ಬೆಳಗಾವಿ: ಈ ಹಿಂದೆ ನನ್ನ ಮನವಿಯ ಮೇರೆಗೆ ಪ್ರಾರಂಭಿಸಲಾದ ಬೆಳಗಾವಿ- ಮನಗೂರು ರೈಲು ಸಂಚಾರವನ್ನು ತಡೆಹಿಡಿಯಲಾಗಿತ್ತು. ಇಂದಿನಿಂದ ಮತ್ತೆ ರೈಲು ಸಂಚಾರ ಪ್ರಾರಂಭಿಸಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಪ್ರಯಾಣಿಕರು ಈ ರೈಲು ಸೇವೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ತಿಳಿಸಿದ್ದಾರೆ.

ಬೆಳಗಾವಿ-ಮನಗೂರು(07335) ಎಕ್ಸ್‌ಪ್ರೆಸ್‌ ವಿಶೇಷ ರೈಲು ಸಂಚಾರ 16-10-2024 ರಿಂದ 30 ಮಾರ್ಚ್ 2025 ರವರೆಗೆ ವಾರದಲ್ಲಿ ನಾಲ್ಕು ಬಾರಿ (ರವಿವಾರ, ಮಂಗಳವಾರ ಬುಧವಾರ ಹಾಗೂ ಶನಿವಾರ) ಮತ್ತು ಮನಗೂರು-ಬೆಳಗಾವಿ (07336) ರೈಲು 17-10-2024 ರಿಂದ 31 ಮಾರ್ಚ್ 2025 ರವರೆಗೆ ವಾರದಲ್ಲಿ ನಾಲ್ಕು ಬಾರಿ (ಸೋಮವಾರ, ಬುಧವಾರ, ಗುರುವಾರ ಮತ್ತು ರವಿವಾರ) ಸಂಚರಿಸಲಿದೆ.

ಪ್ರಯಾಣಿಕರ ಸ್ಪಂದನೆ ಮತ್ತು ಜನದಟ್ಟಣೆಯನ್ನು ಗಮನದಲ್ಲಿಟ್ಟು ಮುಂದೆ ಈ ರೈಲುನ್ನು ಪ್ರತಿದಿನ ಸಂಚರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು.

ಈ ಸಂದರ್ಭದಲ್ಲಿ ಈರಣ್ಣ ಕಡಾಡಿ ಅಭಿಮಾನಿ ಬಳಗದವರು ಹಾಗೂ ಪ್ರಯಾಣಿಕರು ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ರೈಲಿನ ಚಾಲಕರು, ಬೆಳಗಾವಿ ಕೋರ್ ಡೆವಲ್ಪಮೆಂಟ್‌ ತಂಡದ ಸದಸ್ಯರು ಹಾಗೂ ರೈಲ್ವೆ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.