ಬೆಳಗಾವಿ-ಕೊಲ್ಲಾಪುರ ರೈಲು ಮಾರ್ಗ ಬೇಡಿಕೆ ಇಂದು ನಿನ್ನೆಯದ್ದಲ್ಲ. ಸದ್ಯಕ್ಕೆ ಬೆಳಗಾವಿ-ಕೊಲ್ಲಾಪುರ ನಡುವಿನ ಪ್ರಯಾಣಿಕರು ಮೀರಜ್ ಮೂಲಕ ಸುದೀರ್ಘ ಸಮಯವನ್ನು ಪ್ರಯಾಣಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲವೇ ಟ್ರಾಫಿಕ್ ದಟ್ಟಣೆಯ ರಸ್ತೆಗಳಲ್ಲಿ ಗಂಟೆಗಟ್ಟಲೆ ರಸ್ತೆಯ ಮೂಲಕ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇದೆ. ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯನ್ನಾಗಿರಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೂ ಹೊಸದಾಗಿ ರೈಲ್ವೆ ಮಾರ್ಗ ನಿರ್ಮಿಸಿದರೆ ಈ ಸಮಸ್ಯೆಗೆ ತಾರ್ಕಿಕವಾಗಿ ಇನ್ನಷ್ಟು ಪರಿಹಾರ ಸಿಗಬಹುದು. ಇದಕ್ಕಾಗಿ ರೈಲ್ವೆ ಮಾರ್ಗದತ್ತ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಹೊಸ ರೈಲ್ವೆ ಮಾರ್ಗ ನಿರ್ಮಾಣವನ್ನು ಯಾವ ರೀತಿ ಕೈಗೊಳ್ಳಬೇಕು ಎಂಬ ಅಂಶವನ್ನು ಮುಖ್ಯವಾಗಿ ಪರಿಗಣಿಸಲಾಗುತ್ತಿದೆ. ಅಭಿಯಂತರರು ಇಲ್ಲಿನ ಭೌಗೋಳಿಕತೆ, ಮಣ್ಣಿನ ಸ್ಥಿತಿಗತಿ, ಪರಿಸರದ ಪ್ರಭಾವ, ಸಾಮಾಜಿಕ-ಆರ್ಥಿಕ ಅಂಶಗಳನ್ನು ಗಮನಿಸಲಿದ್ದಾರೆ. ಭೂಸ್ವಾಧೀನ, ಸುರಂಗ, ಸೇತುವೆ ನಿರ್ಮಾಣ, ರೈಲ್ವೆ ಮಾರ್ಗದ ಅಂದಾಜು ವೆಚ್ಚ ಮುಂತಾದವುಗಳನ್ನು ಗಮನಿಸಲಾಗುತ್ತದೆ. ನೈರುತ್ಯ ರೈಲ್ವೆ ಈಗಾಗಲೇ ಬೆಳಗಾವಿ- ಕೊಲ್ಲಾಪುರ ಮಾರ್ಗಕ್ಕೆ ಪ್ರಾಥಮಿಕ ಇಂಜಿನಿಯರಿಂಗ್ ಮತ್ತು ಟ್ರಾಫಿಕ್ (ಪಿಇಟಿ) ಸಮೀಕ್ಷೆ ಪ್ರಾರಂಭಿಸಿದೆ. ಪುಣೆಯ ಮೊನಾರ್ಕ್ ಸರ್ವೆಯರ್ಸ್ ಮತ್ತು ಇಂಜಿನಿಯರಿಂಗ್ ಕನ್ಸಲೆಂಟ್ ಲಿಮಿಟೆಡ್ ಪ್ರಮುಖ ಸಲಹೆಗಾರ ಸಂತೋಷ ಯುವರಾಜ್ ದೇಸಾಯಿ ರಾಯಬಾಗ ತಾಲೂಕು ಬಾವನ ಸವದತ್ತಿಯವರು. ಹೀಗಾಗಿ ಈ ಯೋಜನೆ ವಿಶೇಷವಾಗಿ ಮಹತ್ವ ಪಡೆದುಕೊಂಡಿದ್ದು ಅವರು ಈ ಯೋಜನೆಗೆ ಒತ್ತು ನೀಡಬಹುದು. ರೈಲ್ವೆ ವಿನ್ಯಾಸ ಯೋಜನೆಯಲ್ಲಿ 25 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಅವರು ಭಾರತೀಯ ರೈಲ್ವೆ ಜಾಲದ 25,000 ಕಿಲೋಮೀಟರ್ ಗಿಂತ ಹೆಚ್ಚು ಮತ್ತು ಶ್ರೀಲಂಕಾ ರೈಲ್ವೆ ಸೇರಿದಂತೆ ಹಲವಾರು ಅಂತರಾಷ್ಟ್ರೀಯ ಯೋಜನೆಗಳಲ್ಲಿ ಕೆಲಸ ಮಾಡಿರುವ ತಜ್ಞರಾಗಿದ್ದಾರೆ. ಬೆಳಗಾವಿ ತಾಲೂಕು ಸದ್ಯ ರೈಲ್ವೆ ಮಾರ್ಗವನ್ನು ಹೊಂದಿದೆ ಆದರೆ ನಿಪ್ಪಾಣಿ ಚಿಕ್ಕೋಡಿ ಹುಕ್ಕೇರಿ ತಾಲೂಕುಗಳು ರೈಲ್ವೆ ಮಾರ್ಗ ಹೊಂದಿಲ್ಲ ಈ ನಿಟ್ಟಿನಲ್ಲಿ ಹೊಸ ರೈಲು ಮಾರ್ಗ ನಿರ್ಮಾಣದಿಂದ ಒಟ್ಟಾರೆ ಆರ್ಥಿಕ ಅಭಿವೃದ್ಧಿಯಲ್ಲಿ ಬಹುದೊಡ್ಡ ಕ್ರಾಂತಿ ಸಾಧಿಸಬಹುದಾಗಿದೆ ಎನ್ನುವುದು ನಾಗರಿಕರು ಹಾಗೂ ಜನಪ್ರತಿನಿಧಿಗಳ ಒತ್ತಾಸೆಯಾಗಿದೆ.
ಬೆಳಗಾವಿ: ಕರ್ನಾಟಕದ ಬೆಳಗಾವಿ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರ ನಡುವೆ ಅವಿನಾಭಾವ ಸಂಬಂಧ ಇದೆ. ಈ ಎರಡು ನಗರಗಳನ್ನು ಬೆಸೆಯುವ ನಿಟ್ಟಿನಲ್ಲಿ ಹೊಸ ರೈಲ್ವೆ ಮಾರ್ಗ ನಿರ್ಮಿಸಬೇಕು ಎನ್ನುವುದು ದಶಕಗಳ ಕನಸಾಗಿದೆ. ಇದೀಗ ಆ ಕನಸು ಕೈಗೂಡುವ ಲಕ್ಷಣಗಳು ಗರಿಗೆದರಿವೆ.
ಕೊಲ್ಲಾಪುರ-ಬೆಳಗಾವಿ ನೂತನ
ರೈಲ್ವೆ ಮಾರ್ಗದ ಸರ್ವೇ ಕೊನೆಗೂ ಆರಂಭಗೊಂಡಿದೆ. ಈ ರೈಲು ಮಾರ್ಗ ಬೆಳಗಾವಿ-ಹುಕ್ಕೇರಿ ತಾಲೂಕು, ಸಂಕೇಶ್ವರ, ಕಣಗಾಲ, ನಿಪ್ಪಾಣಿ, ಕಾಗಲ್‌ಗಳಿಗೆ ಸಂಪರ್ಕ ಕಲ್ಪಿಸಲಿದೆ.
ಬೆಳಗಾವಿ-ಕೊಲ್ಲಾಪುರ ರೈಲು ಮಾರ್ಗ ಧಾರವಾಡ- ಕೊಲ್ಲಾಪುರ ರೈಲು ಕಾರಿಡಾರ್ ಭಾಗವಾಗಿದೆ. ಪರಕನಹಟ್ಟಿಯಲ್ಲಿ ಪ್ರಾರಂಭವಾಗಿ ಕೊಲ್ಲಾಪುರದಲ್ಲಿ ಕೊನೆಗೊಳ್ಳಲಿದೆ.ಪುಣೆಯ ಎಲ್ಲೋ ಮೊನಾರ್ಕ್
ಮತ್ತು ಇಂಜಿನಿಯರಿಂಗ್ ಕನ್ಸಲ್ಟೆಂಟ್ ಲಿಮಿಟೆಡ್‌ಗೆ ಸಮೀಕ್ಷೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಬೆಳಗಾವಿ-ಕೊಲ್ಲಾಪುರ ರೈಲ್ವೆ ಮಾರ್ಗದ ಪ್ರಾಥಮಿಕ ಸಮೀಕ್ಷೆಗೆ
2024ರ ಜನವರಿಯಲ್ಲಿ ರೈಲ್ವೆ ಮಂಡಳಿಯಿಂದ ಅನುಮೋದನೆ ಸಿಕ್ಕಿದೆ ಆರು ತಿಂಗಳಲ್ಲಿ ಇದನ್ನು ಪೂರ್ಣಗೊಳಿಸುವ ಗುರಿಯನ್ನೂ ನಿಗದಿಪಡಿಸಲಾಗಿತ್ತು. ಅದರಂತೆ ರೈಲ್ವೆ ಮಂಡಳಿಯಿಂದ ಮುಂದಿನ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಯಿತು. ಈಗ ವಾಸ್ತವವಾಗಿ ಸಮೀಕ್ಷೆ ಆರಂಭವಾಗಿದೆ. ಈ ಸಮೀಕ್ಷೆಯಲ್ಲಿ
ಬೆಳಗಾವಿ-ಕೊಲ್ಲಾಪುರ ನಡುವೆ ನೇರ ರೈಲ್ವೆ ಹಳಿಗಳ ನಿರ್ಮಾಣ ತಾಂತ್ರಿಕವಾಗಿ ಸಾಧ್ಯವೇ? ಎನ್ನುವುದನ್ನು ಪರೀಕ್ಷಿಸಲಾಗುತ್ತಿದೆ. ಇದಕ್ಕಾಗಿ ಡ್ರೋನ್ ಕ್ಯಾಮೆರಾಗಳೊಂದಿಗೆ
ಉನ್ನತ ತಂತ್ರಜ್ಞಾನವನ್ನೂ ಸಹಾ ಬಳಸಲಾಗುತ್ತಿದೆ.
ಹಲವಾರು ಮಾನದಂಡಗಳ ಆಧಾರದ ಮೇಲೆ ಇದು ಸೂಕ್ತವೇ? ಎಂಬ ಬಗ್ಗೆ ಸಮೀಕ್ಷೆಯಲ್ಲಿ ನಿರ್ಧರಿಸಲಾಗುತ್ತಿದೆ.ಹೊಸ ರೈಲು ಮಾರ್ಗದ ವೆಚ್ಚ, ಭೂಸ್ವಾಧೀನ, ಭೌಗೋಳಿಕ ಹಿನ್ನೆಲೆಯ ದೃಷ್ಟಿಯಿಂದ ಈ ರೈಲುಮಾರ್ಗದ ನಿರ್ಮಾಣ ಲಾಭದಾಯಕವೇ? ಎಂಬ ಮಾಹಿತಿಯನ್ನೂ ಪರಿಗಣಿಸಲಾಗುತ್ತದೆ. ಸುರಕ್ಷತೆ, ನಿರ್ವಹಣೆ ಮತ್ತು ಪರಿಸರ ಮುಂತಾದ
ಮಾನದಂಡಗಳನ್ನು ಸಹ ಪರಿಶೀಲಿಸಲಾಗುತ್ತಿದೆ. ಈ ಹೊಸ ಮಾರ್ಗದಲ್ಲಿ ಬೆಳಗಾವಿ ಮತ್ತು ಕೊಲ್ಲಾಪುರ ಎರಡು ಪ್ರಮುಖ ನಗರಗಳಾಗಿದ್ದು, ಆರ್ಥಿಕವಾಗಿ ಹಾಗೂ ಇತರ ಕಾರಣಗಳಿಂದ ಅತ್ಯಂತ ಮಹತ್ವ ಪಡೆದಿದೆ. ಇದು ಎರಡೂ ನಗರಗಳಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಪ್ರವಾಸೋದ್ಯಮದಲ್ಲಿ ಹೊಸ ಭಾಷ್ಯವನ್ನೇ ಬರೆಯಲಿದೆ.
