ಬೆಳಗಾವಿ
ಸನಾತನ ಧರ್ಮವನ್ನು ಡೆಂಗ್ಯು ಮಲೇರಿಯಾಕ್ಕೆ ಹೋಲಿಸಿದ್ದಲ್ಲದೇ ಬೇರು ಸಮೇತ ಕಿತ್ತುಹಾಕುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ಸನಾತನ ಧರ್ಮವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಗವದ್ಗೀತೆ ಅಭಿಯಾನ ಇಂದು ಅತ್ಯಂತ ಮಹತ್ವ ಪಡೆದಿದೆ ಎಂದು ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದ ಲಿಂಗರಾಜ ಕಾಲೇಜು ಮೈದಾನಲ್ಲಿ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಭಗವದ್ಗೀತಾ ಅಭಿಯಾನ ಹಾಗೂ ಜನಕಲ್ಯಾಣ ಟ್ರಸ್ಟ್ ಬೆಳಗಾವಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 2008-2014ರವರೆಗೆ ಜಗತ್ತಿನ 5 ದುರ್ಬಲ ಆರ್ಥಿಕತೆಯಲ್ಲಿ ಭಾರತವೂ ಒಂದಾಗಿತ್ತು. ಆದರೆ ಇಂದು ವಿಶ್ವದ 5 ದೊಡ್ಡ ಆರ್ಥಿಕತೆಯಲ್ಲಿ ಭಾರತ ಸ್ಥಾನ ಪಡೆದಿದೆ. ತಂತ್ರಜ್ಞಾನ, ಸೇವಾ ವಲಯ ಸೇರಿದಂತೆ ಜಗತ್ತಿನ ಅತ್ಯಂತ ಒಳ್ಳೆಯ ಹೂಡಿಕೆಯ ಸ್ಥಾನ ಭಾರತವಾಗಿದೆ. ಆದರೆ ಇನ್ನೊಂದೆಡೆ ಸಂಸ್ಕಾರದ ಕೊರತೆಯಿಂದ ಕ್ಷೋಭೆ ಜಾಸ್ತಿಯಾಗುತ್ತಿದೆ. ಜಗತ್ತಿನಲ್ಲಿ ಏಕಾಂಗಿತನ ಅತ್ಯಂತ ದೊಡ್ಡ ಸಮಸ್ಯೆಯಾಗುತ್ತಿದೆ. ಅದು ಭಾರತದಲ್ಲಿ ಬರವುದು ಬೇಡ. ಸಂಸ್ಕಾರವನ್ನು ಕಲಿಸಲು ಇಂಥ ಕಾರ್ಯಕ್ರಮದ ಅಗತ್ಯವಿದೆ ಎಂದರು.
ದೇಶದ ಸಂಸ್ಕøತಿಯ ಪರಿಣಾಮವಾಗಿ ಜನರಲ್ಲಿ ಇಂದಿಗೂ ಪಾಪ ಪ್ರಜ್ಞೆ ಇದೆ. ಜಗತ್ತನ್ನು ಸುಖವಾಗಿ ಇಡಬೇಕು ಎಂಬುದು ಸನಾತನ ಧರ್ಮದ ಕಲ್ಪನೆ. ಯಾರೊಬ್ಬರಿಗೂ ಭಗವದ್ಗೀತೆಯಲ್ಲಿ ಹೇಳಿದಂತೆ ಮಾಡಿ ಎಂದು ಶ್ರೀಕೃಷ್ಣ ಹೇಳಿಲ್ಲ. ನಿಮ್ಮ ಇಚ್ಛೆಯಂತೆ ಮಾಡಿ ಎಂದು ಹೇಳಿದ್ದಾನೆ. ಹಾಗಾಗಿ ಭಗವದ್ಗೀತೆ ಎಂದಿಗೂ ಪ್ರಸ್ತುತ ಎಂದರು.
