ಬೆಳಗಾವಿ: ಬೆಳಗಾವಿಯಲ್ಲಿ ಅತ್ಯುನ್ನತ ತಂತ್ರಜ್ಞಾನವುಳ್ಳ ಮೆಗಾ ಡೇರಿ ನಿರ್ಮಿಸುವ ಮೂಲಕ ಜಿಲ್ಲೆ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ನಗರದ ಕೆಪಿಟಿಸಿಎಲ್‌ ಸಭಾಭವನದಲ್ಲಿ ಸೋಮವಾರ ನಡೆದ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ 2023-24ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅ‍ವರು ಮಾತನಾಡಿದರು. ಬೆಳಗಾವಿ ಹಾಲು ಒಕ್ಕೂಟ ಸುಧಾರಣೆಗೆ ಸಂಕಲ್ಪ ಮಾಡಿದ್ದೇನೆ. ಎಲ್ಲರೂ ಕೂಡಿ ಇದನ್ನು ಉಳಿಸಿ, ಬೆಳಸಬೇಕಿದೆ. ನಾನು ಕೆಎಂಎಫ್‌ ಅಧ್ಯಕ್ಷರಾಗಿದ್ದ ವೇಳೆ ಶೇ. 60 ರಷ್ಟು ರೈತರು, ಹಾಲು ಉತ್ಪನ್ನಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಇನ್ನು ಶೇ. 40 ರಷ್ಟು ರೈತರ ಸಮಸ್ಯೆಗಳನ್ನು ತಿಳಿದುಕೊಳ್ಳಬೇಕಿದೆ. ನೂರರಷ್ಟು ತಿಳಿದುಕೊಂಡ ಬಳಿಕ ಅಧಿಕಾರಿಗಳನ್ನು ಆಟ ಆಡಿಸುತ್ತೇನೆ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದ ಒಕ್ಕೂಟಗಳನ್ನು ನೋಡಿ ಬೆಂಗಳೂರಿನಲ್ಲಿ ನಗುತ್ತಿದ್ದರು. ನಿತ್ಯ 2 ಲಕ್ಷ ಹಾಲು ಬರುತ್ತಿದ್ದರೂ ಸುಧಾರಿಸುತ್ತಿಲ್ಲ ಎನ್ನುತ್ತಿದ್ದರು. ನಮ್ಮ ಡೇರಿಯನ್ನು ಸುಧಾರಣೆ ಮಾಡಬೇಕಿದೆ ಎಂದು ಹೇಳಿದರು.
ಹಾಲು ಪೂರೈಕೆದಾರರಿಗೆ 10 ದಿನದಲ್ಲಿ ಬಿಲ್‌ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು. ಬೆಮೂಲ ತನ್ನ ಹಾಲು ಉತ್ಪಾದಕ ಸದಸ್ಯರ ಹೈನುಗಾರಿಕೆಯನ್ನು ಅಭಿವೃದ್ಧಿಗೊಳಿಸಿ, ಉತ್ಪಾದಿತ ಗುಣಮಟ್ಟದ ಹಾಲಿಗೆ ನಿರಂತರ ಮಾರುಕಟ್ಟೆ ದೊರಕಿಸುವ ಮೂಲಕ ಪರಮಾವಧಿ ಪ್ರತಿಫಲ ನೀಡುವದಲ್ಲದೇ, ಒಕ್ಕೂಟದ ಆರ್ಥಿಕ ಸಧೃಡತೆ ಹಾಗೂ ಸ್ವಾವಲಂಬನೆಯನ್ನು ಸಾಧಿಸಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು, ಹಾಲಿನ ಉತ್ಪನ್ನಗಳನ್ನು ಪೂರೈಸಿ ಕರ್ನಾಟಕ ರಾಜ್ಯದಲ್ಲೇ ಅತ್ಯಂತ ಶ್ರೇಷ್ಠ ಮಾದರಿಯ ಒಕ್ಕೂಟವಾಗಲು ಶ್ರದ್ಧೆಯಿಂದ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 8 ರಿಂದ 9 ಲಕ್ಷ ಲೀಟರ್ ಹಾಲು ಸಂಗ್ರಹಣೆ ಆಗುತ್ತಿದ್ದು, ಅದರಲ್ಲಿಯೂ ರಾಜ್ಯದಲ್ಲಿಯೇ ಅತೀ ಹೆಚ್ಚಿನ ಎಮ್ಮೆ ಹಾಲು ಉತ್ಪಾದಿಸುವ ಜಿಲ್ಲೆಯಾಗಿರುವುದು ಹೆಮ್ಮೆಯ ವಿಷಯ. ಆದ್ದರಿಂದ ಎಲ್ಲ ಸಂಘ, ಬಿ.ಎಂ.ಸಿ ಕೇಂದ್ರಗಳು ಉತ್ತಮ ಗುಣಮಟ್ಟದ ಹಾಲನ್ನು ಮಾತ್ರ ಸ್ವೀಕರಿಸಿ, ಒಕ್ಕೂಟಕ್ಕೆ
ಪೂರೈಸುವುದರಿಂದ ಹೆಚ್ಚಿನ ಮಟ್ಟದಲ್ಲಿ ಎಮ್ಮೆ ಹಾಲು ಮಾರಾಟಮಾಡಿ ಸ್ಪರ್ಧಾತ್ಮಕ ದರವನ್ನೂ ಉತ್ಪಾದಕರಿಗೆ ನೀಡಬಹುದಾಗಿದೆ
ಒಕ್ಕೂಟವು 2023-24ನೇ ಸಾಲಿನಲ್ಲಿ 648 ಸಂಘಗಳ ಮೂಲಕ ನಿತ್ಯ ಸರಾಸರಿ 1.72 ಲಕ್ಷ ಕೆ.ಜಿ ಹಾಲನ್ನು ಸಂಗ್ರಹಿಸಲಾಗಿದೆ. ಮುಂದಿನ ದಿನಗಳಲ್ಲಿ ಹೊಸಾದಗಿ 400 ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ಸ್ಥಾಪಿಸಲು ಉದ್ಧೇಶಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯು ಮಹಾರಾಷ್ಟ್ರದ ಗಡಿಭಾಗದಲ್ಲಿರುವುದರಿಂದ ಹೆಚ್ಚಿನ ಪ್ರಮಾಣದ ಹಾಲು ನೆರೆರಾಜ್ಯ ಹಾಗೂ ಖಾಸಗಿಯವರ ಪಾಲಾಗುತ್ತಿದೆ. ಎಲ್ಲಾ ಹಾಲು ಉತ್ಪಾದಕರ ಖಾಸಗಿಯವರ ಅಮೀಷಗಳಿಗೆ ಒಳಗಾಗದೇ ಪೂರ್ಣ ಪ್ರಮಾಣದಲ್ಲಿ ಒಕ್ಕೂಟಕ್ಕೆ ಹಾಲನ್ನು ಪೂರೈಸಿ ಕರ್ನಾಟಕ ಸರ್ಕಾರದ ಕ್ಷೀರಸಿರಿ ಯೋಜನೆಯಡಿ ಪ್ರೋತ್ಸಾಹಧನ ಮತ್ತು ಇತರೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರರಿಂದ ಹಾಲು ಸಂಗ್ರಹಿಸಿ, ಸಂಸ್ಕರಿಸಿ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಸಿ, ಯೋಗ್ಯ ದರದಲ್ಲಿ ಸಕಾಲದಲ್ಲಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಹಾಲು ಉತ್ಪಾದಕರಿಗೆ ಸ್ಪರ್ಧಾತ್ಮಕ ದರ ನೀಡಿ, ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಒಕ್ಕೂಟದ ಮುಖ್ಯ ಧೈಯವಾಗಿರುತ್ತದೆ. ಒಕ್ಕೂಟವು ತಮ್ಮೆಲ್ಲರ ಸಲಹೆ ಮತ್ತು ಸಹಕಾರದಿಂದ ಕಳೆದ 4 ದಶಕಗಳಿಂದ ಅಭಿವೃದ್ಧಿ ಪಥದಲ್ಲಿ ಸಾಗುತ್ತಲಿದೆ ಎಂದು ಹೇಳಿದರು.

