ಬೆಳಗಾವಿ : ಬೆಳಗಾವಿ ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣದ ವಿಷಯ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದ್ದು ವಿವಾದ ಈಗ ತಾರಕಕ್ಕೆ ಏರಿದೆ.

ಸಿ ಎಲ್ ಪಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಿಸಲು ಲಕ್ಷ್ಮೀ ಹೆಬ್ಬಾಳಕರ ಕಾರಣ. ಅವರು ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣವಾಗಿದೆ ಎಂದು ಹೇಳಿರುವುದು ಇಡೀ ವಿವಾದದ ಮೂಲ.

ಅಗ ಸತೀಶ ಜಾರಕಿಹೊಳಿ ಅವರು ಪದೇಪದೇ ಲಕ್ಷ್ಮಿ ಹೆಬ್ಬಾಳ್ಕರ್ ಕಟ್ಟಿದರು ಎಂದು ಇದರನ್ನು ಅವಮಾನಿಸಬೇಡಿ. ಕಚೇರಿ ಕಟ್ಟಲು ನಾನು ಮೂರು ಕೋಟಿ ರೂಪಾಯಿ ಕೊಟ್ಟಿದ್ದೆ. ರಮೇಶ ಜಾರಕಿಹೊಳಿ ಜಾಗ ಕೊಟ್ಟಿದ್ದರು ಎಂದು ತಿರುಗೇಟು ನೀಡಿದ್ದರು. ಆಗ ಹೆಬ್ಬಾಳ್ಕರ್ ಅವರು ನಾನು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಳಾದ ನಂತರ ಹತ್ತು ವರ್ಷಗಳ ವಿದ್ಯುತ್ ಬಿಲ್ ಪಾವತಿ ಮಾಡಿದ್ದೇನೆ ಎಂದಾಗ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ಸಿದ್ದರಾಮಯ್ಯ ಅವರನ್ನು ತಲುಪಿದ ಬೆಳಗಾವಿ ಸಚಿವರ ಜಟಾಪಟಿ:

ಬೆಳಗಾವಿ ಸಿಎಲ್ ಪಿ ಸಭೆಯಲ್ಲಿ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಡುವೆ ನಡೆದಿರುವ ಜಟಾಪಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ಹೋಗಿದೆ. ಸಂಕ್ರಾಂತಿಗೆ ಶುಭಾಶಯ ಹೇಳುವ ಪ್ರಯುಕ್ತ ಸಚಿವ ಸತೀಶ ಜಾರಕಿಹೊಳಿ ಭೇಟಿ ಮಾಡಿದ್ದಾರೆ. ಸಿಎಲ್‌ಪಿ ನಂತರ ರಣದೀಪ ಸುರ್ಜೇವಾಲ ಅವರನ್ನು ಸಹ ಸತೀಶ ಜಾರಕಿಹೊಳಿ ಭೇಟಿ ಮಾಡಿ ಒಂದೂವರೆ ಗಂಟೆ ಚರ್ಚೆ ನಡೆಸಿದ್ದಾರೆ. ಆಗ ಸಿಎಲ್ ಪಿ ಸಭೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ತಮ್ಮ ನಡುವೆ ನಡೆದ ಮಾತಿನ ವಿವರವನ್ನು ಅವರ ಗಮನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಕಟ್ಟಿದ್ದು ನಾವು. ಮೂರು ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ. ಹಿಂದೆಲ್ಲ ಪಕ್ಷಕ್ಕೆ ಖರ್ಚು ಮಾಡಿರುವುದು ನಾವು. ಅದು ತಮಗೂ ಗೊತ್ತಿದೆ. ಆದರೆ ನಾಯಕರ ಎದುರು ನನ್ನ ಮೇಲೆ ಗೂಬೆ ಕೂರಿಸಲಾಗಿದ್ದು ಇದನ್ನು ದೆಹಲಿಗೆ ಹೋದಾಗ ವರಿಷ್ಠರ ಗಮನಕ್ಕೆ ತರಬೇಕು ಎಂದು ಸತೀಶ ಜಾರಕಿಹೊಳಿ ಆಗ್ರಹಿಸಿರುವುದಾಗಿ ಗೊತ್ತಾಗಿದೆ.

ಈ ನಡುವೆ ಸಚಿವ ಪರಮೇಶ್ವರ್ ಅವರು ಸತೀಶ ಜಾರಕಿಹೊಳಿ ಅವರ ಪರವಾಗಿ ಮಾತನಾಡಿದ್ದು ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಬೆಳಗಾವಿಗೆ ಹೋಗಿದ್ದೆ. ಆಗ ಪಕ್ಷಕ್ಕೆ ಕಚೇರಿ ಇರಲಿಲ್ಲ. ಪಕ್ಷದ ಕಚೇರಿ ನಿರ್ಮಿಸುವಂತೆ ಸತೀಶ ಜಾರಕಿಹೊಳಿ ಅವರಿಗೆ ಹೇಳಿದ್ದೆ. ನಾನು ಅಧ್ಯಕ್ಷಗಿರಿಯಿಂದ ಕೆಳಗಿಳಿದ ನಂತರ ಕಚೇರಿ ಉದ್ಘಾಟನೆಗೊಂಡಿತ್ತು. ಯಾರು ಹಣಕೊಟ್ಟರು ಎಂದು ಡಿ.ಕೆ. ಶಿವಕುಮಾರ್ ಹೇಳಿಲ್ಲ. ಆದರೆ ಸತೀಶ ಜಾರಕಿಹೊಳಿ ಅವರು ಹೆಚ್ಚು ಹಣ ಕೊಟ್ಟಿದ್ದರು ಅಂತ ಹೇಳಬಹುದಾಗಿತ್ತು ಎಂದರು.