ಬೆಳಗಾವಿ : ಸಂಸದೆ ಮಂಗಲ ಅಂಗಡಿಯವರ ಮನವಿ ಪರಿಗಣಿಸಿದ ಕೇಂದ್ರ ನಗರಾಭಿವೃದ್ಧಿ ಸಚಿವ ಹರದೀಪ್ ಸಿಂಗ್ ಪುರಿ ಅವರು ಬೆಳಗಾವಿ ಸ್ಮಾರ್ಟ್ ಸಿಟಿಯನ್ನು ಸಿಐಟಿಐಐಎಸ್ (ಸಿಟಿ ಇನ್ವೆಸ್ಟ್ ಮೆಂಟ್ಸ್ ಟು ಇನ್ನೋವೇಟ್, ಇಂಟಗ್ರೇಟ್ ಎಂಡ್ ಸಸ್ಟೇನ್ ) ಚಾಲೇಂಜ್ ಯೋಜನೆಯಡಿ ಆಯ್ಕೆ ಮಾಡಿ 135 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ. ಪ್ರಸ್ತಾಪಿತ ಯೋಜನೆಯಡಿ ಬೆಳಗಾವಿ ನಗರದಲ್ಲಿ ಘನತ್ಯಾಜ್ಯ ನಿರ್ವಹಣೆಗೆ ವಿವಿಧ ಕ್ರಮಗಳನ್ನು ಅನುಷ್ಠಾನಗೊಳಿಸಲು ಅವಕಾಶವಿದೆ. ದೇಶಾದ್ಯಂತ 18 ನಗರಗಳು ಈ ಯೋಜನೆಗೆ ಆಯ್ಕೆಯಾಗಿವೆ.

ಈ ಮೂಲಕ ಸಂಸದೆ ಮಂಗಲ ಅಂಗಡಿ ಮನವಿಗೆ ಕೇಂದ್ರ ಸರಕಾರ ಸ್ಪಂದಿಸಿದಂತಾಗಿದೆ.
ಕರ್ನಾಟಕದಲ್ಲಿ ಬೆಳಗಾವಿ ನಗರ ಮಾತ್ರ ಈ ಯೋಜನೆಗೆ ಆಯ್ಕೆಯಾಗಿದೆ. ಸಿಐಟಿಐಐಎಸ್-2.0 ಚಾಲೇಂಜ್ ಯೋಜನೆ ಆಯ್ಕೆಗೆ ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಗಣಿಸುವಂತೆ ಕೇಂದ್ರ ನಗರಾಭಿವೃದ್ಧಿ ಸಚಿವರಲ್ಲಿ ಸಂಸದೆ ಮಂಗಲ ಅಂಗಡಿ ಅವರು ಇತ್ತೀಚೆಗೆ ಮನವಿ ಅರ್ಪಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಮನವಿಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಹರದೀಪಸಿಂಗ್‌ ಪುರಿಯವರಿಗೆ ಮಂಗಲ ಅಂಗಡಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸಂಸದರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.