ಬೆಳಗಾವಿ: ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಬೆಳಗಾವಿಯಲ್ಲಿ ಹೊಸ ಸಂಚಲನಕ್ಕೆ ಕಾರಣರಾಗಿದ್ದಾರೆ. ಶನಿವಾರ ಗಣೇಶ ಚತುರ್ಥಿ. ಈ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಗಣೇಶನನ್ನು ಪ್ರತಿಯೊಬ್ಬರು ವಿಶೇಷವಾಗಿ ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸುತ್ತಾರೆ.

ಕಳೆದ ಕೆಲ ತಿಂಗಳುಗಳ ಹಿಂದೆ ಬೆಳಗಾವಿಗೆ ಜಿಲ್ಲಾಧಿಕಾರಿಯಾಗಿ ನೇಮಕಗೊಂಡು ಬಂದಿರುವ ಮೊಹಮ್ಮದ್ ರೋಶನ್ ಅವರು, ತಾವು ಅನ್ಯ ಧರ್ಮದವರಾದರು ಸಹಾ ಗಣಪತಿಯನ್ನು ತಮ್ಮ ಮನೆಗೆ ತರುವ ಮೂಲಕ ಬೆಳಗಾವಿ ಜಿಲ್ಲೆಯ ಮೂಲಕ ನಾಡಿಗೆ ಹೊಸ ರೀತಿಯ ಸಾಮರಸ್ಯಕ್ಕೆ ನಾಂದಿ ಹಾಡಿದ್ದಾರೆ.

ತಲೆಯ ಮೇಲೆ ಟೊಪ್ಪಿ, ಹಣೆಯಲ್ಲಿ ಕೇಸರಿ ನಾಮ, ಕೇಸರಿ ಜುಬ್ಬಾ ಧರಿಸಿ ಗಣಪತಿ ಮೂರ್ತಿಗೆ ಆರತಿ ಬೆಳಗಿ ಅವರು ಭಯ-ಭಕ್ತಿಯಿಂದ ಪೂಜಿಸಿದರು.

ಬೆಳಗಾವಿ ಚನ್ನಮ್ಮ ವೃತ್ತದಲ್ಲಿರುವ ಗಣಪತಿ ಮಂದಿರದಲ್ಲಿ ಶ್ರೀಮತಿ ಅಂಕಿತಾ ಹಾಗೂ ಪುತ್ರ ಅಯಾನ್ ಜೊತೆ ಬಂದ ಮೊಹಮ್ಮದ್ ರೋಶನ್ ತಾವೇ ಗಣಪತಿ ಮೂರ್ತಿಗೆ ಆರತಿ ಬೆಳಗಿ ಪೂಜಿಸಿದರು. ನಂತರ ಗಣಪತಿ ಮೂರ್ತಿಯನ್ನು ತಮ್ಮ ವಿಶ್ವೇಶ್ವರಯ್ಯ ನಗರದ ಸರಕಾರಿ ಬಂಗಲೆಗೆ ಕೊಂಡೊಯ್ದರು. ಅದರಲ್ಲೂ ಸಹ ಗಣಪತಿ ಪರಿಸರಸ್ನೇಹಿ ಆಗಿರುವ ಮಣ್ಣಿನ ಗಣಪತಿ ಎನ್ನುವುದು ಮತ್ತೊಂದು ವಿಶೇಷ.

ತಾವೊಬ್ಬ ಅನ್ಯ ಧರ್ಮದವರಾದರೂ ಸಹಾ ಯಾವುದೇ ಕಟ್ಟುಪಾಡಿಗೆ ಸೀಮಿತವಾಗದ ಬೆಳಗಾವಿ ಜಿಲ್ಲಾಧಿಕಾರಿಗಳು ಈಗ ನಡೆದುಕೊಂಡಿರುವ ಮಾದರಿ ಮಾತ್ರ ಅನುಕರಣೀಯ ಎನಿಸಿದೆ. ಒಟ್ಟಾರೆ ಜಿಲ್ಲಾಧಿಕಾರಿ ನಡೆಗೆ ಇದೀಗ ವ್ಯಾಪಕ ಪ್ರಶಂಸೆ ಹಾಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.