 


ಪ್ರಸಕ್ತ ಸಾಲಿನಲ್ಲಿ ಹಾಲು ಶೇಖರಣೆ ಹೆಚ್ಚಳ ಕಂಡು ಬಂದಿದ್ದು, ಈ ಹೆಚ್ಚುವರಿ ಹಾಲನ್ನು ಕೆನೆರಹಿತ ಹಾಲಿನ ಪುಡಿಯನ್ನಾಗಿ ಪರಿವರ್ತಿಸಿದ್ದು, ಈ ಹಾಲಿನ ಪುಡಿ ಸ್ಪರ್ಧಾತ್ಮಕ ದರ ಸಿಗದಿದ್ದ ಸಮಯದಲ್ಲಿ ಪುಡಿಯನ್ನು ದಾಸ್ತಾನು ಮಾಡಿಕೊಂಡು, ಸಂಕಷ್ಟ ಪರಿಸ್ಥಿತಿಯಲ್ಲಿಯು ಸಹ ಉತ್ಪಾದಕರ ಹಾಲನ್ನು ತಿರಸ್ಕರಿಸದೆ
ಉತ್ಪಾದಿಸಿದ ಉತ್ತಮ ಗುಣಮಟ್ಟದ ಹಾಲನ್ನು ನಿರಂತರವಾಗಿ ಸ್ವೀಕರಿಸಲಾಗಿತ್ತದೆ. ಒಕ್ಕೂಟದ ಮಾರುಕಟ್ಟೆ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆ ಮತ್ತು ನೆರೆರಾಜ್ಯಗಳಾದ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

