ಧರ್ಮಸ್ಥಳ : ಮಹಾ ಶಿವರಾತ್ರಿ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ತಂಡಗಳಲ್ಲಿ ಸಹಸ್ರಾರು ಪಾದಯಾತ್ರಿಗಳು ಚಾರ್ಮಾಡಿ ಘಾಟಿ ಮೂಲಕ ಆಗಮಿಸಿ ಧರ್ಮಸ್ಥಳದತ್ತ ಸಾಗಿದ್ದಾರೆ.

ಬೆಂಗಳೂರು, ತುಮಕೂರು, ಹಾಸನ, ರಾಮನಗರ, ಮಂಡ್ಯ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವೆಡೆಗಳಿಂದ ಪಾದಯಾತ್ರಿಗಳ ದಂಡು ಬಂದಿದೆ. ಶಿರಾಡಿ ಘಾಟಿ ಮೂಲಕ ಆಗಮಿಸುತ್ತಿರುವ ತಂಡಗಳು ಕೊಕ್ಕಡದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿವೆ.

ಚಾರ್ಮಾಡಿ ಮೂಲಕ ಆಗಮಿಸುತ್ತಿರುವ ಪಾದಯಾತ್ರಿಗಳು ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನ ಹಾಗೂ ರಸ್ತೆ ಬದಿ ಅಲ್ಲಲ್ಲಿ ಟೆಂಟ್ ನಿರ್ಮಿಸಿ ಆಹಾರ ತಯಾರಿ ನಡೆಸಿ, ವಿಶ್ರಾಂತಿ ಪಡೆದು ಮೃತ್ಯುಂಜಯ ನದಿಯಲ್ಲಿ ಸ್ನಾನ ಮಾಡಿ ಧರ್ಮಸ್ಥಳಕ್ಕೆ ಕಲ್ಮಂಜ ಹಾಗೂ ಉಜಿರೆ ಮೂಲಕ ಹೆಜ್ಜೆ ಹಾಕಿದ್ದಾರೆ.

ಶುಭ ನುಡಿ : ಶಿವರಾತ್ರಿಯು ಸಂಯಮ, ಜಾಗರಣೆ, ಉಪವಾಸ, ವ್ರತ – ನಿಯಮಗಳ ಪಾಲನೆಯೊಂದಿಗೆ ಪಂಚೇಂದ್ರಿಯಗಳ ನಿಯಂತ್ರಣದ ಮೂಲಕ ಎಲ್ಲರಿಗೂ ಮಾನಸಿಕ ಪರಿವರ್ತನೆಯ ಶುಭರಾತ್ರಿಯಾಗಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹಾರೈಸಿದರು.

ಶಿವರಾತ್ರಿ ಪ್ರಯುಕ್ತ 45 ವರ್ಷಗಳಿಂದ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪ್ರತಿವರ್ಷ ಪಾದಯಾತ್ರೆ ಆಯೋಜಿಸುತ್ತಿರುವ ಹನುಮಂತಪ್ಪ ಸ್ವಾಮೀಜಿ ಮತ್ತು ಅವರ ಶಿಷ್ಯರನ್ನು ಗುರುವಾರ ಧರ್ಮಸ್ಥಳದಲ್ಲಿ ಗೌರವಿಸಿ ಪಾದಯಾತ್ರಿಗಳನ್ನುದ್ದೇಶಿಸಿ ಮಾತನಾಡಿದರು.
ಮುಂದೆ ನಿರ್ದಿಷ್ಟ ಗುರಿ ಮತ್ತು ಹಿಂದೆ ಆದರ್ಶ ಗುರು ಇದ್ದಾಗ ಯಾವುದೇ ಕಾರ್ಯ ಯಶಸ್ವಿಯಾಗುತ್ತದೆ. ಪಾದಯಾತ್ರೆಯಲ್ಲಿ ಶ್ರದ್ಧಾ – ಭಕ್ತಿಯಿಂದ ಭಗವಂತನ ನಾಮ ಸ್ಮರಣೆಯೊಂದಿಗೆ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ತ್ಯಾಗ ಮನೋಭಾವ ಮತ್ತು ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು, ಯುವಜನರು ಹೆಚ್ಚಾಗಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಚಲನಚಿತ್ರ ನಿರ್ದೇಶಕ ಶಶಿಕುಮಾರ್‌, ನಾಗರಾಜ ರೆಡ್ಡಿ, ಕಮಲಾ ಮೋಹನ ಗೌಡ, ಚಂದ್ರಪ್ಪ, ಹನುಂತರಾಯಪ್ಪ, ನರಸಿಂಹಪ್ಪ ಮತ್ತು ಮರಿಯಪ್ಪ ಅವರನ್ನು ಸಮ್ಮಾನಿಸಲಾಯಿತು. ಪಾದಯಾತ್ರಿಗಳ ಕ್ಷೇತ್ರದರ್ಶನ ಸುಗಮವಾಗಲು ಸಹಕರಿಸಿದ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಅವರನ್ನು ಪಾದಯಾತ್ರಿಗಳ ಪರವಾಗಿ ಗೌರವಿಸಲಾಯಿತು.

ಕ್ಷೇತ್ರವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿದ್ದು, ಗುರುವಾರವೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. 3 ದಿನ ಸರಕಾರಿ ರಜೆಯಾದ್ದರಿಂದ ನಿರೀಕ್ಷೆಗೂ ಮೀರಿ ಭಕ್ತರು ಸೇರಿದ್ದಾರೆ.

ಗುರುವಾರವೇ ನಾಡಿನೆಲ್ಲಡೆಯಿಂದ ಬಂದ 15 ಸಾವಿರಕ್ಕೂ ಮಿಕ್ಕಿ ಪಾದಯಾತ್ರಿಗಳು ಕ್ಷೇತ್ರದಲ್ಲಿ ಸೇರಿದ್ದಾರೆ. 40 ಸಾವಿರಕ್ಕೂ ಅಧಿಕ ಮಂದಿ ಪಾದಯಾತ್ರಿಗಳು ಹಾಗೂ 2 ಲಕ್ಷಕ್ಕೂ ಮಿಕ್ಕಿ ಆಗಮಿಸಿದ್ದರು. ಉಪವಾಸ ಮತ್ತು ವ್ರತ, ನಿಯಮಗಳೊಂದಿಗೆ ಇಡೀ ರಾತ್ರಿ ಶಿವಪಂಚಾಕ್ಷರಿ ಪಠಣ, ಭಜನೆ, ದೇವರ ನಾಮಸ್ಮರಣೆ ನಡೆಯುತ್ತದೆ. ಶನಿವಾರ ಮುಂಜಾನೆ ರಥೋತ್ಸವ ನಡೆಯಲಿದೆ.