ಬೆಳಗಾವಿ : ಬೆಳಗಾವಿಯ ಮಾರ್ಕೆಟ್ ಪೊಲೀಸರು ಮಹತ್ವದ ಕಾರ್ಯಾಚರಣೆಯಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ಮಹಾದ್ವಾರ ರಸ್ತೆಯ 4ನೇ ಕ್ರಾಸ್ ನಲ್ಲಿ ನಡೆದ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಫೆಬ್ರವರಿ 3 ರಂದು ಮಹಾದ್ವಾರ ರಸ್ತೆ ನಾಲ್ಕನೇ ಕ್ರಾಸ್ ರೂಪಾಲಿ ವಿನಾಯಕ ಬಿರ್ಜೆ ಅವರ ಮನೆ ಕಳ್ಳತನ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳೆ ಬಾಜಿ ಮಾರ್ಕೆಟ್ ಬಳಿ ಬಂಗಾರದ ಆಭರಣಗಳನ್ನು ಮಾರಾಟ ಮಾಡಲು ಬಂದ ಪಾಂಗುಳುಗಲ್ಲಿ ಅಶ್ವತ್ಥಾಮ ಮಂದಿರದ ಬಳಿಯ ಚಂದ್ರಕಾಂತ ಕೊಟಗಿ- 19 ಹಾಗೂ ಕಲಕಾಂಬ ಗ್ರಾಮದ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಓಂಕಾರ ಭಾವುಕಣ್ಣ ಪಾಟೀಲ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇವರು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಇವರು ಮಹಾದ್ವಾರ ರಸ್ತೆಯಷ್ಟೇ ಅಲ್ಲದೆ ಕಲಕಾಂಬ ಮತ್ತು ಬಸವನ ಕುಡಚಿಯಲ್ಲಿ ಮನೆ ಕಳ್ಳತನ ಮಾಡಿದ್ದರು. ಇವರಿಂದ ಸುಮಾರು ಆರು ಲಕ್ಷ 48 ಸಾವಿರ ರೂಪಾಯಿ ಮೌಲ್ಯದ 100 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಇಬ್ಬರನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.