Join The Telegram | Join The WhatsApp |
ಬೆಳಗಾವಿ :
ವಿಧಾನಸಭಾ ಚುನಾವಣೆಗೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರ ಸಜ್ಜಾದಂತೆ ಕಾಣಿಸುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ ನೇರಾನೇರ ಹಣಾಹಣಿ ನಡೆಯುವುದು ಬಹುತೇಕ ಖಚಿತ.
ಗೋಕಾಕ ಬಿಜೆಪಿ ಶಾಸಕ,ಮಾಜಿ ಸಚಿವ ರಮೇಶ ಜಾರಕಿಹೊಳಿ ಇದೀಗ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಬಿರುಗಾಳಿ ಬಿಸಲು ಕಾರಣರಾಗಿದ್ದಾರೆ.
ಶನಿವಾರ ಅವರು ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿ ಚುನಾವಣಾ ರಣತಂತ್ರ ಹೆಣೆದಿದ್ದಾರೆ. ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಅವರು ಇದೀಗ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಮುಂದಿನ ಯೋಜನೆಗೆ ಸಜ್ಜಾಗಿದ್ದಾರೆ.
ನಾಲ್ಕು ಗೋಡೆ ಮಧ್ಯೆ ಹೇಳುವುದು ಬಹಳಷ್ಟು ಇದೆ. ನಿಮ್ಮೆಲ್ಲರ ಜೊತೆ ಮಾತನಾಡುತ್ತೇನೆ .ಆದರೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಮಲ ಅರಳಲೇಬೇಕು. ಅದಕ್ಕಾಗಿ ಎಲ್ಲರೂ ಶ್ರಮವಹಿಸಬೇಕು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ನಾಗೇಶ್ ಮಣೋಲ್ಕರ್, ಸಂಜಯ್ ಪಾಟೀಲ್, ಧನಂಜಯ ಜಾಧವ್ ಗ್ರಾಮೀಣ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು. ನಾಗೇಶ ಅವರನ್ನು ಬಿಜೆಪಿ ವರಿಷ್ಠರಿಗೆ ಭೇಟಿ ಮಾಡಿಸಿದ್ದೇನೆ. ನಮ್ಮ ಕಡೆಯಿಂದ ನಾಗೇಶ್ ಅವರನ್ನು ನಿಲ್ಲಿಸುತ್ತೇವೆ ಅಂತ ಹೇಳಿದ್ದೇನೆ.ಒಂದು ವೇಳೆ ಅವರು ಬೇಡ ಅಂದರೆ ಅವರು ಹೇಳುವ ಅಭ್ಯರ್ಥಿಗೆ ಬೆಂಬಲ ನೀಡಲು ಸಿದ್ದ ಎಂದು ಘೋಷಿಸಿದರು.
ಕಳೆದ ಸಲ ಇಲ್ಲಿ ಶಾಸಕರನ್ನು ಆಯ್ಕೆ ಮಾಡಲು ಎಷ್ಟೊಂದು ಪ್ರಯತ್ನ ಮಾಡಿದ್ದೇವೆ. ಆರಿಸಿ ಬಂದ ಮೇಲೆ ಒಂದೇ ತಾಸಿನಲ್ಲಿ ನಮ್ಮೆಲ್ಲರ ತಲೆ ಮೇಲೆ ಕುಳಿತು ಕೊಂಡರು ಎಂದು ಹಾಲಿ ಶಾಸಕರ ಹೆಸರು ಹೇಳದೆ ವಾಗ್ದಾಳಿ ನಡೆಸಿದರು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು 25,000 ಮತಗಳ ಅಂತರದಿಂದ ಗೆಲ್ಲಿಸುತ್ತೇವೆ. ಪ್ರತಿಯೊಂದು ಬೂತ್ ನಲ್ಲಿ 25 ಜನರನ್ನು ಸಿದ್ಧಪಡಿಸುತ್ತೇವೆ. ಕಳೆದ ಸಲ ಕಾಂಗ್ರೆಸ್ ಪಕ್ಷ ಲೀಡ್ ಆಗಿತ್ತು, ಚುನಾವಣಾ ಫಲಿತಾಂಶ ಬಂದ ಮೇಲೆ ಮಾತನಾಡಬೇಕು ಎಂದು ಶಪಥ ಮಾಡಿದ್ದೇನೆ. ಆದರೆ ಗ್ರಾಮೀಣ ಕ್ಷೇತ್ರದಲ್ಲಿ ಇದೀಗ ಮಾತನಾಡುವ ಅನಿವಾರ್ಯತೆ ಇದೆ. ಅದಕ್ಕಾಗಿ ಮಾತನಾಡುತ್ತಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಅವರು ವಿಧಾನಸಭಾ ಚುನಾವಣೆ ರಂಗೇರುವ ಎಲ್ಲಾ ಸಾಧ್ಯತೆಗಳನ್ನು ಬಿಚ್ಚಿಟ್ಟರು.
Join The Telegram | Join The WhatsApp |