ಬೆಳಗಾವಿ : ಶಿಗ್ಗಾವಿ ವಿಧಾನಸಭಾ ಮತಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಈಗ ಯಾರಿಗೆ ಟಿಕೆಟ್ ಕೊಟ್ಟರೆ ಅನುಕೂಲ ಎಂಬ ಆಲೋಚನೆಯಲ್ಲಿದೆ. ಈ ನಡುವೆ ಬಸವರಾಜ ಬೊಮ್ಮಾಯಿ ಅವರ ಪುತ್ರನಿಗೆ ಟಿಕೆಟ್ ಕೊಡಲು ಬಿಜೆಪಿಯಲ್ಲಿ ಒಲವಿದೆ. ಇಲ್ಲಿ ನಿರಂತರವಾಗಿ ಬಿಜೆಪಿ ಗೆಲುವಿಗೆ ಕಾರಣರಾಗಿರುವ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಗೆಲುವು ಸಾಧಿಸಿದ ಕ್ಷೇತ್ರ ಇದು.
ಶಿಗ್ಗಾವಿ ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಅವರ ಮಗನಿಗೆ ಟಿಕೆಟ್ ಕೊಡಬೇಕು ಎಂಬ ಅಭಿಪ್ರಾಯ ಇದೆ. ಆದರೂ ಬೊಮ್ಮಾಯಿ ಕುಟುಂಬದವರನ್ನು ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ನೀಡುವ ಪ್ರಯೋಗವನ್ನು ಬಿಜೆಪಿ ನಡೆಸುತ್ತದೆ ಎಂಬ ಚರ್ಚೆ ನಡೆದಿದೆ.
ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಸ್ಪರ್ಧೆ ನಡೆಸಿ ಗೆಲುವು ಸಾಧಿಸಿದ್ದ ಶಿಗ್ಗಾವಿ ವಿಧಾನಸಭಾ ಮತಕ್ಷೇತ್ರಕ್ಕೆ ಇದೀಗ ಉಪಚುನಾವಣೆ ನಡೆಯುತ್ತಿದೆ. ಬೊಮ್ಮಾಯಿ ಅವರು ಲೋಕಸಭಾ ಚುನಾವಣೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಶಿಗ್ಗಾವಿ ವಿಧಾನಸಭಾ ಮತಕ್ಷೇತ್ರಕ್ಕೆ ಈಗಾಗಲೇ ಉಪಚುನಾವಣೆ ದಿನಾಂಕ ಘೋಷಣೆಯಾಗಿದ್ದು ಬಿಜೆಪಿ ಪಾಳಯದಲ್ಲಿ ಯಾರು ಸ್ಪರ್ಧೆ ನಡೆಸುತ್ತಾರೆ ಎಂಬ ಕುತೂಹಲ ಇದೆ. ಈ ನಡುವೆ ಬೆಳಗಾವಿ ಬಿಜೆಪಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಪುತ್ರನ ಹೆಸರು ಶಿಗ್ಗಾವಿ ಮತಕ್ಷೇತ್ರಕ್ಕೆ ಮುನ್ನಲೆಗೆ ಬಂದಿದೆ. ಈಗಾಗಲೇ ಹುಬ್ಬಳ್ಳಿಯಲ್ಲಿ ‘ನಶಾ ಮುಕ್ತ ಹುಬ್ಬಳ್ಳಿ’ ಎಂಬ ಅಭಿಯಾನದ ಮೂಲಕ ಸಾಮಾಜಿಕ ಚಟುವಟಿಕೆಯಲ್ಲಿ ನಿರತರಾಗಿರುವ ಜಗದೀಶ ಶೆಟ್ಟರ್ ಸುಪುತ್ರ ಸಂಕಲ್ಪ ಶೆಟ್ಟರ್ ಅವರಿಗೆ ಬಿಜೆಪಿ ಶಿಗ್ಗಾವಿ ಉಪಚುನಾವಣೆಯಲ್ಲಿ ಟಿಕೆಟ್ ನೀಡುತ್ತದಾ ಕಾದು ನೋಡಬೇಕಾಗಿದೆ. ಶಿಗ್ಗಾವಿಗೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಬಹುದೊಡ್ಡ ಪಟ್ಟಿಯೇ ಹರಿದಾಡುತ್ತಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸುಪುತ್ರ ಭರತ್ ಅವರ ಹೆಸರು ಸಹ ಮೊದಲಿನಿಂದಲೂ ಶಿಗ್ಗಾವಿ ಮತಕ್ಷೇತ್ರಕ್ಕೆ ಕೇಳಿ ಬರುತ್ತಿದೆ. ಒಟ್ಟಾರೆ, ಬಿಜೆಪಿ ಇಷ್ಟರಲ್ಲೇ ಉಪಚುನಾವಣೆಗೆ ಟಿಕೆಟ್ ಘೋಷಣೆ ಮಾಡಲಿದ್ದು, ಯಾರಿಗೆ ಟಿಕೆಟ್ ಸಿಗಲಿದೆ ಕಾದು ನೋಡಬೇಕಾಗಿದೆ.