ನವದೆಹಲಿ: 2024-25ನೇ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತ ಸಂಚಾರ ನಿಗಮ ನಿಯಮಿತವು (ಬಿಎಸ್‌ಎನ್‌ಎಲ್) ₹262 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಶುಕ್ರವಾರ ತಿಳಿಸಿದ್ದಾರೆ.

ನಷ್ಟದ ಹಾದಿಯಲ್ಲಿದ್ದ ಸಂಸ್ಥೆಯು 17 ವರ್ಷಗಳ ಬಳಿಕ ಲಾಭದ ಹಳಿಗೆ ಮರಳಿದೆ. ಇದರಿಂದ ತನ್ನ ಸೇವೆಯ ವಿಸ್ತರಣೆ ಮತ್ತು ಚಂದಾದಾರರ ಸಂಖ್ಯೆ ಹೆಚ್ಚಳಕ್ಕೆ ನೆರವಾಗಲಿವೆ. ಸರ್ಕಾರ ಕೈಗೊಂಡಿರುವ ಕ್ರಮಗಳು ಫಲ ನೀಡಿವೆ ಎಂದು ಹೇಳಿದ್ದಾರೆ.

ಜೂನ್ ತ್ರೈಮಾಸಿಕದಲ್ಲಿ ಬಿಎಸ್‌ಎನ್‌ಎಲ್ ಬಳಕೆದಾರರ ಸಂಖ್ಯೆ 8.4 ಕೋಟಿ ಇತ್ತು. ಡಿಸೆಂಬರ್ ತ್ರೈಮಾಸಿಕದಲ್ಲಿ 9 ಕೋಟಿಗೆ ಮುಟ್ಟಿದೆ. ಮೊಬಿಲಿಟಿ ಸೇವೆ, ಎಫ್‌ಟಿಟಿಎಚ್‌ (ಫೈಬರ್ ಟು ದಿ ಹೋಮ್) ಮತ್ತು ಲೀಸ್ಟ್ ಲೈನ್ ಸರ್ವಿಸ್ ವಿಭಾಗದಲ್ಲಿ ಶೇ 14ರಿಂದ ಶೇ 18ರಷ್ಟು ಬೆಳವಣಿಗೆಯಾಗಿದೆ ಎಂದು ವಿವರಿಸಿದ್ದಾರೆ.

‘2007ರಲ್ಲಿ ಲಾಭ ಗಳಿಸಿತ್ತು. ಆ ನಂತರ ವರ್ಷಗಳಲ್ಲಿ ನಷ್ಟದಲ್ಲಿಯೇ ಮುಳುಗಿತ್ತು’ ಎಂದು ಹೇಳಿದ್ದಾರೆ.

ಮೊಬಿಲಿಟಿ ಸೇವೆ ಶೇ 15, ಎಫ್‌ಟಿಟಿಎಫ್ ಶೇ 18 ಹಾಗೂ ಲೀಸ್ಟ್ ಲೈನ್ ಸರ್ವಿಸ್ ವಿಭಾಗದಲ್ಲಿ ಶೇ 14ರಷ್ಟು ಲಾಭಗಳಿಸಿದೆ ಎಂದು ತಿಳಿಸಿದ್ದಾರೆ.

ಹೊಸ ಅನ್ವೇಷಣೆಗೆ ಒತ್ತು ನೀಡಲಿದೆ. ನೆಟ್‌ವರ್ಕ್ ವಿಸ್ತರಣೆಗೆ ಮುಂದಾಗಿದೆ. ವೆಚ್ಚದ ಪ್ರಮಾಣ ತಗ್ಗಿಸಲು ಕ್ರಮವಹಿಸಲಾಗಿದೆ. ಗ್ರಾಹಕ ಕೇಂದ್ರಿತ ಸೇವೆಯ ಸುಧಾರಣೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ₹1,800 ಕೋಟಿ ನಷ್ಟ ಅನುಭವಿಸಿತ್ತು. ಹಣಕಾಸು ವೆಚ್ಚ ಸೇರಿ ಇತರೆ ವೆಚ್ಚಗಳನ್ನು ಕಡಿಮೆ ಮಾಡಲಾಗಿದೆ. ಇದು ಲಾಭ ಹೆಚ್ಚಳಕ್ಕೆ ನೆರವಾಗಿದೆ ಎಂದು ಹೇಳಿದ್ದಾರೆ.