ಭಟ್ಕಳ : ಶಿಲಾಯುಗದ ಬಂಡೆಚಿತ್ರ ಪತ್ತೆ ಆಗಿರುವ ತಾಲೂಕಿನ ಬಾರಕೊಲ್ ಬೋಳೆ ಪ್ರದೇಶ ಇದೀಗ ನಾಡಿನ ಗಮನಸೆಳೆದಿದೆ. ಶೋಧನೆಯಲ್ಲಿ ಹಲವಾರು ವಿಶೇಷತೆಗಳು, ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿದೆ.
ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರುಗಳಾದ ಡಾ. ಆರ್. ಎಂ ಷಡಕ್ಷರಯ್ಯ ಹಾಗೂ ಡಾ. ಎಸ್. ಕೆ. ಕಲ್ಲೋಳಿಕರ ಅವರ ಮುಂದಾಳತ್ವದಲ್ಲಿ ಬಾರಕೊಲ್ ಬೋಳೆ ಪ್ರದೇಶದಲ್ಲಿ ನಡೆದ ಸಂಶೋಧನೆಯಲ್ಲಿ ಬಂಡೆಚಿತ್ರಗಳ ಕಾಲಮಾನ, ವಿಶೇಷತೆ, ಇತರ ಪ್ರದೇಶಗಳ ಬಂಡೆ ಚಿತ್ರಗಳೊಂದಿಗೆ ಹೋಲಿಕೆ ಬಗ್ಗೆ ಒತ್ತು ನೀಡಲಾಗಿದೆ.

ವಿಶೇಷ ಅಂಶಗಳು :
೧. ತಲಾ ಒಂದು ರೇಖಾಚಿತ್ರದ ಮೇಲೆ ಮತ್ತು ಕೆಳಗೆ ಸ್ವಲ್ಪ ಆಳವಾದ ಕುಳಿಗಳನ್ನು ಕೆತ್ತಲಾಗಿದೆ.
೨. ಒಂದನೇ ಗುಂಪಿನ ಚಿತ್ರಗಳಲ್ಲಿ ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ಹಗ್ಗದಿಂದ ಜೋಡಿಸಲಾಗಿದೆ.
೩. ತಲಾ ಒಂದು ಪ್ರಾಣಿಗಳ (ಜಿಂಕೆ, ಎತ್ತು) ಕಾಲಿನ ತುದಿಯು ಮೊಂಡಾದ ರೇಖಾಚಿತ್ರಗಳಿವೆ.
೪. ತಲಾ ಒಂದು ಪ್ರಾಣಿ ಮತ್ತು ಮನುಷ್ಯರ ರೇಖಾಚಿತ್ರಗಳನ್ನು ಒಂದೇ ಆಳವಾಗಿ ದಪ್ಪವಾಗಿ ಕೆತ್ತಲಾಗಿದೆ. ಕುಟ್ಟಿ ತೆಗೆದಿರುವ ಗುಂಡಿ ಕುಣಿಗಳನ್ನು ಬಿಟ್ಟರೆ ಉಳಿದವುಗಳು ಭಿನ್ನವಾಗಿವೆ.

