ಮಂಗಳೂರು: ಬಾರ್ಕೂರು-ಉಡುಪಿ ನಡುವಿನ ಹಳಿ ಮೇಲೆ ಭಾರಿ ಗಾತ್ರದ ಮರವೊಂದು ಬಿದ್ದಿದ್ದು, ಲೊಕೊ ಪೈಲಟ್ ಹಾಗೂ ಸಹಾಯ ಲೊಕೊ ಪೈಲಟ್ ತೋರಿದ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ. ಮತ್ತ್ವಗಂಧ ಎಕ್ಸ್‌ಪ್ರೆಸ್‌ ರೈಲು ಉಡುಪಿ-ಬಾರ್ಕೂರು ನಡುವೆ ಪ್ರಯಾಣಿಸುತ್ತಿದ್ದಾಗ ಹಳಿ ಮೇಲೆ ಮರಬಿದ್ದಿರುವುದನ್ನು ಲೊಕೊ ಪೈಲಟ್ ಪುರುಷೋತ್ತಮ ಹಾಗೂ ಸಹಾಯಕ ಲೊಕೊ ಪೈಲಟ್ ಮಂಜುನಾಥ ನಾಯ್ಕ ಗಮನಿಸಿದ್ದರು. ತಕ್ಷಣ ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ರೈಲ್ವೆ ಸಿಬ್ಬಂದಿ ಮರವನ್ನು ತೆರವುಗೊಳಿಸಿದ ಬಳಿಕ ರೈಲು ಪ್ರಯಾಣ ಮುಂದುವರಿಸಿತು. ಸಮಯಪ್ರಜ್ಞೆ ಮೆರೆದ ರೈಲ್ವೆ ಸಿಬ್ಬಂದಿಗೆ ಕೊಂಕಣ ರೈಲ್ವೆ ನಿಗಮ ನಿಯಮಿತದ ಮುಖ್ಯ ಮಹಾ ವ್ಯವಸ್ಥಾಪಕ ಸಂತೋಷ್ ಕುಮಾರ್ ಝಾ ತಲಾ 15,000 ರೂ. ಬಹುಮಾನ ಘೋಷಿಸಿದ್ದಾರೆ ಎಂದು ಕೊಂಕಣ ರೈಲ್ವೆಯ ವ್ಯವಸ್ಥಾಪಕಿ (ಸಾರ್ವಜನಿಕ ಸಂಪರ್ಕ) ಸುಧಾ ಕೃಷ್ಣಮೂರ್ತಿ ಹೇಳಿದ್ದಾರೆ.

ನಿಗಮದ ಹಿರಿಯ ಪ್ರಾದೇಶಿಕ ಸಂಚಾರ ವ್ಯವಸ್ಥಾಪಕ ದಿಲೀಪ್‌ ಭಟ್‌, ಮುಖ್ಯ ಲೊಕೊ ಇನ್ಸ್‌ಪೆಕ್ಟರ್ ಬಿನು ಕೆ. ಅವರು ಪುರುಷೋತ್ತಮ ಹಾಗೂ ಮಂಜುನಾಥ ನಾಯ್ಕಗೆ ನಗದು ಬಹುಮಾನವನ್ನು ಸುರತ್ಕಲ್ ರೈಲು ನಿಲ್ದಾಣದಲ್ಲಿ ಹಸ್ತಾಂತರಿಸಿದರು.