 

ಈಗಾಗಲೇ ಹೊಸದಾಗಿ ಮಾರುಕಟ್ಟೆಗೆ ಪ್ರೀಮಿಯಂ ಎಫ್.ಸಿ.ಎಂ ಹಾಲು ಮತ್ತು ಬಕೇಟ್ ಮೊಸರನ್ನು ಬಿಡುಗಡೆಗೊಳಿಸಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಅವರು ಹೇಳಿದರು
ಒಕ್ಕೂಟದ ಆವರಣದಲ್ಲಿ ಕಹಾಮ ಮತ್ತು ಒಕ್ಕೂಟದ ಸಹಯೋಗದಲ್ಲಿ ಹಾಲು ಉತ್ಪಾದಕರ ಉನ್ನತ ಶಿಕ್ಷಣ(ಮೆಟ್ರಿಕ್ ನಂತರ) ಪಡೆಯುವ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಹಾಸ್ಟೆಲ್ ನ್ನು ನಿರ್ಮಿಸಿದ್ದು, ಈಗಾಗಲೇ ಹಾಸ್ಟೆಲ್ ಪ್ರವೇಶಾತಿ ಕೋರಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಇದರ
ಸದುಪಯೋಗವನ್ನು ಹಾಲು ಉತ್ಪಾದಕರು ಪಡೆಯಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಕೋರಿದರು.
ಬೆಮೂಲ ನಿರ್ದೇಶಕರಾದ ವಿವೇಕರಾವ್‌ ಪಾಟೀಲ, ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಬಾಬುರಾವ ವಾಘಮೊಡೆ, ವಿರುಪಾಕ್ಷ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಬೋಜಿ, ಮಹಾದೇವ ಬಿಳಿಕುರಿ, ಸವಿತಾ ಖಾನಪ್ಪಗೋಳ, ಶಂಕರ ಇಟ್ನಾಳ,ಸದೆಪ್ಪ ವಾರಿ, ರಮೇಶ ಅಣ್ಣಿಗೇರಿ, ಸಂಜಯ ಶಿಂತ್ರೆ, ವ್ಯವಸ್ಥಾಪಕನ ನಿರ್ದೇಶಕ ಕೃಷ್ಣಪ್ಪ ಎಂ. ಮತ್ತಿತರರು ಉಪಸ್ಥಿತರಿದ್ದರು.

ಅಭಿವೃದ್ಧಿಗೆ ಕ್ರಮ :

ಜಿಲ್ಲಾ ಹಾಲು ಒಕ್ಕೂಟದ ಅಭಿವೃದ್ಧಿಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಾಜಕೀಯ ಲಾಭಕ್ಕಾಗಿ ಒಕ್ಕೂಟವನ್ನು ಬಳಕೆ ಮಾಡುತ್ತಿಲ್ಲ. ಯಾವ ಸ್ವ- ಹಿತಾಸಕ್ತಿಯೂ ನನಗಿಲ್ಲ. ನಮಗೆ ಬೇಕಿರೋದು ಹೈನುಗಾರಿಕೆಯನ್ನು ಬಲವರ್ಧನೆಗೊಳಿಸುವುದು. ದಕ್ಷಿಣ ಕರ್ನಾಟಕದ ರೈತರಿಗೆ ನಮ್ಮ ಉತ್ತರ ಕರ್ನಾಟಕ ರೈತರು ಪೈಪೋಟಿ ನೀಡುವ ಹಾಗೇ ಈ ಒಕ್ಕೂಟವನ್ನು ಬೆಳೆಸುವ ಇಚ್ಛೆ ನಮ್ಮದಾಗಿದೆ. ಹೈನುಗಾರ ರೈತರು ತಮ್ಮ ದೂರುಗಳನ್ನು ದಾಖಲಿಸಲು ಇಷ್ಟರಲ್ಲೇ ಕಂಪ್ಲೆಂಟ್ ಬಾಕ್ಸ್ ತೆರೆಯಲಾಗುವುದು. ಈ ಮೂಲಕ ದೂರುದಾರರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುವ ಕೆಲಸ ಮಾಡಲಾಗುವುದು. ಯಾವುದೇ ಕಾರಣಕ್ಕೆ ರೈತರಿಗೆ ಅನ್ಯಾಯವಾಗಲು ಬಿಡಲ್ಲ.

– ಬಾಲಚಂದ್ರ ಜಾರಕಿಹೊಳಿ. ಬೆಮ್ಯುಲ್ ಅಧ್ಯಕ್ಷರು