ಹೋಲಿಕೆಗಳು :
೧. ಇಲ್ಲಿ ತೋರಿಸಿದ ನಿಂತ ಮನುಷ್ಯನ ಬೃಹದಾಕಾರದ ಚಿತ್ರವು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಇಂದೂರು ಗ್ರಾಮದ ಅವಲಕ್ಕಿಪೊರೆ ಎಂಬ ಪ್ರದೇಶದಲ್ಲಿನ ಬಂಡೆಯ ರೇಖಾಚಿತ್ರಗಳಲ್ಲಿ ಬುದ್ಧನ ಜೋಡು ಬಂಡೆಗಲ್ಲಿನ ಮನುಷ್ಯನ ಚಿತ್ರವನ್ನು ಹೋಲುತ್ತದೆ. ಆದರೆ, ಇಲ್ಲಿನ ನೆಲೆಯ ಮನುಷ್ಯನ ಬಲಭಾಗದಲ್ಲಿನ ಎತ್ತನ್ನು ಹಿಡಿದು ನಿಂತಿದ್ದಾನೆ. ಅಲ್ಲಿ ಮನುಷ್ಯನ ಜೊತೆ ಜಿಂಕೆ ಚಿತ್ರವಿದೆ.  ಅಲ್ಲದೆ ಈ ಚಿತ್ರದ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಕುಣಿಗಳಿವೆ. ಇವೆಲ್ಲಾ ಚಿತ್ರಗಳನ್ನು ಜಂಬಿಟ್ಟಿಗೆಯ ನೆಲದ ಮೇಲೆ ರೇಖಾಚಿತ್ರಗಳನ್ನು ಕೊರೆಯಲಾಗಿದೆ.
೨. ಶಿರಸಿ ತಾಲೂಕಿನ ಸೋಂದಾ ಗ್ರಾಮದಲ್ಲಿ ಕಂಡುಬರುವಂತಹ ಎತ್ತಿನ ಚಿತ್ರದ ಕಾಲುಗಳನ್ನು ಸಮನಾಂತರ ರಂಗೋಲಿಯಂತೆ ಚಿತ್ರಿಸಲಾಗಿದೆ. ಇದು ಮಾತ್ರ ಭಿನ್ನವಾಗಿ ಇರುವದನ್ನು ಗಮನಿಸಬಹುದು.
೩. ೨೦ ರೇಖಾಚಿತ್ರಗಳುಳ್ಳ ಈ ನೆಲೆಯು ಕರ್ನಾಟಕದ ಕರಾವಳಿ ಪ್ರದೇಶವಾದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಾಗೂ ಗೋವಾ ಭಾಗಗಳಲ್ಲಿ ಕಂಡು ಬಂದಿಲ್ಲ. ಅಲ್ಲಿ ಸಣ್ಣ ಪ್ರಮಾಣದ ಚಿತ್ರಗಳಿವೆ. ಈ ಪರಂಪರೆ ಚಿತ್ರಗಳು ಕರ್ನಾಟಕ, ಗೋವಾ, ಕೇರಳ ಮತ್ತು ಮಹಾರಾಷ್ಟ್ರ ಕರಾವಳಿ ಪ್ರದೇಶಗಳಲ್ಲಿ ಸಾಮಾನ್ಯವಾಗಿರುವುದು ತಿಳಿದುಬರುತ್ತದೆ. ಆದರೆ ಕರ್ನಾಟಕ ಮತ್ತು ಗೋವಾ ಕರಾವಳಿಯ ಬೇರಾವ ನೆಲೆಗಳಲ್ಲಿ ಇಷ್ಟೊಂದು ಪ್ರಮಾಣದ ಚಿತ್ರಗಳು ಎಲ್ಲಿಯೂ ಕಂಡು ಬಂದಿಲ್ಲ. ಹೀಗಾಗಿ ಈ ನೆಲೆಯು ಕರಾವಳಿ ಪ್ರದೇಶಗಳಲ್ಲೇ ಅತ್ಯಂತ ಮಹತ್ವದ ಬಹುದೊಡ್ಡ ನೆಲೆಯೆಂದು ತರ್ಕಿಸಬಹುದು.

 

ಕಾಲಮಾನ:
ಪ್ರಸ್ತುತ ನೆಲೆಯ ರೇಖಾಚಿತ್ರಗಳನ್ನು ಶೈಲಿಯ ದೃಷ್ಟಿಯಿಂದ ಮೂರು ಕಾಲಮಾನಗಳನ್ನಾಗಿ ವರ್ಗೀಕರಿಸಲಾಗಿದೆ.
೧. ಬಂಡೆರೇಖಾ ಚಿತ್ರಗಳಲ್ಲಿ ಎತ್ತು ಮತ್ತು ಜಿಂಕೆ ಚಿತ್ರಗಳು ನೂತನ ತಾಮ್ರಶಿಲಾ ಸಂಸ್ಕೃತಿ (ಕ್ರಿ.ಪೂ.೧೮೦೦-ಕ್ರಿ.ಪೂ.೮೦೦) ಕಾಲಘಟ್ಟದಾಗಿವೆ.
೨. ಇದರಲ್ಲಿ ಆಳವಾಗಿ ಕೆತ್ತಿರುವ ಕೆಲವು ಜಿಂಕೆಗಳ ರೇಖಾಚಿತ್ರಗಳು ಕಬ್ಬಿಣದ ಬೃಹತ್‌ಶಿಲಾಯುಗ ಕಾಲಘಟ್ಟಕ್ಕೆ (ಕ್ರಿ.ಪೂ. ೧೦೦೦-ಕ್ರಿ.ಪೂ.೨ನೆಯ ಶತಮಾನ) ಸೇರುತ್ತವೆ.
೩. ಇದರಲ್ಲಿ ಬೃಹದಾಕಾರದ ಮನುಷ್ಯನ ಚಿತ್ರವು ಇತಿಹಾಸದ ಆರಂಭಿಕ (ಕ್ರಿ.ಪೂ. ೧ನೆಯ ಶತಮಾನದಿಂದ- ಕ್ರಿ.ಶ. ೨ನೆಯ ಶತಮಾನ) ಕಾಲಘಟ್ಟದ್ದಾಗಿದೆ.