ಎಲ್ಲ ಮಠಗಳು ಒಂದಾಗುವ ಅಗತ್ಯವಿದೆ:
ಆಶೀರ್ವಚನ ನೀಡಿದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ವ್ಯಕ್ತಿತ್ವ ವಿಕಸನ ನೈತಿಕತೆ ಪುನರುತ್ಥಾನ, ರಾಷ್ಟ್ರೀಯ ಭಾವೈಕ್ಯ, ಸಾನಾಜಿಕ ಸಾಮರಸ್ಯ ಈ 4 ಉದ್ದೇಶಗಳೊಂದಿಗೆ 2007ರಲ್ಲಿ ಅಭಿಯಾನ ಪ್ರಾರಂಭಗೊಂಡಿತು. ಭಾರತ ಜಗದ್ಗುರು ಆಗಬೇಕು ಎಂದು ನಾವೆಲ್ಲ ಬಯಸುತ್ತೇವೆ. ಇದಕ್ಕೆ ಭಗವದ್ಗೀತೆಯ ತತ್ವಗಳನ್ನು ನಮ್ಮೊಳಗೆ ಅಳವಡಿಸಿಕೊಳಬೇಕಾಗಿದೆ. ಈ ಬಾರಿ 10ನೇ ಅಧ್ಯಾಯವನ್ನು ಕಲಿಸಲಾಗಿದೆ. ದೇವರು ಎಲ್ಲ ಕಡೆ ಇರುವುದು ನಿಜ. ಆದರೆ ಎಲ್ಲ ಕಡೆಯೂ ನೋಡುವುದು ಹೇಗೆ ಎಂಬುದನ್ನು ತಿಳಿಸಿಕೊಡುವುದೇ 10ನೇ ಅಧ್ಯಾಯ ಎಂದರು.
ಬೆಳಗಾವಿ ಜಿಲ್ಲೆಯ ಕಿತ್ತೂರು ಎಂಬ ಹೆಸರಿನಲ್ಲಿ ಭಗವಂತನ ತತ್ವ ಅಡಗಿದೆ. ದುರ್ಬಾವನೆಗಳನ್ನು ಕಿತ್ತು ಸದ್ಭಾವನೆಗಳನ್ನು ಊರು ಎಂಬ ಅರ್ಥ. ನಕಾರಾತ್ಮಕ ಚಿಂತನೆಗಳನ್ನು ಬಿಡಬೇಕು, ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂಬ ತತ್ವವನ್ನು ಭಗವದ್ಗೀತೆ ಕೊಡುತ್ತದೆ ಎಂದರು. ಕಲಿತ ಭಗವದ್ಗೀತೆಯನ್ನು ಕೃಷ್ಣನಿಗೆ ಅರ್ಪಿಸುವ ಕಾರ್ಯಕ್ರಮವೇ ಮಹಾಸಮರ್ಪಣೆ. ಅರ್ಪಣೆ ಮಾಡುವುದರಿಂದ ಅಹಂಕಾರ ಕಡಿಮೆಯಾಗುತ್ತದೆ ಎಂದರು.
ಭಾರತದ ಅಗತ್ಯತೆಯಲ್ಲಿ ಎಲ್ಲ ಮಠಗಳು ಒಂದಾಗುವುದು ಅತ್ಯಂತ ಮಹತ್ವದ್ದು, ಧರ್ಮದ ಉಳಿವಿಗೆ, ರಾಷ್ಟ್ರದ ಹಿತಕ್ಕೆ ಈ ನಡೆ ಮಹತ್ವದ್ದು ಎಂದು ಹೇಳಿದರು.
ಕರ್ತವ್ಯ ಪ್ರಜ್ಞೆಯೇ ಆರಾಧನೆ;
ಆಶೀರ್ವಚನ ನೀಡಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಂದೇಶ ಭಗವದ್ಗೀತೆ. ಮಾನವ ಸಂಘಜೀವಿ, ಸಮಾಜದಿಂದ ಎಲ್ಲವನ್ನೂ ಪಡೆದುಕೊಂಡಿದ್ದನೆ, ಎಲ್ಲರೂ ಪಡೆದುಕೊಳ್ಳುವವರೇ ವಿನಹ ಮರಳಿ ಕೊಡುವವರು ಯಾರೂ ಇಲ್ಲದಿದ್ದರೆ ಅಂಥ ಸಮಾಜ ಬಹಳ ಬೇಗ ಹಾಳಾಗುತ್ತದೆ.
ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭಗವಂತನ ಆರಾಧನೆ ಮಾಡುತ್ತೇವೆ. ಆದರೆ ಗುಡಿ ಗೋಪುರಗಳಿಗೆ ಹೋಗಿ ಆರಾಧನೆ ಮಾಡಿದರೆ ಮಾತ್ರ ಸಾಲದು. ಸಮಾಜದ ಎಲ್ಲರ ಹೃದಯದೊಳಗೆ ಭಗವಂತ ನೆಲೆಸಿದ್ದಾನೆ. ಹಾಗಾಗಿ ಎಲ್ಲ ಕಡೆಯೂ ಭಗವಂತನ ಆರಾಧನೆ ಮಾಡಬೇಕು. ಬದುಕಿಗೋಸ್ಕರ ಆಯ್ದುಕೊಂಡ ವೃತ್ತಿಯನ್ನಾದರೂ ದೇವರ ಪೂಜೆಯಂತೆ ಮಾಡಿದರೆ ಅದೇ ಭಗವಂತನ ಆರಾಧನೆ. ಈ ಎಚ್ಚರವಿದ್ದಾಗ ಕರ್ತವ್ಯದಲ್ಲಿ ಮೋಸ, ಅವ್ಯವಹಾರಕ್ಕೆ ಆಸ್ಪದವಿರುವುದಿಲ್ಲ. ವೃತ್ತಿ ಜೀವನದ ಸಾಧನೆ, ಆಧ್ಯಾತ್ಮಿಕ ಜೀವನದ ಸಾಧನೆ ಎರಡೂ ಒಂದೆ. ಈ ತತ್ವ ಮಕ್ಕಳಾಗಿದ್ದಾಗಲೇ ಅವರ ಕಿವಿಗೆ ಬಿದ್ದರೆ ಲೋಕ ಉಳಿಯುತ್ತದೆ. ಅಂಥ ಸಾಧನೆಯನ್ನು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾಡಿದ್ದಾರೆ ಎಂದರು.
ಜಗತ್ತಿಗೆ ಪ್ರೇರಣೆ ಭಗವದ್ಗೀತೆ:
ರಾಜ್ಯಸಭಾ ಸದಸ್ಯ, ಚಿಂತಕ ಸುಧಾಂಶು ತ್ರಿವೇದಿ ಮಾತನಾಡಿ, ಮಹಾತ್ಮಾ ಗಾಂಧೀಜಿಯವರು ಜೀವನದಲ್ಲಿ ಯಾವುದಾದರೂ ಗ್ರಂಥದಿಂದ ಪ್ರೇರಣೆ ಪಡೆಯುವುದಾದರೆ ಅದು ಭಗವದ್ಗೀತೆಯಿಂದ ಮಾತ್ರ ಎಂದಿದ್ದರು. ಅಂಥ ಗಾಂಧೀಜಿಯವರು ಏಕೈಕ ಬಾರಿ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಅಧಿವೇಶನ ನಡೆದ ಬೆಳಗಾವಿಯಲ್ಲಿ ಭಗವದ್ಗೀತಾ ಅಭಿಯಾನ ನಡೆಯುತ್ತಿರುವುದು ಸಂಯೋಗ ಎಂದರು.
ಸಂವಿಧಾನದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ನೀಡುತ್ತಿರುವ ಚಿತ್ರ ನೀತಿ ನಿರೂಪಣೆ ಪುಟದಲ್ಲಿ ಪ್ರಕಟಿಸಲಾಗಿದೆ. ಇದು ಕೇವಲ ಸಾಂಕೇತಿಕವಲ್ಲ. ದೇಶದ ನೀತಿ ನಿರೂಪಣಗೆ ಭಗವದ್ಗೀತೆ ಪ್ರೇರಣೆಯಾಗಬೇಕು ಎಂಬ ಉದ್ದೇಶವಿದೆ ಎಂದರು.
ಮೋದಿಜಿ ಪ್ರದಾನಿಯಾಗಿದ್ದು ಕೇವಲ ಸರಕಾರ ಬದಲಾವಣೆಯ ವಿಷಯವಾಗಿರಲಿಲ್ಲ. ವಿಚಾರಗಳ ಬದಲಾವಣೆಯ ವಿಷಯವಾಗಿತ್ತು. ಅಮೇರಿಕದ ರಾಷ್ಟ್ರಪತಿಗಳಿಗೆ ಭಗವದ್ಗೀತೆ ಉಡುಗೊರೆಯಾಗಿ ನೀಡಿದ್ದರು ಎಂದು ಸುಧಾಂಶು ತ್ರಿವೇದಿ ಹೇಳಿದರು.
ಅಣುಬಾಂಬ್ ಅನ್ವೇಷಣೆ ಮಾಡಿದ ವಿಜ್ಞಾನಿ ರಾಬರ್ಟ್ ಹೈಪನ್‍ಬರ್ಗ್, ವಿಜ್ಞಾನಿ ನೀಲ್ಸ್ ಬೋರ್ ಸೇರಿದಂತೆ ಒಂದು ಡಜನ್‍ಗೂ ಹೆಚ್ಚು ವಿಜ್ಞಾನಿಗಳು ಹಿಂದೂ ಧರ್ಮ ಗೃಂಥಗಳಿಂದ ಪ್ರೇರಣೆ ಪಡೆದಿದ್ದಾರೆ. ಇಂಥ ಧರ್ಮ ಬೇರೆ ಇಲ್ಲ. ಹೀಗೆ ಪ್ರೇರಣೆ ಪಡೆದರಿಗೆ ಹಿಂದೂ ಧರ್ಮ ಸೇರುವಂತೆ ಯಾರೂ ಒತ್ತಾಯಿಸಿಲ್ಲ. ಎಲ್ಲರೂ ಅವರವರ ಧರ್ಮ ಪಾಲನೆ ಮಾಡಲಿ ಎಂಬುದೇ ಹಿಂದೂ ಧರ್ಮದ ತತ್ವ ಎಂದರು.
