ಬೆಳಗಾವಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ವತಿಯಿಂದ ಬೆಳಗಾವಿ ಕೇಂದ್ರಿತವಾಗಿ ರಾಜ್ಯಾದ್ಯಂತ 17ನೇ ವರ್ಷದ ಭಗವದ್ಗೀತೆ ಅಭಿಯಾನ ನಡೆಯುತ್ತಿದ್ದು, ತಿಂಗಳಿಡೀ ವಿವಿಧ ಕಾರ್ಯಕ್ರಮಗಳು ಆಯೋಜನೆಯಾಗಿವೆ.
ಶ್ಲೋಕ ಪಠಣ, ವಿಚಾರಸಂಕಿರಣ, ಪ್ರವಚನ, ವಿವಿಧ ಸ್ಪರ್ಧೆಗಳು ಆರಂಭವಾಗಿದ್ದು, ಎಲ್ಲೆಡೆ ಭಗವದ್ಗೀತೆ ಮೊಳಗುತ್ತಿದೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒತ್ತಡವನ್ನು ನಿಭಾಯಿಸಲಾರದೆ ಮನುಷ್ಯ ಬಲಿಯಾಗುತ್ತಿದ್ದಾನೆ. ವಿದ್ಯೆ ಕಲಿತ ಯುವಜನತೆಯು ವಿಕೃತವಾದ ಮನಸ್ಥಿತಿಯೊಂದಿಗೆ ಭಯೋತ್ಪಾದನೆ, ಮಾದಕ ದ್ರವ್ಯ ಸೇವನೆ, ಕೊಲೆ, ಅತ್ಯಾಚಾರ ಇತ್ಯಾದಿ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ. ಸದೃಢ ಸಮಾಜದ ನಿರ್ಮಾಣಕ್ಕೆ ಆಧ್ಯಾತ್ಮ ವಿದ್ಯೆಯ ಆಕರವಾದ ಭಗವದ್ಗೀತೆಯ ಮೂಲಕ ಸಂಸ್ಕಾರ ನೀಡಿ ಸುಸಂಸ್ಕೃತ ಸಮಾಜದ ನಿರ್ಮಾಣದ ಆಶಯದೊಂದಿಗೆ ಶ್ರೀ ಸೊಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು 2007ರ ಅಕ್ಟೋಬರ್ ನಿಂದ ರಾಜ್ಯಾದ್ಯಂತ ಭಗವದ್ಗೀತಾ ಅಭಿಯಾನವನ್ನು ಪ್ರಾರಂಭಿಸಿದರು.

ಸಮಾಜದಲ್ಲಿ ರಾಷ್ಟ್ರೀಯ ಭಾವೈಕ್ಯತೆ, ಸಾಮಾಜಿಕ ಸಾಮರಸ್ಯ, ನೈತಿಕ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನವನ್ನು ಬೆಳೆಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಈ ವರ್ಷ ಬೆಳಗಾವಿ ಜಿಲ್ಲೆಯನ್ನು ಪ್ರಧಾನವಾಗಿಟ್ಟುಕೊಂಡು ಭಗವದ್ಗೀತಾ ಅಭಿಯಾನವು ನಡೆಯುತ್ತಿದೆ. ಅನೇಕ ಸಮಿತಿಗಳನ್ನು ರಚಿಸಿ, ಎಲ್ಲರ ಸಹಕಾರದೊಂದಿಗೆ ಶಾಲೆಗಳು, ದೇವಸ್ಥಾನಗಳು, ಸಾರ್ವಜನಿಕ ಸ್ಥಳಗಳು ಹಾಗೂ ಮನೆಮನೆಗೂ ಭಗವದ್ಗೀತೆಯನ್ನು ತಲುಪಿಸುವ ಕಾರ್ಯ ಭರದಿಂದ ಸಾಗಿದೆ. ಈ ವರ್ಷ ಭಗವದ್ಗೀತೆಯ 10ನೇ ಅಧ್ಯಾಯವನ್ನು ಮುಖ್ಯವಾಗಿ ಪಠಣಕ್ಕೆ ನಿಗದಿಪಡಿಸಿದ್ದು, ಶಾಲಾಶಿಕ್ಷಕರಿಗೆ, ಭಜನಾ ಮಂಡಳಿಯವರಿಗೆ ಪ್ರಶಿಕ್ಷಣ ವರ್ಗವನ್ನು ಬೆಳಗಾವಿ ನಗರದಲ್ಲಿ ಹಾಗೂ ಜಿಲ್ಲೆಯ ಅನೇಕ ಕಡೆಗಳಲ್ಲಿ ನಡೆಸಲಾಯಿತು. 42ಕ್ಕೂ ಅಧಿಕ ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದಿದ್ದಾರೆ.

ಈ ಬಾರಿಯ ಭಗವದ್ಗೀತಾ ಅಭಿಯಾನಕ್ಕೆ ಬೆಳಗಾವಿ ಜಿಲ್ಲೆಯ ಸ್ಪಂದನೆ ಉತ್ತಮವಾಗಿದೆ. ನವೆಂಬರ್ 21ರಿಂದ ಡಿ.21ರ ವರೆಗೆ ಒಂದು ತಿಂಗಳ ಅವಧಿಯಲ್ಲಿ ಅಭಿಯಾನ ನಡೆಯುತ್ತಿದ್ದು, ಬೆಳಗಾವಿ ನಗರದಲ್ಲಿ ಈಗಾಗಲೇ 80 ಕೇಂದ್ರಗಳು ನಡೆಯುತ್ತಿವೆ. ಗ್ರಾಮೀಣ ಭಾಗದಲ್ಲಿ 50ಕ್ಕೂ ಹೆಚ್ಚು ಶ್ಲೋಕ ಕೇಂದ್ರಗಳು ನಡೆಯುತ್ತಿದೆ. ಈಗಾಗಲೇ ನಗರದಲ್ಲಿ 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಾಗೂ ತಾಲೂಕುಗಳಲ್ಲಿ 11 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಕಲಿಸಿಕೊಡಲಾಗಿದೆ. ಡಿಸೆಂಬರ್ 21ರ ಹೊತ್ತಿಗೆ ನಗರದಲ್ಲೇ 100 ಕೇಂದ್ರಗಳು ನಡೆಯುವ ನೀರೀಕ್ಷೆ ಇದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಒಟ್ಟು 200ಕ್ಕೂ ಹೆಚ್ಚು ಶ್ಲೋಕ ಕೇಂದ್ರಗಳಾಗಿವೆ. ಅನೇಕ ಕಡೆ ಪ್ರತಿನಿತ್ಯ ಪ್ರವಚನಗಳೂ ನಡೆಯುತ್ತಿವೆ.

ಡಿ.22ರಂದು ಗೀತಾ ಜಯಂತಿ ದಿನ ಸಮಗ್ರ ಗೀತಾಪಠಣ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ನಡೆಯಲಿವೆ. ಬೆಳಗಾವಿ ಜಿಲ್ಲೆ ಹಾಗೂ ಬೆಳಗಾವಿ ನಗರದಲ್ಲಿ ಎರಡೂ ಕಡೆ ಸಮಗ್ರ ಗೀತಾಪಠಣ ನಡೆಯಲಿವೆ. ಉತ್ತರದಲ್ಲಿ ಗೀತ -ಗಂಗಾ ಬಿಲ್ಡಿಂಗ್ (ಕೊಲ್ಹಾಪುರ ಸರ್ಕಲ್ ಹತ್ತಿರ) ಮತ್ತು ದಕ್ಷಿಣದಲ್ಲಿ ಚಿದಂಬರ ನಗರದ ಚಿದಂಬರೇಶ್ವರ ದೇವಸ್ಥಾನದಲ್ಲಿ ಸಮಗ್ರ ಗೀತಾ ಪಠಣದ ವ್ಯವಸ್ಥೆ ಮಾಡಲಾಗಿದೆ. ಗೀತಾ ಪಠಣವು ಬೆಳಿಗ್ಗೆ 8.30ರಿಂದ ಪ್ರಾರಂಭವಾಗುತ್ತದೆ.