ಪ್ರಸ್ತುತ ಬೆಳಗಾವಿಯಿಂದ ಕೊಲ್ಲಾಪುರಕ್ಕೆ
ಹೋಗಲು ನೇರ ರೈಲುಮಾರ್ಗವಿಲ್ಲ. ಬೆಳಗಾವಿಯಿಂದ ಮೀರಜ್ ಗೆ ಹೋಗಿ ಅಲ್ಲಿಂದ ಕೊಲ್ಲಾಪುರಕ್ಕೆ ಹೋಗಬೇಕು. ಸೋಮವಾರದಿಂದ ಆರಂಭವಾಗುವ ಪುಣೆ ಮತ್ತು ಹುಬ್ಬಳ್ಳಿ ನಡುವಿನ ಮಹತ್ವಾಕಾಂಕ್ಷೆಯ ವಂದೇ ಭಾರತ ರೈಲು ಸಹಾ ಸಮಯ ಉಳಿತಾಯದ ಕಾರಣಕ್ಕಾಗಿ ಕೊಲ್ಲಾಪುರಕ್ಕೆ ಹೋಗುತ್ತಿಲ್ಲ. ವಂದೇ ಭಾರತ ಯೋಜನೆಯಿಂದ ಸದ್ಯ ಕೊಲ್ಲಾಪುರವನ್ನು ಹೊರಗಿಡಲಾಗಿದೆ.ಕೊಲ್ಲಾಪುರಕ್ಕೆ ಈಗ ಪುಣೆ-ಬೆಂಗಳೂರು ಹೆದ್ದಾರಿ ಮೂಲಕ ಪ್ರಯಾಣಿಸಬೇಕು. ಈ ಎರಡು ನಗರಗಳ ಹೊಸ ರೈಲು ಮಾರ್ಗದಿಂದ ಭವಿಷ್ಯದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಸಂಪರ್ಕ ಸೇತುವೆ ಇನ್ನಷ್ಟು ಬಲವಾಗಲಿದೆ.
ಇಲ್ಲಿ ಹೊಸ ರೈಲ್ವೆ ಮಾರ್ಗ ನಿರ್ಮಾಣಗೊಂಡರೆ
ರೈಲು ಗರಿಷ್ಠ 160 ಕಿ.ಮೀ ವೇಗದಲ್ಲಿ ಓಡಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ರೈಲ್ವೆ ಮಾರ್ಗವನ್ನು ಆಧುನಿಕವಾಗಿ ನಿರ್ಮಾಣ ಮಾಡಲಾಗುವುದು. ಈ ಮಾರ್ಗ ಅಸ್ತಿತ್ವಕ್ಕೆ ಬಂದರೆ ಬೆಳಗಾವಿ-ಕೊಲ್ಲಾಪುರ ಅಂತರ ಕಡಿಮೆಯಾಗಲಿದೆ. ಜೊತೆಗೆ ಇದು ಹಲವಾರು ಸಣ್ಣ ಪಟ್ಟಣಗಳ ನಡುವೆ ಹಾದುಹೋಗಲಿದೆ. ಅವುಗಳ ಅಭಿವೃದ್ಧಿಯೂ ಸಹಾ
ಆಗಲಿದೆ. ಮಾತ್ರವಲ್ಲದೆ ಈಗ ವಾಹನಗಳಿಗೆ ಹೆಚ್ಚಿನ ಹಣ ತೆತ್ತು ಪ್ರಯಾಣಿಸಬೇಕು. ಆದರೆ, ರೈಲ್ವೆ ಪ್ರಯಾಣ ಅತ್ಯಂತ ಸುಖಕರ ಹಾಗೂ ಕಡಿಮೆ ವೆಚ್ಚದ್ದಾಗಿದೆ. ಪ್ರಯಾಣಿಕ ಸ್ನೇಹಿ ಬೆಳವಣಿಗೆ ದೃಷ್ಟಿಯಿಂದ ಬೆಳಗಾವಿ ಮತ್ತು ಕೊಲ್ಲಾಪುರ ನಡುವೆ ಹೊಸ ರೈಲ್ವೆ ಮಾರ್ಗ ಒಟ್ಟಾರೆ ಈ ಭಾಗದ ಪ್ರಗತಿಗೆ ಹೊಸ ರೀತಿಯಲ್ಲಿ ನಾಂದಿ ಹಾಡಲಿದೆ.