ಬೆಳಗಾವಿ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ತಮ್ಮ ಜೀವಮಾನದಲ್ಲಿ ಒಮ್ಮೆ ಮಾತ್ರ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಮಹಾ ಅಧಿವೇಶನದ ಸರ್ವಾಧ್ಯಕ್ಷತೆ ವಹಿಸಿದ್ದರು. ಅದು ಬೆಳಗಾವಿ ಅಧಿವೇಶನ ಎನ್ನುವುದು ಸ್ಮರಣೀಯ.

1924ರ ಡಿಸೆಂಬರ್ 26 ಮತ್ತು 27 ರಂದು ನಡೆದ ಅಧಿವೇಶನಕ್ಕೆ ಈಗ ಬರೋಬ್ಬರಿ 100 ವರ್ಷ. ಅದರ ಸವಿ ನೆನಪಿಗೆ ಇಂದು ಬೆಳಗಾವಿ ಮಹಾನಗರದಲ್ಲಿ ನೂರು ವರ್ಷಗಳ ನಂತರ ಮಹಾ ಅಧಿವೇಶನ ನಡೆಯಿತು. ಕಾಂಗ್ರೆಸ್ ಪಕ್ಷದ ಅತಿರಥ ನಾಯಕರು ಬೆಳಗಾವಿಗೆ ಆಗಮಿಸಿ ಮಹಾ ಅಧಿವೇಶನಕ್ಕೆ ಸಾಕ್ಷಿಯಾದರು. ಅಖಿಲ ಭಾರತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆ ಮಧ್ಯಾಹ್ನ 3ರ ನಂತರ ಆರಂಭವಾಯಿತು. ಕಾಂಗ್ರೆಸ್ ಪಕ್ಷದ 200 ಕ್ಕೂ ಹೆಚ್ಚು ರಾಷ್ಟ್ರೀಯ ನಾಯಕರು ಭಾಗವಹಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆಗಮಿಸಿರುವುದು ವಿಶೇಷ. ಅವರು ಇಡೀ ಕಾರ್ಯಕ್ರಮದ ಪ್ರಮುಖ ಕೇಂದ್ರ ಬಿಂದುವಾಗಿದ್ದಾರೆ. ಆದರೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಇತ್ತೀಚಿಗಷ್ಟೇ ಸಂಸದರಾಗಿ ಆಯ್ಕೆಯಾಗಿರುವ ಗಾಂಧಿ ಕುಟುಂಬದ ಯುವನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗೈರುಹಾಜರಾಗಿದ್ದಾರೆ.

ವೀರಸೌಧದ 100 ಮೀಟರ್ ದೂರ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಇತರ ನಾಯಕರನ್ನು ಸೇವಾದಳದ ಕಾರ್ಯಕರ್ತರು ಪಥ ಸಂಚಲನದ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು. ಭಾರತ ಮಾತಾ ಕಿ ಜೈ ಎಂಬ ಜಯ ಘೋಷ ಎಲ್ಲೆಡೆ ಮೊಳಗಿತು. ಕಾಂಗ್ರೆಸ್ ಸೇವಾದಳ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಹಿಡಿದು ಗಮನ ಸೆಳೆದರು. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎ ಐ ಸಿ ಸಿ ಉಸ್ತುವಾರಿಗಳಾದ ರಣದೀಪ ಸಿಂಗ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದಾರೆ.
ರಾಷ್ಟ್ರಮಟ್ಟದ ಈ ಕಾರ್ಯಕ್ರಮದಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ.