಗೂ ಭಾರಿ ಸಂಖ್ಯೆಯ ಅಭಿಮಾನಿಗಳು ಇದ್ದಾರೆ.

ಸೋಮವಾರ ಮಧ್ಯಾಹ್ನ 2-30 ಗಂಟೆಗೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಬಂಟ್ವಾಳ ಬೈಪಾಸ್‌ ರಸ್ತೆ ಬಳಿಯ ಅವರ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಜಯರಾಮ ಆಚಾರ್ಯರು ಅಧ್ಯಯನಶೀಲರಾಗಿ ಕಲಾಸೇವೆಯನ್ನು ಮಾಡುತ್ತ ಹಾಸ್ಯಗಾರರಾಗಿ ರಂಜಿಸಿದವರು. 1957ರ ಅಕ್ಟೋಬರ್ 12 ರಂದು ಬಂಟ್ವಾಳ ಗಣಪತಿ ಆಚಾರ್ಯ ಮತ್ತು ಭವಾನಿ ಅಮ್ಮ ಅವರ ಪುತ್ರರಾಗಿ ಜನಿಸಿವರು ಜಯರಾಮ ಆಚಾರ್ಯ. ತಂದೆಯವರು ತಮ್ಮ ಕುಲವೃತ್ತಿಯಾದ ಚಿನ್ನದ ಕೆಲಸ ಮಾಡುವುದು ಮಾತ್ರವಲ್ಲದೆ ಆ ಕಾಲದ ಉತ್ತಮ ಕಲಾವಿದರಾಗಿದ್ದರು.ಜಯರಾಮ ಆಚಾರ್ಯರು ಬಂಟ್ವಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ಬೋರ್ಡ್ ಶಾಲೆ)ಯ ಶಾಲಾ ದಿನಗಳಲ್ಲಿ ತೀರ್ಥರೂಪದಿಂದ ತನ್ನ ಕುಲಕಸುಬು ಅಭ್ಯಾಸಿಸಿದ್ದರು. ಬಾಲ್ಯದಲ್ಲಿ ಯಕ್ಷಗಾನದ ಆಸಕ್ತಿ ಮೂಡಿತ್ತು. ಬಂಟ್ವಾಳ ಪರಿಸರದಲ್ಲಿ ನಡೆಯುತ್ತಿದ್ದ ಆಟ, ತಾಳಮದ್ದಲೆ ಪ್ರದರ್ಶನಗಳನ್ನು ತಪ್ಪದೇ ನೋಡುತ್ತಿದ್ದರು. ತಂದೆಯವರ ಜೊತೆ ಯಕ್ಷಗಾನಕ್ಕೆ ಹೋಗುತ್ತಿದ್ದರು. ಮಾತ್ರವಲ್ಲ ತಂದೆಯವರ ಜೊತೆಯಾಗಿಯೇ ಅಮ್ಟಾಡಿ, ಸುಂಕದಕಟ್ಟೆ ಮೇಳಗಳಲ್ಲಿ ವೇಷವನ್ನು ಮಾಡಿದ್ದರು. 1974 -75 ಸಾಲಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿದ್ದ ಲಲಿತ ಕಲಾ ಕೇಂದ್ರದಲ್ಲಿ ನಾಟ್ಯಾರ್ಜನೆಗೆ ಸೇರಿಕೊಂಡರು. ಶ್ರೀ ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ನಾಟ್ಯ ಕಲಿತ ಅವರು ಅದೇ ವರ್ಷ ಕಟೀಲು ಮೇಳಕ್ಕೆ ಕಲಾವಿದರಾಗಿ ಸೇರಿಕೊಂಡರು. ಬಲಿಪ ನಾರಾಯಣ ಭಾಗವತರು ಭಾಗವತರಾಗಿದ್ದ ಈ ಮೇಳದಲ್ಲಿ ನಾಲ್ಕು ವರ್ಷ ತಿರುಗಾಟ ನಡೆಸಿದರು. ಕೋಡಂಗಿ, ಬಾಲ ಗೋಪಾಲರ ವೇಷಗಳನ್ನು ಪೂರ್ವ ರಂಗದಲ್ಲಿ ನಿರ್ವಹಿಸುತ್ತ ಪ್ರಸಂಗದಲ್ಲೂ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ ನಿದ್ದೆ ಮಾಡದೆ ಪ್ರದರ್ಶನಗಳನ್ನು ನೋಡುತ್ತಾ ಹಂತ ಹಂತವಾಗಿ ಬೆಳೆದು ಉತ್ತಮ ಹಾಸ್ಯಗಾರರಾಗಿ ಹೆಸರು ಗಳಿಸಿದರು. ಕಟೀಲು, ಕದ್ರಿ, ಎಡನೀರು, ಹೊಸ ನಗರ, ಸುಂಕದಕಟ್ಟೆ, ಪುತ್ತೂರು ಮುಂತಾದ ಮೇಳಗಳಲ್ಲಿ 50 ವರ್ಷಗಳ ಕಲಾ ಸೇವೆ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರದ್ದು. ಯಕ್ಷಗಾನ ಬಯಲಾಟ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪಡೆದಿದ್ದಾರೆ. ಅವರ ಪತ್ನಿ ಶಾಮಲಾ ಗೃಹಿಣಿಯಾಗಿ ಮನೆಯನ್ನು ನಡೆಸುತ್ತಿದ್ದರು. ಹಿರಿಯ ಮಗಳು ವರ್ಷಾ ಶಿವಮೊಗ್ಗದಲ್ಲಿ ಇಂಜಿನಿಯರಿಂಗ್ ಹಾಗೂ ಕಿರಿಯ ಮಗ ವರುಣ್ ಮಂಗಳೂರು ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದಾರೆ.