
ಬೆಳಗಾವಿ : ಕರಾವಳಿ ಮೂಲದಿಂದ ಬಂದು ಬೆಳಗಾವಿಯಲ್ಲಿ ನೆಲೆ ನಿಂತು ಸ್ಥಾಪಿಸಿದ ಮಹಾದ್ವಾರ ರಸ್ತೆಯ ಶಿವಗಿರಿ ಕೋ- ಅಪ್ ಕ್ರೆಡಿಟ್ ಸೊಸೈಟಿಗೆ ಈಗ ಭರ್ತಿ 25 ವರ್ಷದ ಸಂಭ್ರಮ. ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಜನರ ಪ್ರೀತಿಗೆ ಪಾತ್ರವಾಗಿರುವ ಶಿವಗಿರಿ ಸೊಸೈಟಿ ತೆರೆ ಮರೆಯಲ್ಲಿ ಹತ್ತು ಹಲವರು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸೇವಾ ಚಟುವಟಿಕೆಗೂ ತನ್ನನ್ನು ತೆರೆದುಕೊಂಡಿದೆ.
ಬ್ರಹ್ಮಶ್ರೀ ಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳೊಂದಿಗೆ ಬಿಲ್ಲವರ ಅಸೋಸಿಯೇಷನ್ ಬಹು ನಿರೀಕ್ಷೆಯೊಂದಿಗೆ ಸ್ಥಾಪಿತವಾದ ಶಿವಗಿರಿ ಸೊಸೈಟಿ ಈಗ 25 ವರ್ಷ ಪೂರೈಸಿದೆ. ಈ ಕಿರು ಅವಧಿಯಲ್ಲಿ ಸಂಸ್ಥೆ ಹಣಕಾಸು ಸಂಸ್ಥೆಯಂತೆ ಕಾರ್ಯನಿರ್ವಹಿಸಿದರೂ ಸಮಾಜಮುಖಿ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿರುವುದು ಸಂಸ್ಥೆಯ ಹೆಮ್ಮೆ ಎನ್ನಬಹುದು. ಲಾಭದ ಉದ್ದೇಶವನ್ನಷ್ಟೇ ಹೊಂದಿರದೆ ಸಮಾಜದಲ್ಲಿ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಕ್ರೀಡೆ ಮತ್ತು ಕಲೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸೊಸೈಟಿ ನೊಂದವರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ನೆರವು, ಪ್ರೋತ್ಸಾಹ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ತನ್ನ ಕಿರು ಕಾಣಿಕೆಯನ್ನು ಸಲ್ಲಿಸುತ್ತಾ ಬಂದಿದೆ. ಸೊಸೈಟಿಯು ಪ್ರತಿ ವರ್ಷ ನಡೆಯುವ ತನ್ನ ಸರ್ವಸಾಧಾರಣ ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆತ್ಮೀಯವಾಗಿ ಸನ್ಮಾನ ಹಮ್ಮಿಕೊಳ್ಳುತ್ತಿದೆ. ಜೊತೆಗೆ ವಿದ್ಯಾರ್ಥಿ ವೇತನವನ್ನು ಪ್ರದಾನ ಮಾಡಲಾಗುತ್ತಿದೆ. ನೂರಕ್ಕಿಂತ ಹೆಚ್ಚು ಸದಸ್ಯರ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸುವ ಮೂಲಕ ನೆರವಾಗುತ್ತಿದೆ. ಸದಸ್ಯರಿಗೆ ಅನಾರೋಗ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ಆರ್ಥಿಕ ಸಹಾಯ ಹಸ್ತ ಚಾಚುತ್ತಿದೆ. ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸದ ವ್ಯವಸ್ಥೆಯನ್ನು
ರಿಯಾಯಿತಿ ದರದಲ್ಲಿ ಕಲ್ಪಿಸಿ ಕೊಡುತ್ತಿದೆ.ಜಗತ್ತಿಗೆ ಮಾರಕ ಕೊರೊನಾ ಅಪ್ಪಳಿಸಿದಾಗ ಸದಸ್ಯರ ಮನೆಗಳಿಗೆ ತೆರಳಿದ ಸೊಸೈಟಿ ಆಡಳಿತ ಮಂಡಳಿ ಕೊರೋನಾ ಕಿಟ್, ಆಹಾರ ಸಾಮಗ್ರಿ ಮತ್ತು ಇತರ ಅಗತ್ಯ ವಸ್ತುಗಳನ್ನು ವಿತರಿಸಿದೆ. ಪ್ರತಿವರ್ಷ ಬಿಲ್ಲವರ ಅಸೋಸಿಯೇಷನ್ ಸಹಯೋಗದಲ್ಲಿ ಚಿತ್ರಕಲಾ ಸ್ಪರ್ಧೆ ಮತ್ತು ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ. ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬಿಯಾಗಲು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳುತ್ತಿದೆ. ಸ್ವಸಹಾಯ ಗುಂಪು ರಚನೆ ಮಾಡಿ ಅವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಜಾಗತಿಕ ಮಹಿಳಾ ದಿನಾಚರಣೆ ಅಂಗವಾಗಿ ಪ್ರತಿವರ್ಷ ಸಾಧಕ ಮಹಿಳೆಯರಿಗೆ ಸನ್ಮಾನ ಏರ್ಪಡಿಸಲಾಗುತ್ತಿದೆ.
ಉದ್ಯೋಗದ ನಿಮಿತ್ತ ದಶಕಗಳ ಹಿಂದೆ ಬೆಳಗಾವಿಗೆ ಬಂದ ಸಮಾಜದ ಹಿರಿಯರು ಸಮಾಜದ ಸಣ್ಣಪುಟ್ಟ ವ್ಯಾಪಾರಿಗಳು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡರು. ಅವರಿಗೆ ಆರ್ಥಿಕವಾಗಿ ನೆರವಾಗುವ ನಿಟ್ಟಿನಲ್ಲಿ ಶಿವಗಿರಿ ಸೊಸೈಟಿಯನ್ನು ಸ್ಥಾಪಿಸುವ ಮೂಲಕ ಅವರಿಗೆ ಆರ್ಥಿಕ ಅನುಕೂಲತೆ ಒದಗಿಸಿ ಕೊಟ್ಟು ನೆರವಾದರು. ಆದರೆ ಬರ ಬರುತ್ತಾ ಸೊಸೈಟಿಯ ವಿಸ್ತಾರ ಇತರ ಸಮಾಜಗಳಿಗೂ ವಿಸ್ತರಿಸಿತು. ಈಗ ಎಲ್ಲಾ ಸಮಾಜದವರು ಜಾತಿಭೇದವಿಲ್ಲದೆ ಸೊಸೈಟಿಯ ಸದಸ್ಯರಾಗಿ ಸೊಸೈಟಿಯಿಂದ ಸಾಲ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಕರಾವಳಿ ಮೂಲದ ಜನ ಜಾತಿಭೇದವಿಲ್ಲದೆ ಶಿವಗಿರಿ ಸೊಸೈಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ ಅದರ ಸಾಲ ಸೌಲಭ್ಯ ಪಡೆಯುತ್ತಿರುವುದು ಗಮನಾರ್ಹ ಸಂಗತಿ. ಸೊಸೈಟಿ ಭವಿಷ್ಯದಲ್ಲಿ ಸ್ವಂತ ಕಟ್ಟಡ ಹೊಂದಲು ಬಯಸಿದೆ. ಮಾತ್ರವಲ್ಲ ವಿವಿಧ ಜಿಲ್ಲೆಗಳಲ್ಲಿ ತನ್ನ ಶಾಖೆಯನ್ನು ವಿಸ್ತರಿಸಲು ಯೋಜನೆ ರೂಪಿಸಿದೆ. ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಅವರ ಕುಟುಂಬಕ್ಕೆ ಆರೋಗ್ಯ ವಿಮೆಯಂತಹ ಯೋಜನೆಯನ್ನು ಕಾರ್ಯಗತಗೊಳಿಸುವ ಸದುದ್ದೇಶಕ್ಕೂ ಮುಂದಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.