
ಬೆಳಗಾವಿ: ‘ಕೊರೊನಾ ಹಿನ್ನೆಲೆಯಲ್ಲಿ ವಿ.ವಿಯ ಶೈಕ್ಷಣಿಕ ವೇಳಾಪಟ್ಟಿ ವಿಳಂಬವಾಗುತ್ತ ಸಾಗಿತ್ತು. ಈಗ ಅದನ್ನು ಸರಿಪಡಿಸಿದ್ದು, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಜುಲೈ 1ರಿಂದ ಸ್ನಾತಕ ಮತ್ತು ಆಗಸ್ಟ್ 1ರಿಂದ ಸ್ನಾತಕೋತ್ತರ ತರಗತಿ ಆರಂಭವಾಗಲಿವೆ’ ಎಂದು ಆರ್‌ಸಿಯು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್ ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧ್ಯಾಪಕರ ಉಪನ್ಯಾಸಗಳು ಸುಲಭವಾಗಿ ಇ-ವಿದ್ಯಾ ಆ್ಯಪ್‌ನಲ್ಲಿ ಲಭ್ಯವಾಗುವಂತೆ ಮಾಡಿದ್ದೇವೆ. ಇದಕ್ಕಾಗಿ ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು, ಕಾಲೇಜುಗಳಿಗೆ ಇಂಟರ್‌ನೆಟ್ ಸೌಕರ್ಯ ಕಲ್ಪಿಸಿದ್ದೇವೆ. ವಿದ್ಯಾರ್ಥಿಗಳು ಉಚಿತವಾಗಿ ಇಂಟರ್‌ನೆಟ್ ಬಳಸಿ ಪಾಠ ಕೇಳಬಹುದು’ ಎಂದು ತಿಳಿಸಿದರು.
‘ಹಿರೇಬಾಗೇವಾಡಿ ಬಳಿಯ ಮಲ್ಲಪ್ಪನ ಗುಡ್ಡದಲ್ಲಿ ಆರ್‌ಸಿಯು ಹೊಸ ಕ್ಯಾಂಪಸ್ ಕಾಮಗಾರಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಕ್ಯಾಂಪಸ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗದ ರಸ್ತೆ ನಿರ್ಮಾಣಕ್ಕೆ ಸರ್ಕಾರದಿಂದ ₹9.20 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ. ಕ್ಯಾಂಪಸ್‌ನೊಳಗಿನ ರಸ್ತೆಗಳನ್ನು ನಮ್ಮ ಸ್ವಂತ ನಿಧಿಯಿಂದ ಕೈಗೊಳ್ಳಬೇಕಿದೆ. ಅಕ್ಟೋಬರ್‌ನಲ್ಲಿ ಹೊಸ ಕ್ಯಾಂಪಸ್‌ಗೆ ವಿ.ವಿ ಸ್ಥಳಾಂತರವಾಗುವ ಸಾಧ್ಯತೆ ಇದ್ದು, ಮುಂದಿನ ಘಟಿಕೋತ್ಸವವನ್ನು ಅಲ್ಲಿನ ಸಭಾಂಗಣದಲ್ಲೇ ಮಾಡಲು ಯೋಜಿಸಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ನೀರಿನ ಅಗತ್ಯತೆ ಪೂರೈಸಿಕೊಳ್ಳಲು ಹೊಸ ಕ್ಯಾಂಪಸ್‌ನಲ್ಲಿ ಕೊಳವೆಬಾವಿಗಾಗಿ ಸಮೀಕ್ಷೆ ನಡೆಸಲಾಗಿದೆ. ನಾವು ಆರು ಕೊಳವೆಬಾವಿ ಕೊರೆಯುತ್ತೇವೆ. ಮಳೆ ನೀರು ಸಂಗ್ರಹ ಘಟಕ ಅಳವಡಿಸಿಕೊಳ್ಳುತ್ತೇವೆ’ ಎಂದರು.
ಹೊಸ ಕ್ಯಾಂಪಸ್ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಆರೋಪ ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ತ್ಯಾಗರಾಜ್, ‘ವಿಶ್ವಾಸಾರ್ಹ ಸಂಸ್ಥೆಯವರು ಗುತ್ತಿಗೆ ಪಡೆದಿದ್ದಾರೆ. ಸಮಗ್ರವಾಗಿ ಪರಿಶೀಲಿಸಿದ ನಂತರವೇ ಕಟ್ಟಡವನ್ನು ಗುತ್ತಿಗೆದಾರರಿಂದ ಹಸ್ತಾಂತರಿಸಿಕೊಳ್ಳುತ್ತೇವೆ. ಅಲ್ಲದೆ, ಭೂತರಾಮನಹಟ್ಟಿ ಬಳಿ ಈಗ ಇರುವ ವಿ.ವಿಯ ಹಳೇ ಕ್ಯಾಂಪಸ್ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದೇವೆ’ ಎಂದರು.
‘ಕೆಲವು ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗದ್ದರಿಂದ ಕೆಲ ವಿಷಯಗಳ ಮೌಲ್ಯಮಾಪನ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಗಮನಕ್ಕೆ ಬಂದಿದೆ. ತಪ್ಪು ಮಾಡಿದವರ ವಿರುದ್ಧ ಕ್ರಮಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.