ವೇದಗಳು ಬರವಣಿಗೆಯಲ್ಲಿ ಇರಲಿಲ್ಲ. ಅದು ಬಾಯಿಂದ ಬಾಯಿಗೆ ಹೇಳುತ್ತ ಬಂದ ಗೃಂಥ ಎಂದು ಕೆಲವರು ಹೇಳುತ್ತಾರೆ. ಬ್ರಹ್ಮಾಂಡವನ್ನೇ ಅಳೆದವರು, ಆಯುರ್ವೇದ ವೈದ್ಯ ಪದ್ಧತಿ ಕಂಡುಹಿಡಿದವರಿಗೆ, ಜಗತ್ತಿಗೆ ಜ್ಞಾನ ಹಂಚಿದವರಿಗೆ ಬರವಣಿಗೆ ಬರುವುದಿಲ್ಲ ಎಂದು ಹೇಳುವವರು ಬುದ್ದಿಗೇಡಿಗಳು. ನಮ್ಮ ಎಲ್ಲ ವೇದಗಳನ್ನು ಛಂದಗಳಲ್ಲಿ ಬರೆಯಲಾಗಿದೆ. ಹಾಗಾಗಿ ಅದು ಬಾಯಿಂದ ಹೇಳಿದಾಗಲೇ ಅದರ ಪ್ರಬಾವ ಅರ್ಥವಾಗುತ್ತದೆ ಎಂದರು.
ಮಹಾ ಸಮರ್ಪಣೆ:
ಮಾತೆಯರಿಂದ ಭಗವದ್ಗೀತೆ 10ನೇ ಅಧ್ಯಾಯದ ಮಹಾಸಮರ್ಪಣೆ ನಡೆಯಿತು. ರಾಜ್ಯಮಟ್ಟದ ಭಗವದ್ಗೀತೆ ಕಂಠಪಾಟ, ಭಾಷಣ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಲಾವಿದರಿಂದ ಭರತನಾಟ್ಯ ಪ್ರಸ್ತುತಗೊಂಡಿತು. ಭಗವದ್ಗೀತೆ ಅಭಿಯಾನ ಸಮಿತಿ ಬೆಳಗಾವಿ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ ಅಭಿಯಾನದ ವರದಿ ವಾಚಿಸಿದರು. ಭಗವದ್ಗೀತಾ ಅಭಿಯಾನ ಸಮಿತಿ ಅಧ್ಯಕ್ಷ ಗೋಪಾಲ ಜಿನಗೌಡ ಸ್ವಾಗತಿಸಿದರು. ರಾಧಾ ದೇಸಾಯಿ ಧಾರವಾಡ ಪ್ರಾರ್ಥಿಸಿದರು, ಮಾಹೆಶ್ವರಿ ಅಂಧ ಮಕ್ಕಳ ಶಾಲೆಯ ಮಕ್ಕಳು ಆರತಿ ಹಾಡು ಹಾಡಿದರು.
ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಮಂಗಲಾ ಅಂಗಡಿ, ಈರಣ್ಣ ಕಡಾಡಿ, ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ವಿಠ್ಠಲ ಹಲಗೇಕರ್, ಅಭಯ ಪಾಟೀಲ್, ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಮೇಯರ್ ಶೋಭಾ ಸೋಮನ್ನಾಚೆ, ರೇಷ್ಮಾ ಪಾಟೀಲ್, ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಅರವಿಂದ ದೇಶಪಾಂಡೆ, ಸೋಂದಾ ಸ್ವರ್ಣವಲ್ಲಿ ಮಠದ ಅಧ್ಯಕ್ಷ ವಿ.ಎನ್. ಹೆಗಡೆ, ಸಂಜಯ ಪಾಟೀಲ್, ಅನಿಲ ಬೆನಕೆ ಮೊದಲಾದವರು ಉಪಸ್ಥಿತರಿದ್ದರು. ಎಂ.ಕೆ. ಹೆಗಡೆ ವಂದಿಸಿದರು. ಸುಬ್ರಹ್ಮಣ್ಯ ಭಟ್, ಪೂರ್ಣಿಮಾ ಹೆಗಡೆ ನಿರೂಪಿಸಿದರು.