ಸ್ಪರ್ಧೆಗಳು:

ಡಿ.16 ರಂದು ಆನಗೋಳದ ಸಂತಮೀರಾ ಶಾಲೆಯಲ್ಲಿ ಬೆಳಗಾವಿ ನಗರದ ಹಾಗೂ ಗ್ರಾಮೀಣ ಭಾಗದ ಸ್ಪರ್ಧೆಗಳು ಆಯೋಜಿಸಲ್ಪಟ್ಟಿವೆ. ಡಿ.18 ರಂದು ಅದೇ ಶಾಲೆಯಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ಸ್ಪರ್ಧೆ ನಡೆಯಲಿದೆ. ರಾಜ್ಯಮಟ್ಟದ ಸ್ಪರ್ಧೆ ಡಿ.23 ರಂದು ಸಂತಮೀರಾ ಶಾಲೆಯಲ್ಲಿ ನಡೆಯಲಿದೆ. ಈ ಸ್ಪರ್ಧೆಯು 5ನೇ ತರಗತಿಯಿಂದ 12ನೇ ತರಗತಿಯ ಮಕ್ಕಳಿಗೆ ಸೀಮಿತವಾಗಿದೆ.

ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ `ಭಗವದ್ಗೀತೆಯಿಂದ ಜೀವನ ಸಮೃದ್ಧಿ’ ಎಂಬ ವಿಷಯವನ್ನು ನೀಡಲಾಗಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ `ಭಗವದ್ಗೀತೆಯಿಂದ ಭಾರತಕ್ಕೆ ವಿಶ್ವಮಾನ್ಯತೆ’ ಎಂಬ ವಿಷಯ ನೀಡಲಾಗಿದೆ. ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗೆ `ಪ್ರಜಾಪ್ರಭುತ್ವ ಸಂಪೂರ್ಣ ಸಾಕಾರಗೊಳ್ಳಲು ಪ್ರತಿಯೊಬ್ಬನಿಗೂ ಭಗವದ್ಗೀತೆ’ ಎಂಬ ವಿಷಯವನ್ನು ನೀಡಲಾಗಿದೆ. ಜಿಲ್ಲೆಗಳಲ್ಲಿ ವಿಜೇತರಾದವರು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ. ಭಾಗವಹಿಸಲಿಚ್ಛಿಸುವ ಅರ್ಹ ವಿದ್ಯಾರ್ಥಿಗಳು ಸಂಪರ್ಕಿಸಬೇಕಾದ ಹೆಸರು: ಸುಜಾತಾ ದಪ್ತರದಾರ- 8296660587, ಋತುಜಾ ಜಾಧವ್- 9900673391, ವೀಣಾ ಜೋಶಿ- 8618664881.

ವಿಚಾರಸಂಕಿರಣ:

ಈ ವರ್ಷದ ಅಭಿಯಾನದ ವಿಶೇಷವೆನೆಂದರೆ ಭಗವದ್ಗೀತೆ ಮತ್ತು ಕಾನೂನು, ಭಗವದ್ಗೀತೆ ಮತ್ತು ನಿರ್ವಹಣಾ ಶಾಸ್ತ್ರ ಹಾಗೂ ಗೀತಾಸಮನ್ವಯ ಎಂಬ ಅತ್ಯಂತ ಮಹತ್ವಪೂರ್ಣವಾದ 3 ವಿಚಾರ ಸಂಕಿರಣ ಆಯೋಜನೆ ಮಾಡಲಾಗಿದೆ. ಡಿಸೆಂಬರ್ 2ರಂದು ಕೋರ್ಟ್ ಆವರಣದಲ್ಲಿರುವ ನ್ಯಾಯವಾದಿಗಳ ಸಮುದಾಯ ಭವನದಲ್ಲಿ ನ್ಯಾಯವಾದಿಗಳಿಗೆ ಭಗವದ್ಗೀತೆ ಮತ್ತು ಕಾನೂನು ಎಂಬ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಡಿಸೆಂಬರ್ 9ರಂದು ಭರತೇಶ ಗ್ಲೋಬಲ್ ಬಿಸಿನೆಸ್ ಸ್ಕೂಲ್ ಆವರಣದಲ್ಲಿ ಭಗವದ್ಗೀತೆ ಮತ್ತು ನಿರ್ವಹಣಾ ಶಾಸ್ತ್ರ ಎಂಬ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ನಡೆಯಿತು.

ಡಿಸೆಂಬರ್ 18ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ಗೀತಾ ಸಮನ್ವಯ ಎಂಬ ವೈಶಿಷ್ಟ್ಯಪೂರ್ಣ ಕಾರ್ಯಕ್ರಮವು ಗುರುದೇವ ರಾನಡೆ ಮಂದಿರದಲ್ಲಿ ನಡೆಯಲಿದೆ. ನಮ್ಮ ದೇಶದಲ್ಲಿರುವ ಪ್ರಸಿದ್ಧ ಮತ -ಪಂಥಗಳ ನಡುವೆ ಗೀತೆಯ ದೃಷ್ಟಿಯಲ್ಲಿ ಸಮನ್ವಯ ಕಂಡುಕೊಳ್ಳುವುದು ಈ ಕಾರ್ಯಕ್ರಮದ ಆಶಯವಾಗಿದೆ. ಈ ಕಾರ್ಯುಕ್ರಮದಲ್ಲಿ ಡಾ.ಪ್ರಭಾಕರ ಕೋರೆ, ಡಾ. ಕೆ.ಎಲ್ ಶಂಕರನಾರಾಯಣ ಜೋಯಿಸ್ ಮೈಸೂರು, ಡಾ.ವಿ.ಎಸ್ ಮಾಳಿ ಬೆಳಗಾವಿ, ಡಾ.ಅನಂತ ಎಂ.ಕೆ ಬೆಂಗಳೂರು, ನಾಗೇಂದ್ರ ದಾಸ ಇಸ್ಕಾನ್ ಬೆಳಗಾವಿ, ಪಂ. ಶ್ರೀನಿಧಿ ಆಚಾರ್ ಜಮ್ನೀಸ್ ಬೆಂಗಳೂರು, ನಿತ್ಯಸ್ಥಾನಂದ ಸ್ವಾಮಿಗಳು ಬೆಂಗಳೂರು, ವಿ.ಮಧುಸೂದನ ಶಾಸ್ತ್ರಿ ಹಂಪಿಹೊಳಿ ಧಾರವಾಡ ಹಾಗೂ ಅನೇಕ ಸ್ವಾಮೀಜಿಗಳು, ವಿದ್ವಾಂಸರು, ಆಸ್ತಿಕರು ಭಾಗವಹಿಸಲಿದ್ದಾರೆ.

ಡಿ.23 ರಂದು ಬೆಳಗಾವಿಯ ಕಾಲೇಜು ರಸ್ತೆಯ ಲಿಂಗರಾಜ ಮೈದಾನದಲ್ಲಿ ರಾಜ್ಯಮಟ್ಟದ ಮಹಾಸಮರ್ಪಣೆ ನಡೆಯಲಿದೆ. ಇದು ಈ ವರ್ಷದ ಭಗವದ್ಗೀತಾ ಅಭಿಯಾನದ ಸಮಾರೋಪ ಕಾರ್ಯಕ್ರಮ. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಗರದ ವಿವಿಧ ಕಡೆಗಳಿಂದ ಈ ಮಹಾಸಮರ್ಪಣೆಗೆ ಆಗಮಿಸಲಿರುವ ಮಕ್ಕಳಿಗೆ, ಮಾತೆಯರಿಗೆ ಮತ್ತು ಮಹನೀಯರಿಗೆ ಬಸ್ ವ್ಯವಸ್ಥೆ ಮಾಡಲಾಗುತ್ತದೆ. ಸಭಾ ಕಾರ್ಯಕ್ರಮದ ನಂತರ ಆಕರ್ಷಕ ನೃತ್ಯರೂಪಕ ಪ್ರದರ್ಶನ ನಡೆಯಲಿದೆ ಎಂದು ಬೆಳಗಾವಿ ಜಿಲ್ಲಾ ಅಭಿಯಾನ ಸಮಿತಿಯ ಪ್ರಕಟಣೆ ತಿಳಿಸಿದೆ.