ನವದೆಹಲಿ: ಭಾರತೀಯ ಕ್ರಿಕೆಟ್‌ ಮಂಡಳಿಯ (BCCI) ಹಾಲಿ ಗೌರವ ಕಾರ್ಯದರ್ಶಿ ಜಯ್ ಶಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ICC) ಸ್ವತಂತ್ರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಮತ್ತು 1 ಡಿಸೆಂಬರ್ 2024 ರಂದು ಅವರ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.

ಆಗಸ್ಟ್ 20 ರಂದು, ಪ್ರಸ್ತುತ ಐಸಿಸಿ (ICC) ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿಯ ಮುಕ್ತಾಯವಾಗಲಿದೆ. ಅಧ್ಯಕ್ಷ ಸ್ಥಾನಕ್ಕೆ ಏಕೈಕ ನಾಮನಿರ್ದೇಶಿತರಾಗಿದ್ದ ಜಯ್‌ ಶಾ, ಕ್ರಿಕೆಟ್‌ನ ಜಾಗತಿಕ ವ್ಯಾಪ್ತಿಯನ್ನು ಮತ್ತು ಜನಪ್ರಿಯತೆಯನ್ನು ವಿಸ್ತರಿಸಲು ತಮ್ಮ ಬದ್ಧತೆಯನ್ನು ಒತ್ತಿ ಹೇಳಿದರು. ವಿಶೇಷವಾಗಿ 2028 ರ ಲಾಸ್‌ ಎಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆ ಬಗ್ಗೆ ಅವರು ಉತ್ಸುಕರಾಗಿದ್ದಾರೆ.

ಜಾಗತಿಕವಾಗಿ ಕ್ರಿಕೆಟ್ ಅನ್ನು ಮತ್ತಷ್ಟು ವಿಸ್ತರಿಸಲು ಐಸಿಸಿ ತಂಡ ಮತ್ತು ನಮ್ಮ ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಬದ್ಧನಾಗಿದ್ದೇನೆ. ಕ್ರಿಕೆಟ್‌ನ ಬಹು ಸ್ವರೂಪಗಳನ್ನು ಸಮತೋಲನಗೊಳಿಸುವುದು, ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯನ್ನು ಉತ್ತೇಜಿಸುವುದು ಮತ್ತು ಹೊಸ ಜಾಗತಿಕ ಮಾರುಕಟ್ಟೆಗಳಿಗೆ ಈವೆಂಟ್‌ಗಳನ್ನು ಪರಿಚಯಿಸುವುದು ಸೇರಿದಂತೆ ಮುಖ್ಯವಾದ ನಿರ್ಣಾಯಕ ಘಟ್ಟದಲ್ಲಿ ನಾವು ನಿಂತಿದ್ದೇವೆ. ಕ್ರಿಕೆಟ್ ಅನ್ನು ಹಿಂದೆಂದಿಗಿಂತಲೂ ಹೆಚ್ಚು ಜನಪ್ರಿಯಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಜಯ್‌ ಶಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರೂ ಆಗಿದ್ದಾರೆ. ಆದರೆ, ಈಗ ಅವರು ಐಸಿಸಿ ಅಧ್ಯಕ್ಷರ ಹುದ್ದೆ ವಹಿಸಿಕೊಳ್ಳುವ ಮೊದಲು ಆ ಹುದ್ದೆಗೆ ರಾಜೀನಾಮೆ ನೀಡಬೇಕಾಗುತ್ತದೆ.