ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಮತಕ್ಷೇತ್ರದಿಂದ ಈ ಬಾರಿ ಬಿಜೆಪಿ ಪ್ರಭಾವಿ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ಕಾಂಗ್ರೆಸ್ ಪಕ್ಷ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಯಪ್ರಕಾಶ್ ಹೆಗ್ಡೆ ಈ ಹಿಂದೆ ಕೆಲ ಚುನಾವಣೆಗಳಲ್ಲಿ ಪರಸ್ಪರ ಸೆಣಸಾಟ ನಡೆಸಿದ್ದರು. ಬ್ರಹ್ಮಾವರ ವಿಧಾನಸಭಾ ಮತಕ್ಷೇತ್ರ ಅಸ್ತಿತ್ವದಲ್ಲಿ ಇದ್ದಾಗ ಜಯಪ್ರಕಾಶ್ ಹೆಗ್ಡೆ ಅವರು ಮೊದಲ ಬಾರಿಗೆ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಸೋಲಿಸಿದ್ದರು. ಆದರೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಜಯಶಾಲಿಯಾಗಿದ್ದು ಜಯಪ್ರಕಾಶ್ ಹೆಗ್ಡೆ ಪಕ್ಷೇತರ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು. ಇದೀಗ ಕುಂದಾಪುರ ಕನ್ನಡ ಮಾತನಾಡುವ ಇಬ್ಬರೂ ಪ್ರಭಾವಿ ಜನನಾಯಕರಾಗಿರುವ ಜಯಪ್ರಕಾಶ್ ಹೆಗ್ಡೆ ಹಾಗೂ ಕೋಟ ಶ್ರೀನಿವಾಸ್ ಪೂಜಾರಿ ಪರಸ್ಪರ ಎದುರಾಳಿಯಾಗುವುದು ನಿಶ್ಚಿತವಾಗಿದ್ದು ಕರಾವಳಿಯಲ್ಲಿ ಬಿಲ್ಲವ ಸಮುದಾಯದ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಬಂಟ ಸಮುದಾಯದ ಜಯಪ್ರಕಾಶ್ ಹೆಗ್ಡೆ ನಡುವೆ ನಡೆಯಬಹುದಾದ ಸ್ಪರ್ಧೆ ರಾಜ್ಯದ ಗಮನ ಸೆಳೆಯುವುದು ಸೆಳೆಯುವುದರಲ್ಲಿ ಯಾವ ಅನುಮಾನ ಇಲ್ಲ.
ಕೋಟ ಶ್ರೀನಿವಾಸ ಪೂಜಾರಿ ಅವರು 1993 ರಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದರು. ಮುಂದೆ 1996 ರಲ್ಲಿ ತಾಲೂಕು ಪಂಚಾಯತ್ ಸದಸ್ಯರಾಗಿ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದರು. ಪಂಚಾಯತ್ ಸದಸ್ಯರಿಗೆ ಗೌರವಧನವನ್ನು ಹೆಚ್ಚಿಸುವುದು, ಡಾ ಶಿವರಾಮ ಕಾರಂತ ಥೀಮ್ ಪಾರ್ಕ್ ನಿರ್ಮಿಸಿ ಮತ್ತು ಡಾ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಸ್ಥಾಪಿಸಿದರು, ಅವರು ವಡ್ಡರ್ಸೆ ರಘುರಾಮ ಶೆಟ್ಟಿಯವರ “ಮುಂಗಾರು ಪತ್ರಿಕೆ” ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ಉಡುಪಿ ಜಿಲ್ಲೆಯಾದ್ಯಂತ ಪಾದಯಾತ್ರೆ ಹಮ್ಮಿಕೊಂಡು ಜನರಿಗೆ ಸೆಕ್ಷನ್ 94ಸಿ ಹಕ್ಕುಪತ್ರ ವಿತರಣೆ ಹೋರಾಟದ ನೇತೃತ್ವ ವಹಿಸಿ ಸಹಾಯಕ ಆಯುಕ್ತರ ಕಚೇರಿಗೆ ಮನವಿ ಸಲ್ಲಿಸಿದರು.
ನಂತರದ ವರ್ಷಗಳಲ್ಲಿ, ಅವರು ಕರ್ನಾಟಕ ರಾಜ್ಯ ಬಿಜೆಪಿಯ ಹಲವಾರು ಸ್ಥಾನಗಳಲ್ಲಿ ಕೆಲಸ ಮಾಡಿದರು. 2009 ರಲ್ಲಿ, ಅವರು ಮೊದಲ ಬಾರಿಗೆ ಕರ್ನಾಟಕ ವಿಧಾನ ಪರಿಷತ್ತಿಗೆ ಆಯ್ಕೆಯಾದರು. ಅವರು ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾಗಿ ಮತ್ತು ಮುಜರಾಯಿ ಸಚಿವರಾಗಿ 12 ಜುಲೈ 2012 ರಿಂದ 13 ಮೇ 2013 ರವರೆಗೆ ಆಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸಂಪುಟದಲ್ಲಿ ಸೇವೆ ಸಲ್ಲಿಸಿದ್ದಾರೆ. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಸರಕಾರದಲ್ಲೂ ಪ್ರಭಾವಿ ಸಚಿವರಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.